Breaking: ಬೆಂಗಳೂರಿಗೆ 3ದಿನ ಜೋರು ಮಳೆ, ಶುಕ್ರವಾರ 'ಯೆಲ್ಲೋ ಅಲರ್ಟ್'
ಬೆಂಗಳೂರು, ಅಕ್ಟೋಬರ್ 13: ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರದವರೆಗೆ ಧಾರಾಕಾರ ಮಳೆ ಮುಂದುವರಿಯಲಿದೆ. ಶುಕ್ರವಾರ ಒಂದು ದಿನ ಅತ್ಯಧಿಕ ಮಳೆ ನಿರೀಕ್ಷೆ ಕಾರಣಕ್ಕೆ ಬೆಂಗಳೂರಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ನೀಡಿರುವ ಮಳೆ ಮುನ್ಸೂಚನೆ ಪ್ರಕಾರ, ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಳೆ ಚುರುಕುಗೊಂಡಿದ್ದು, ಶುಕ್ರವಾರ ನಗರದ ಒಂದೆರಡು ಕಡೆಗಳಲ್ಲಿ ಮಾತ್ರ ಗುಡುಗು ಸಹಿತ ಸಾಧಾರಣದಿಂದ ಜೋರು ಮಳೆ ಅಬ್ಬರಿಸುವ ನಿರೀಕ್ಷೆ ಇದೆ. ಹೀಗಾಗಿ ಅಂದು 'ಯೆಲ್ಲೋ ಅಲರ್ಟ್' ಎಚ್ಚರಿಕೆ ನೀಡಿದೆ.
ಗುರುವಾರ ಸಂಜೆ ನಂತರವೇ ಕೆಲವು ಪ್ರದೇಶಗಳಲ್ಲಿ ತುಂತುರು ಮಳೆ ಆಗುವ ಸಾಧ್ಯತೆ ಇದೆ. ಇದೇ ಮಳೆ ಸೋಮವಾರದವರೆಗೂ ಮುಂದುವರಿದು ನಂತರ ದುರ್ಬಲಗೊಳ್ಳಲಿದೆ. ಶನಿವಾರ ಮತ್ತು ಭಾನುವಾರ ನಗರದ ಬಹುತೇಕ ಬಡಾವಣೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ. ಈ ಅವಧಿಯಲ್ಲಿ ತೇವಾಂಶ ಭರಿತ ಗಾಳಿ ಬೀಸುವುದರಿಂದ ಚಳಿಯು ಹಂತ ಹಂತವಾಗಿ ಏರಿಕೆ ಆಗಲಿದೆ. ಗರಿಷ್ಠ ತಾಪಮಾನ 27ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ.

"ನಗರದಲ್ಲಿ ನಿತ್ಯ ಸಂಜೆ ನಂತರ ಬರುತ್ತಿದ್ದ ತುಂತುರು ಮಳೆ ಕಳೆದ ಎರಡು ದಿನದಿಂದ ಸ್ವಲ್ಪ ಮಟ್ಟಿಗೆ ವಿರಾಮ ಪಡೆದಿದೆ. ವಾತಾವರಣದಲ್ಲಿ ಅಷ್ಟಾಗಿ ಉಷ್ಣಾಂಶ ದಾಖಲಾಗದಿದ್ದರೂ ಆಗಾಗ ಬಿಸಿಲು ಕಂಡು ಬಂತಾದರೂ ನಗರದಾದ್ಯಂತ ಮಬ್ಬು ವಾತಾವರಣವೇ ಮುಂದುವರಿದೆ. ಇದರ ಹೊರತು ವಾತಾವರಣದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳು ಇಲ್ಲ," ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಹಗದೂರಲ್ಲಿ ಅಧಿಕ 44.5 ಮಿ.ಮಿ. ಮಳೆ
ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24ಗಂಟೆಯಲ್ಲಿ ಬೆಂಗಳೂರಿನಲ್ಲಿ ಹಗುರವಾಗಿ ಮಳೆ ಬಿದ್ದಿದೆ. ಈ ಪೈಕಿ ಹಗದೂರಿನಲ್ಲಿ ಅಧಿಕ 44.5 ಮಿ.ಮಿ. ಮಳೆ ದಾಖಲಾಗಿದೆ. ಉಳಿದಂತೆ ದೊಡ್ಡಾನೆಕ್ಕುಂದಿಯಲ್ಲಿ 22.5ಮಿ.ಮಿ., ವರ್ತೂರು 19.5ಮಿ.ಮಿ., ಎಚ್‌ಎಎಲ್ ವಿಮಾನ ನಿಲ್ದಾಣ ಮತ್ತು ಎಚ್ ಗೊಲ್ಲಹಳ್ಳಿ ತಲಾ 15ಮಿ.ಮಿ., ಹೂಡಿ 13.5ಮಿ.ಮಿ., ಕಾಡುಗೋಡಿ 12ಮಿ.ಮಿ., ಅಂಜನಾಪುರ 11ಮಿ.ಮಿ. ಮತ್ತು ದೊಮ್ಮಲೂರಲ್ಲಿ 10ಮಿ.ಮೀ. ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ವರದಿ ತಿಳಿಸಿದೆ.












Click it and Unblock the Notifications