ಬೆಂಗಳೂರು; ಗುಡುಗು, ಸಿಡಿಲು ಸಹಿತ ಮಳೆಯ ಆರ್ಭಟ
ಬೆಂಗಳೂರು, ಜೂನ್ 03; ಬೆಂಗಳೂರು ನಗರದಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗುತ್ತಿದೆ. ಗುರುವಾರ ಮಧ್ಯಾಹ್ನದಿಂದ ಮೂರು ಬಾರಿ ಮಳೆ ಸುರಿದಿದ್ದು ಇನ್ನೂ ಎರಡು ದಿನ ಮಳೆ ಮುಂದುವರೆಯುವ ಮುನ್ಸೂಚನೆ ನೀಡಲಾಗಿದೆ.
ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾದ ಮಳೆ ಒಂದು ಗಂಟೆಗಳ ಕಾಲ ಸುರಿಯಿತು. ಬಳಿಕ 7.30ರ ಸುಮಾರಿಗೆ 2ನೇ ಬಾರಿಗೆ ಮಳೆ ಬಂತು. ರಾತ್ರಿ 9 ಗಂಟೆ ಸುಮಾರಿಗೆ ಆರಂಭವಾದ ಮಳೆ ಇನ್ನೂ ಸುರಿಯುತ್ತಲೇ ಇದೆ.
ಮಳೆಯ ಜೊತೆಗೆ ಗುಡುಗು, ಸಿಡಿಲಿನ ಆರ್ಭಟ ಜೋರಾಗಿದೆ. ಜೋರಾಗಿ ಗಾಳಿಯೂ ಬೀಸುತ್ತಿದ್ದು, ಕೆಲವು ಬಡಾವಣೆಗಳಲ್ಲಿ ಮರಗಳು ಧರೆಗುರುಳಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಮಲ್ಲೇಶ್ವರಂ, ವಿಜಯನಗರ, ಮಾಗಡಿ ರಸ್ತೆ, ನಾಯಂಡಹಳ್ಳಿ, ಹೊಸಕೆರೆಹಳ್ಳಿ, ಜಯನಗರ, ಬಸವನಗುಡಿ, ಹನುಂತನಗರ, ವಿದ್ಯಾಪೀಠ ವೃತ್ತ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮಳೆಯಾಗುತ್ತಿದೆ.
ಲಾಕ್‌ಡೌನ್ ಪರಿಣಾಮವಾಗಿ ವಾಹನಗಳ ಸಂಚಾರ ಕಡಿಮೆ ಇರುವುದರಿಂದ ಮಳೆಯಿಂದಾಗಿ ಹೆಚ್ಚಿನ ಜನರಿಗೆ ತೊಂದರೆಯಾಗಿಲ್ಲ. ಮಳೆಗಿಂತ ಹೆಚ್ಚಾಗಿ ಸಿಡಿಲಿಗೆ ಜನರು ಬೆಚ್ಚಿಬಿದ್ದಿದ್ದಾರೆ.
ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಬೆಂಗಳೂರು ನಗರದಲ್ಲಿ ಮೂರು ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬುಧವಾರ ತಡರಾತ್ರಿ ಮತ್ತು ಗುರುವಾರ ದಾವಣಗೆರೆ, ಚಿತ್ರದುರ್ಗ, ವಿಜಯನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ.
ಒಂದು ಕಡೆ ಚಂಡಮಾರುತದ ಪ್ರಭಾವದಿಂದ ಮಳೆಯಾಗುತ್ತಿದೆ. ಮತ್ತೊಂದು ಕಡೆ ನೈಋತ್ಯ ಮುಂಗಾರು ಕೇರಳ ಪ್ರವೇಶ ಮಾಡಿದೆ. ಇನ್ನೆರಡು ದಿನದಲ್ಲಿ ಕರ್ನಾಟಕಕ್ಕೆ ಮುಂಗಾರು ಆಗಮಿಸುವ ಸಾಧ್ಯತೆ ಇದ್ದು, ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ.
ಮುಂಗಾರು ಮಳೆ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ಬೆಳಗ್ಗೆ ಅಧಿಕಾರಿಗಳ ಸಭೆ ನಡೆದಿತ್ತು.












Click it and Unblock the Notifications