Bengaluru Rains : ಮುಂಗಾರು ಆರಂಭ, ಬೆಂಗಳೂರು ನಗರದಲ್ಲಿ ಮಳೆ
ಬೆಂಗಳೂರು, ಮೇ 30; ಕರ್ನಾಟಕಕ್ಕೆ ನೈಋತ್ಯ ಮುಂಗಾರು ಆಗಮಿಸಲು ದಿನಗಣನೆ ಆರಂಭವಾಗಿದೆ. ಮುಂಗಾರು ಸ್ವಾಗತಿಸುವಂತೆ ಉದ್ಯಾನ ನಗರಿ ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಮಳೆ ಆರಂಭವಾಗಿದೆ.
ಸೋಮವಾರ ರಾತ್ರಿ 8.30ರ ಸುಮಾರಿಗೆ ನಗರದಲ್ಲಿ ಮಳೆ ಆರಂಭವಾಗಿದೆ. ಜಯನಗರ, ಹನುಮಂತನಗರ, ವಿದ್ಯಾಪೀಠ ಸರ್ಕಲ್, ರಾಮಕೃಷ್ಣ ಆಸ್ಪತ್ರೆ, ಬನಶಂಕರಿ, ಕತ್ರಿಗುಪ್ಪೆ, ಮೈಸೂರು ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆಯಾಗಿದೆ.
ಕಚೇರಿ ಕೆಲಸ ಮುಗಿಸಿ ಮನೆಗೆ ಹೊರಟವರು ಮಳೆಯಲ್ಲಿ ಸಿಲುಕಿದ್ದಾರೆ. ಬೈಕ್ ಸವಾರರು ಮಳೆಯಿಂದ ತಪ್ಪಿಸಿಕೊಳ್ಳಲು ಬಸ್ ನಿಲ್ದಾಣ, ಫ್ಲೈ ಓವರ್ ಕೆಳೆಗೆ ಆಶ್ರಯ ಪಡೆದರು.

ಈಗಾಗಲೇ ನೈಋತ್ಯ ಮುಂಗಾರು ಕೇರಳಕ್ಕೆ ಆಗಮಿಸಿದೆ. ಕರ್ನಾಟಕಕ್ಕೆ ಜೂನ್ 4ರಂದು ಮುಂಗಾರು ಆಗಮಿಸುವ ನಿರೀಕ್ಷೆ ಇದೆ. ಇದಕ್ಕೆ ಪೂರ್ವಭಾವಿಯಾಗಿ ನಗರದಲ್ಲಿ ಸೋಮವಾರ ಮಳೆಯಾಗಿದೆ.
ಬೆಂಗಳೂರು ನಗರದಲ್ಲಿ ಕಳೆದ ವಾರ ಮುಂಗಾರು ಪೂರ್ವ ಮಳೆ ಅವಾಂತರ ಸೃಷ್ಟಿ ಮಾಡಿತ್ತು. ಬಳಿಕ ಮಳೆ ಬಿಡುವು ನೀಡಿತ್ತು. ಸೋಮವಾರ ಮತ್ತೆ ಮಳೆ ಆರಂಭವಾಗಿದೆ. ಈ ಮೂಲಕ ಮುಂಗಾರು ಎದುರಿಸಲು ಸಿದ್ಧರಾಗಿ ಎಂಬ ಸಂದೇಶವನ್ನು ಮಳೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ 8ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.
ಮುಂಗಾರು ಪೂರ್ವ ಮಳೆ ಪರಿಸ್ಥಿತಿಯನ್ನು ಬಿಬಿಎಂಪಿ ನಿಭಾಯಿಸಿದ ರೀತಿ ಬಗ್ಗೆ ಬೆಂಗಳೂರಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಮುಂಗಾರು ಮಳೆಯನ್ನು ಬಿಬಿಎಂಪಿ ಹೇಗೆ ಎದುರಿಸಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications