Bengaluru Rain : ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಹೈರಾಣದ ಜನರು; ಬಿಬಿಎಂಪಿಗೆ ಹಿಡಿಶಾಪ
ಬೆಂಗಳೂರು, ಏಪ್ರಿಲ್ 16: ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದ್ದು, ಪ್ರತಿನಿತ್ಯ ಸಂಜೆ ಸುರಿಯುತ್ತಿರುವ ಮಳೆಯಿಂದ ಜನರು ಹೈರಾಣಾಗಿದ್ದಾರೆ. ಅಲ್ಲದೆ ಅಲ್ಲಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ. ಜನರು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ವಿಲ್ಸನ್ ಗಾರ್ಡನ್, ಕೆ.ಆರ್. ಮಾರುಕಟ್ಟೆ, ಎಂ.ಜಿ. ರಸ್ತೆ, ಜಯನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಗುರುವಾರ ಮತ್ತು ಶುಕ್ರವಾರ ಸಂಜೆ ಸುರಿದ ಭಾರೀ ಮಳೆಯಿಂದಾಗಿ 300ಕ್ಕೂ ಅಧಿಕ ಮನೆಗಳಿಗೆ ನೀರು ನಗರದಲ್ಲಿ ಮಳೆಯಾಗಿದೆ. ನುಗ್ಗಿ ಗೃಹೋಪಯೋಗಿ ವಸ್ತುಗಳು ಚರಂಡಿ ಪಾಲಾಗಿದ್ದು, ಕಾರು, ಬೈಕ್ ಕೊಚ್ಚಿ ಹೋಗಿವೆ. ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಚಾವಣಿ ಒಡೆದು ರಕ್ಷಿಸಲಾಗಿದೆ. ನಾಲ್ಕು ಸಾವಿರಕ್ಕೂ ಹೆಚ್ಚು ನರ್ಸರಿ ಸಸಿಗಳು ನೆಲಸಮವಾಗಿದೆ.
ಸತತ ಮೂರು ದಿನ ಸುರಿದ ಮಳೆಗೆ ದಕ್ಷಿಣ ಬೆಂಗಳೂರಿನ ಉತ್ತರಹಳ್ಳಿ, ಕಾಮಾಕ್ಯ ಚಿತ್ರಮಂದಿರ, ಗಣೇಶ ಮಂದಿರ ವಾರ್ಡ್ ಹಾಗೂ ಚಿಕ್ಕಲಸಂದ್ರ ವಾರ್ಡ್‌ನ ವ್ಯಾಪ್ತಿಯಲ್ಲಿ ನಿವಾಸಿಗಳು ಅಕ್ಷರಶಃ ನಲುಗಿ ಹೋಗಿದ್ದಾರೆ. ಹಾಸಿಗೆ, ದಿಂಬು, ಬಟ್ಟೆ, ಟಿವಿ, ಫ್ರಿಜ್, ವಾಷಿಂಗ್ ಮೆಷಿನ್, ಮಕ್ಕಳ ಪಠ್ಯ ಪುಸಕ್ತ, ಬ್ಯಾಗ್, ದಿನಸಿ ಪದಾರ್ಥಗಳು ನೀರು ಪಾಲಾಗಿವೆ.

ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡವು. ಬೈಕ್ ಸವಾರರು ನೀರು ತುಂಬಿದ ರಸ್ತೆಗಳಲ್ಲಿ ಸಂಚಾರ ನಡೆಸಲು ಪರದಾಟ ನಡೆಸಿದರು. ಉತ್ತರಹಳ್ಳಿಯಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
2 ತಾಸಲ್ಲಿ 7.3 ಸೆಂ.ಮೀ. ಮಳೆ
ಇನ್ನು ಗುರುವಾರ ರಾತ್ರಿ ಕೇವಲ 2 ಗಂಟೆಯಲ್ಲಿ ಕಾಮಾಕ್ಯ ಚಿತ್ರಮಂದಿರದ ಸುತ್ತಮುತ್ತಲಿನ ಪ್ರದೇಶದಲ್ಲಿ ಬರೋಬ್ಬರಿ 7.3 ಸೆಂ.ಮೀ. ಮಳೆಯಾದ ಹಿನ್ನೆಲೆಯಲ್ಲಿ ರಾಜಕಾಲುವೆಗಳಲ್ಲಿ ನೀರಿನ ಹರಿವು ಹೆಚ್ಚಾಗಿ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿ ಅನಾಹುತ ಸಂಭವಿಸಿದೆ ಎಂದು ಬಿಬಿಎಂಪಿ ಹೇಳಿದೆ.

