ಬೆಂಗಳೂರಲ್ಲಿ ಗುಡುಗು ಸಹಿತ ಭಾರೀ ಮಳೆ
ಬೆಂಗಳೂರು, ಮೇ 25; ಬೆಂಗಳೂರು ನಗರದಲ್ಲಿ ಮಂಗಳವಾರ ಸಂಜೆ ಧಾರಾಕಾರ ಮಳೆಯಾಗಿದೆ. ಇನ್ನೂ ಎರಡು ದಿನಗಳ ಕಾಲ ನಗರದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಂಗಳವಾರ ಸಂಜೆ 4 ಗಂಟೆ ವೇಳೆಗೆ ನಗರದ ಕೆಲವು ಭಾಗದಲ್ಲಿ ಸಾಧಾರಣ ಮಳೆ ಸುರಿಯಿತು. ಬಳಿಕ ಬಿಸಿಲು ಕಾಣಿಸಿಕೊಂಡಿತ್ತು. 5.30ರ ಬಳಿಕ ಮತ್ತೆ ಮಳೆ ಆರಂಭವಾಗಿದೆ. ಸತತ ಅರ್ಧಗಂಟೆಯಿಂದ ಬಿರುಸಿನಿಂದ ಮಳೆ ಸುರಿಯುತ್ತಿದೆ.
ಗುಡುಗು, ಸಿಡಿಲಿನಿಂದ ಕೂಡಿದ ಮಳೆ ನಗರದ ವಿವಿಧ ಬಡಾವಣೆಗಳಲ್ಲಿ ಸುರಿಯುತ್ತಿದ್ದು, ಹಲವು ರಸ್ತೆಗಳು ಜಲಾವೃತವಾಗಿದೆ. ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ವಾಹನಗಳ ಸಂಚಾರ ಕಡಿಮೆ ಇದೆ. ಇದರಿಂದ ಹೆಚ್ಚು ಜನರಿಗೆ ತೊಂದರೆಯಾಗಿಲ್ಲ.

ಜಯನಗರ, ಬಸವನಗುಡಿ, ಮೆಜೆಸ್ಟಿಕ್, ಶಿವಾಜಿನಗರ, ಜೆ. ಪಿ. ನಗರ, ವಿಜಯನಗರ, ದೀಪಾಂಜಲಿ ನಗರ, ಕೋರಮಂಗಲ, ಮಾಗಡಿ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮಳೆಯಾಗುತ್ತಿದೆ.
ಕರ್ನಾಟಕದ ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮೇ 26ರ ತನಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿತ್ತು. ಬೆಂಗಳೂರು ನಗರದಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ.
ಕಳೆದ ವಾರ ಬೆಂಗಳೂರು ನಗರದಲ್ಲಿ ಮಳೆಯಾಗಿತ್ತು. ಮೂರು ದಿನಗಳಿಂದ ಮೋಡ ಕವಿದ ವಾತಾವರಣ ನಗರದಲ್ಲಿ ಮುಂದುವರೆದಿತ್ತು. ಆಗಾಗ ತುಂತುರು ಮಳೆಯಾಗಿತ್ತು. ಮಂಗಳವಾರ ಬೆಳಗ್ಗೆಯಿಂದಲೇ ಉಷ್ಣಾಂಶ ಹೆಚ್ಚಾಗಿದ್ದು, ಸಂಜೆ ಮಳೆಯಾಗಿದೆ.












Click it and Unblock the Notifications