ಹೆಬ್ಬಾಳ ಜಂಕ್ಷನ್‌ನಲ್ಲಿ ಅಪಘಾತಕ್ಕೀಡಾದ ಕಾರು ಪ್ರದರ್ಶನ: ಅತಿ ವೇಗದ ಚಾಲನೆ ಅಪಾಯದ ಬಗ್ಗೆ ಜಾಗೃತಿ
ಬೆಂಗಳೂರು: ನಗರದಲ್ಲಿ ಅತಿ ವೇಗವಾಗಿ ವಾಹನ ಚಾಲನೆ ಮಾಡುವುದರಿಂದ ಸಂಭವಿಸುವ ರಸ್ತೆ ಅಪಘಾತಗಳು ಹಾಗೂ ಅಮೂಲ್ಯವಾದ ಜೀವಹಾನಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿಭಿನ್ನ ಹಾಗೂ ಗಮನ ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ನಗರದ ಪ್ರಮುಖ ಸಂಚಾರ ಕೇಂದ್ರವಾಗಿರುವ ಹೆಬ್ಬಾಳ ಜಂಕ್ಷನ್‌ನ ಮಧ್ಯಭಾಗದಲ್ಲಿ ಅಪಘಾತಕ್ಕೀಡಾದ ಕಾರನ್ನೇ ಪ್ರದರ್ಶಿಸುವ ಮೂಲಕ, ಅತಿ ವೇಗದ ಚಾಲನೆ ಎಷ್ಟು ಅಪಾಯಕಾರಿಯಾಗಿದೆ ಎಂಬುದನ್ನು ಸಂಚಾರ ಪೊಲೀಸರು ನೇರವಾಗಿ ಜನರಿಗೆ ತೋರಿಸಿದ್ದಾರೆ. ಈ ಕ್ರಮವು ವಾಹನ ಸವಾರರು ಹಾಗೂ ಪಾದಚಾರಿಗಳ ಗಮನ ಸೆಳೆದು, ರಸ್ತೆ ಸುರಕ್ಷತೆ ಬಗ್ಗೆ ಚಿಂತನೆ ಮಾಡುವಂತೆ ಮಾಡಿದೆ.

ಜಖಂ ಆದ ಕಾರು ಪ್ರದರ್ಶನ
ಹೆಬ್ಬಾಳ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರು ಸಂಪೂರ್ಣ ಜಖಂ ಆಗಿದ್ದು, ಅದನ್ನೇ ಸಾರ್ವಜನಿಕವಾಗಿ ಪ್ರದರ್ಶಿಸುವ ಮೂಲಕ "ಅತಿ ವೇಗ ಎಂದರೆ ಅಪಾಯ" ಎಂಬ ಸಂದೇಶವನ್ನು ಸಾರಿದ್ದಾರೆ. ಸಂಚಾರ ದಟ್ಟಣೆ ಹೆಚ್ಚಿರುವ ಜಂಕ್ಷನ್‌ನಲ್ಲಿ ಈ ಕಾರನ್ನು ಇಟ್ಟಿರುವುದರಿಂದ, ಪ್ರತಿದಿನ ಲಕ್ಷಾಂತರ ಸವಾರರು ಇದನ್ನು ನೋಡಿ ಎಚ್ಚರಿಕೆ ವಹಿಸುವಂತಾಗಿದೆ.
ಹೆಬ್ಬಾಳ ಸಂಚಾರ ಪೊಲೀಸರ ಈ ವಿಶಿಷ್ಟ ಜಾಗೃತಿ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. "ಇಂತಹ ನೈಜ ದೃಶ್ಯಗಳು ಜನರ ಮನಸ್ಸಿನಲ್ಲಿ ಹೆಚ್ಚು ಪರಿಣಾಮ ಬೀರುತ್ತವೆ", "ಫೈನ್ ಹಾಕುವುದಕ್ಕಿಂತಲೂ ಇಂತಹ ಜಾಗೃತಿ ಹೆಚ್ಚು ಉಪಯುಕ್ತ" ಎಂಬ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ.
ವಿಡಿಯೋ ವೈರಲ್
ಈ ಜಾಗೃತಿ ಕಾರ್ಯದ ವಿಡಿಯೋ ಮತ್ತು ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಬೆಂಗಳೂರು ಸಂಚಾರ ಪೊಲೀಸರ ಕ್ರಮವನ್ನು ಶ್ಲಾಘಿಸುತ್ತಿದ್ದಾರೆ. ಅನೇಕರು ಅತಿ ವೇಗ ಚಾಲನೆಯಿಂದ ಆಗುವ ಅಪಾಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದು, ರಸ್ತೆ ಸುರಕ್ಷತೆ ಪಾಲನೆ ಮಾಡುವ ಅಗತ್ಯವಿದೆ ಎಂಬ ಸಂದೇಶವನ್ನು ಹಂಚಿಕೊಳ್ಳುತ್ತಿದ್ದಾರೆ. ಅಪಘಾತ ತಡೆಯುವ ಉದ್ದೇಶದಿಂದ ಕೈಗೊಂಡಿರುವ ಹೆಬ್ಬಾಳ ಸಂಚಾರ ಪೊಲೀಸರ ಈ ವಿಭಿನ್ನ ಪ್ರಯತ್ನ, ಬೆಂಗಳೂರು ನಗರದಲ್ಲಿ ರಸ್ತೆ ಸುರಕ್ಷತೆ ಕುರಿತು ಹೊಸ ಜಾಗೃತಿಗೆ ಕಾರಣವಾಗಿದ್ದು, ಇತರ ಪ್ರದೇಶಗಳಿಗೂ ಮಾದರಿಯಾಗುವಂತಿದೆ.
ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಮತ್ತು ಅತಿ ವೇಗ ಚಾಲನೆಯಿಂದ ಸಂಭವಿಸುವ ಜೀವಹಾನಿ ಪ್ರಕರಣಗಳ ಹಿನ್ನೆಲೆಯಲ್ಲಿ, ಸಂಚಾರ ಪೊಲೀಸರು ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ. ಅತಿ ವೇಗವಾಗಿ ವಾಹನ ಚಾಲನೆ ಮಾಡುವುದೇ ಅಪಘಾತಗಳಿಗೆ ಪ್ರಮುಖ ಕಾರಣವಾಗಿದ್ದು, ಇದು ಚಾಲಕರಷ್ಟೇ ಅಲ್ಲದೆ ಪಾದಚಾರಿಗಳು ಮತ್ತು ಇತರ ರಸ್ತೆ ಬಳಕೆದಾರರ ಜೀವಕ್ಕೂ ಭಾರೀ ಅಪಾಯವನ್ನುಂಟು ಮಾಡುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಳ್ಳೆಯ ಬೆಳವಣಿಗೆ!!! ಜಾಗೃತಿ ಮೂಡಿಸುವ ಒಂದು ಮಾರ್ಗ, ಜನರು ಮನೆಗೆ ಹಿಂತಿರುಗುವವರೆಗೆ ಜೀವನ ಮತ್ತು ಕುಟುಂಬದ ಮಹತ್ವವನ್ನು ಅರಿತುಕೊಳ್ಳುತ್ತಾರೆಂದು ಭಾವಿಸುತ್ತೇನೆ.!🙌🏿 pic.twitter.com/NVD3VwV2XV
— ₘₒₜᵢᵥₐₜₑd!ₗᵢₗ!Dₑₘₒₙ (@AryakavyaA) January 22, 2026
ಒಂದು ಕ್ಷಣದ ಅಜಾಗರೂಕತೆ ಅಥವಾ ನಿಯಂತ್ರಣ ತಪ್ಪಿದ ವೇಗವು ಜೀವಪಾಯಕ್ಕೆ ಕಾರಣವಾಗುತ್ತದೆ. ರಸ್ತೆ ಅಪಘಾತದ ಹಿಂದೆ ಕೇವಲ ವಾಹನ ಹಾನಿಯಷ್ಟೇ ಅಲ್ಲ, ಕುಟುಂಬಗಳ ಭವಿಷ್ಯ, ಜೀವನೋಪಾಯ ಮತ್ತು ಸಂತೋಷವೂ ನಾಶವಾಗುತ್ತದೆ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ನೀಡಿದ್ದಾರೆ. ಹೆಲ್ಮೆಟ್, ಸೀಟ್‌ಬೆಲ್ಟ್ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ. ಟ್ರಾಫಿಕ್ ನಿಯಮಗಳು ದಂಡ ವಿಧಿಸಲು ಅಲ್ಲ, ಜನರ ಜೀವ ರಕ್ಷಿಸಲು ರೂಪಿಸಲ್ಪಟ್ಟಿರುವುದು ಎಂಬುದನ್ನು ಪ್ರತಿಯೊಬ್ಬ ವಾಹನ ಸವಾರರೂ ಅರಿಯಬೇಕು ಎಂದು ಹೇಳಿದ್ದಾರೆ.
ವೇಗ ಕಡಿಮೆ ಮಾಡಿದರೆ ಕೆಲ ನಿಮಿಷ ತಡವಾಗಬಹುದು, ಆದರೆ ಜೀವ ಉಳಿಯುತ್ತದೆ. ಸುರಕ್ಷಿತ ಚಾಲನೆ ಎಂದರೆ ನಿಮ್ಮ ಕುಟುಂಬಕ್ಕೆ ಸುರಕ್ಷಿತ ಭವಿಷ್ಯ ನೀಡಿದಂತೆ ಎಂದು ಸಂಚಾರ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ನಗರದಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿಯಾನಗಳನ್ನು ನಡೆಸಲು ಪೊಲೀಸರು ಮುಂದಾಗಿದ್ದು, ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಅಪಘಾತಗಳನ್ನು ಕಡಿಮೆ ಮಾಡಲು ಕೈಜೋಡಿಸಬೇಕು ಎಂದು ಕೋರಿದ್ದಾರೆ.












Click it and Unblock the Notifications