ಮಹಾನಗರ ಪಾಲಿಕೆಯಿಂದಲೇ ಮನೆಗಳ ಸ್ವಚ್ಛತೆ
ನೀರು ನುಗ್ಗಿರುವ ಪ್ರದೇಶ ಸ್ವಚ್ಛಗೊಳಿಸುವ ಸಲುವಾಗಿ ಪ್ರತಿ ಮನೆಗೆ ಇಬ್ಬರು ಪೌರಕಾರ್ಮಿಕರನ್ನು ಬಿಬಿಎಂಪಿ ನಿಯೋಜಿಸಲಾಗಿತ್ತು. ನಿವಾಸಿಗಳು ಹಾಗೂ ಪೌರಕಾರ್ಮಿಕರು ಸೇರಿ ಮನೆ ಸ್ವಚ್ಛ ಮಾಡಿದ ದೃಶ್ಯಗಳು ಶುಕ್ರವಾರ ಇಡೀ ದಿನ ಕಂಡು ಬಂದವು. ಒಟ್ಟಾರೆ 150 ಸಿಬ್ಬಂದಿ, 8 ಟ್ರ್ಯಾಕ್ಟರ್, 4 ಜೆಸಿಬಿ ಯಂತ್ರ ಹಾಗೂ 1 ರೊಬೋಟಿಕ್ ಯಂತ್ರದ ಬಳಕೆ ಮಾಡಿಕೊಳ್ಳಲಾಗಿತ್ತು. ಸ್ಥಳೀಯ ನಿವಾಸಿಗಳಿಗೆ ತಾತ್ಕಾಲಿಕವಾಗಿ ಊಟ, ನೀರಿನ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ ಪವಾಡ ರೀತಿಯಲ್ಲಿ ಅನಾರೋಗ್ಯ ಪೀಡಿತ ಕುಮಾರ್ (45) ಎಂಬ ವ್ಯಕ್ತಿಯನ್ನು ಸ್ಥಳೀಯರು ಛಾವಣಿ ಒಡೆದು ರಕ್ಷಣೆ ಮಾಡಲಾಗಿದೆ.
ಪರಿಹಾರ ವಿತರಣೆಗೆ ಸಮೀಕ್ಷೆಗೆ ಸೂಚನೆ
ಬೆಂಗಳೂರಿನಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಉಂಟಾದ ಹಾನಿ ಕುರಿತು ಸಮೀಕ್ಷೆ ನಡೆಸಿ ಪರಿಹಾರ ನೀಡಲು ಸೂಕ್ತ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದ ವಿವಿಧ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ಪಾಲಿಕೆ ವಿವಿಧ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಗೌರವ್ ಗುಪ್ತಾ, ಗುರುವಾರದ ಮಳೆಗೆ 300ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಮನೆಗಳಿಗೆ ಮೂರು ಅಡಿಯಷ್ಟು ನೀರು ನಿಂತು ಗೃಹೋಪಯೋಗಿ ವಸ್ತುಗಳು ಹಾಳಾಗಿವೆ. ಈ ಬಗ್ಗೆ ಕೂಡಲೇ ಕಂದಾಯ ವಿಭಾಗದ ಅಧಿಕಾರಿಗಳು ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ನಿರ್ದೇಶಿಸಿದ್ದಾರೆ.
ನಿಯಂತ್ರಣಾ ಕೊಠಡಿ ಆರಂಭಕ್ಕೆ ನಿರ್ದೇಶನ
ಪಾಲಿಕೆ ವ್ಯಾಪ್ತಿಯಲ್ಲಿ 9 ಶಾಶ್ವತ ನಿಯಂತ್ರಣ ಕೊಠಡಿಗಳಿದ್ದು, ಮಳೆಗಾಲದಲ್ಲಿ 63 ತಾತ್ಕಾಲಿಕ ಕೊಠಡಿಗಳನ್ನು ಸ್ಥಾಪಿಸಿಕೊಳ್ಳಲಾಗುತ್ತದೆ. ಅಗತ್ಯಕ್ಕೆ ಅನುಗುಣವಾಗಿ ವಿಭಾಗೀಯ ಮಟ್ಟದಲ್ಲಿ ಕೂಡಲೇ ನಿಯಂತ್ರಣ ಕೊಠಡಿ ಸ್ಥಾಪಿಸಿ. ಜತೆಗೆ ಮರಗಳನ್ನು ತೆರವುಗೊಳಿಸುವ ಸಲುವಾಗಿ 21 ತಂಡಗಳಿದ್ದು, ರಾತ್ರಿ ವೇಳೆ 8, ಹಗಲಿನ ವೇಳೆ 13 ತಂಡಗಳನ್ನು ನಿಯೋಜನೆ ಮಾಡಲು ಗೌರವ್ ಗುಪ್ತಾ ಸೂಚಿಸಿದರು.
ಬಿಬಿಎಂಪಿಗೆ ದೂರು ಕೊಡುವ ಸಂಖ್ಯೆಗಳು
ಮಳೆಯಿಂದ ಆದ ಹಾನಿ ಕುರಿತು ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು ಅಥವಾ ನಿಮ್ಮ ವಾರ್ಡ್ ಕಚೇರಿಗೆ ದೂರು ನೀಡಬಹುದು. ಇ-ಮೇಲ್ ಮೂಲಕವೂ ದೂರು ನೀಡಬಹುದಾಗಿದೆ.
Recommended Video

* ಬಿಬಿಎಂಪಿ ಮುಖ್ಯ ಕಚೇರಿ ದೂರವಾಣಿ ಸಂಖ್ಯೆ- 808-22660000
* ಬೊಮ್ಮನಹಳ್ಳಿ ವಲಯ 9480683433, 25732628
* ದಾಸರಹಳ್ಳಿ ವಲಯ 9480685855, 22975901
* ಪೂರ್ವ ವಲಯ 9480685619, 22975801
* ಮಹದೇವಪುರ ವಲಯ 9480685464, 28511166
* ಆರ್. ಆರ್. ನಗರ 9480683192, 28605642
* ದಕ್ಷಿಣ ವಲಯ 9901462568, 22975701
* ಪಶ್ಚಿಮ ವಲಯ 9480685411, 22975648
* ಯಲಹಂಕ ವಲಯ 9480685228, 22975942












Click it and Unblock the Notifications