'ಜನರು ಸಮೂಹ ಸನ್ನಿಗೆ ಸಿಲುಕಿದ್ದಾರೆ, ಸೀಲ್‌ಡೌನ್ ಕುರಿತು ಸ್ಪಷ್ಟತೆ ಕೊಡಿ'
ಬೆಂಗಳೂರು, ಏ. 11: ಕೊರೊನಾ ವೈರಸ್ ಹೊಡೆತಕ್ಕೆ ಇಡೀ ಜಗತ್ತು ಸಂಕಷ್ಟಕ್ಕೆ ಸಿಲುಕಿದೆ. ನಿಖರ ಚಿಕಿತ್ಸೆ ಇಲ್ಲದ್ದರಿಂದ ಕೋವಿಡ್ 19 ರೋಗ ಹರಡದಂತೆ ತಡೆಯಲು ಲಾಕ್‌ಡೌನ್ ಜಾರಿಗೆ ತರಲಾಗಿದೆ. ಇಡೀ ದೇಶ ಲಾಕ್‌ಡೌನ್‌ನಿಂದ ಸ್ತಬ್ಧವಾಗಿದೆ. ಜನರು ಮುಂದೆನಾಗುತ್ತದೆಯೊ ಎಂಬ ಆತಂಕದಲ್ಲಿದ್ದಾರೆ. ಕೊರೊನಾ ವೈರಸ್ ಎಂಬ ಮಹಾಮಾರಿಯ ಕರಾಳ ಮುಖ ನೋಡಿರುವ ಜನರು ಕೂಡ ಲಾಕ್‌ಡೌನ್ ಜಾರಿಯಲ್ಲಿರಲಿ ಎಂದೆ ಕೇಳುತ್ತಿದ್ದಾರೆ. ದೇಶಾದ್ಯಂತ ಈಗಾಗಲೇ 7,447 ಜನರಲ್ಲಿ ಸೋಂಕು ದೃಢಪಟ್ಟಿದೆ, 239 ಜನರು ಕೊರೊನಾ ರೋಗಕ್ಕೆ ಬಲಿಯಾಗಿದ್ದಾರೆ. ಜೊತೆಗೆ ಸಮಾಧಾನಕರ ಸಂಗತಿ ಎಂದರೆ 643 ಸೋಂಕಿತರು ಗುಣಮುಖರಾಗಿದ್ದಾರೆ.
ಸೋಂಕು ಹರಡದಂತೆ ತಡೆಯಲು ಲಾಕ್‌ಡೌನ್ ಜೊತೆಗೆ ಸೀಲ್‌ಡೌನ್ ಜಾರಿಗೆ ತರಲು ಸರ್ಕಾರ ಮುಂದಾಗಿರುವುದು ಜನರಲ್ಲಿ ಹೊಸ ಆತಂಕ ಸೃಷ್ಟಿಸಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸೀಲ್‌ಡೌನ್‌ನಿಂದ ಜನರು ಸಮೂಹ ಸನ್ನಿಗೆ ಸಿಲುಕಿದ್ದಾರೆ
ಸೀಲ್‌ಡೌನ್‌ಗೆ ಸಂಬಂಧಿಸಿದಂತೆ ಬಗೆಬಗೆಯ ಸುದ್ದಿಗಳು ಹರಿದಾಡುತ್ತಿವೆ. ಜನರಲ್ಲಿ ಭೀತಿ ಆವರಿಸಿದ್ದು, ಸಮೂಹ ಸನ್ನಿಗೆ ಸಿಲುಕಿದ್ದಾರೆ. ಆಹಾರ, ಔಷಧ, ಅಗತ್ಯ ವಸ್ತುಗಳ ಲಭ್ಯತೆ ಬಗ್ಗೆ ಜನರಲ್ಲಿ ಅನುಮಾನಗಳು ಮೂಡಿದ್ದು, ಅವುಗಳ ದಾಸ್ತಾನಿಗೆ ಮುಂದಾಗಿದ್ದಾರೆ. ಇದು ಮತ್ತೊಂದು ಸಮಸ್ಯೆ ಸೃಷ್ಟಿಸುವ ಮುನ್ನ ಸರ್ಕಾರ ಅನುಮಾನಗಳನ್ನು ನೀಗಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ದಿನಸಿ ಅಂಗಡಿ, ಔಷಧ ಅಂಗಡಿಯರಿಗೆ ಅನುಮಾನ
ಸೀಲ್‌ಡೌನ್ ಭೀತಿ ಜನರನ್ನು ಸಮೂಹಸನ್ನಿಗೆ ದೂಡಿರುವಾಗಲೇ, ದಿನಸಿ ಅಂಗಡಿ, ಔಷಧಾಲಯಗಳು ತೆರೆಯಬೇಕೋ ಬೇಡವೋ ಎಂಬ ಅನುಮಾನ ಮಾರಾಟಗಾರರಲ್ಲಿ ಮೂಡಿದೆ. ಹಾಗೇನಾದರೂ ದಿನಸಿ ಅಂಗಡಿಗಳು, ಔಷಧಾಲಯಗಳು ಭೀತಿಯಿಂದ ಮುಚ್ಚಿದರೆ, ಜನರಿಗೆ ಆಹಾರ, ಔಷಧಗಳ ಲಭ್ಯತೆಯಲ್ಲಿ ಸಮಸ್ಯೆ ಸೃಷ್ಟಿಯಾಗಲಿದೆ. ಈ ಬಗ್ಗೆ ಸರ್ಕಾರ ಎಚ್ಚರ ವಹಿಸುವ ತುರ್ತು ಎದುರಾಗಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಲಿ ಎಂದು ಎಚ್‌ಡಿಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಎಲ್ಲೆಲ್ಲಿ ಸೀಲ್‌ಡೌನ್? ಮಾಹಿತಿ ಕೊಡಿ
ಸರ್ಕಾರ ಸೀಲ್‌ಡೌನ್ ಜಾರಿ ಮಾಡಲು ನಿರ್ಧರಿಸಿದೆಯಾ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಸೀಲ್‌ಡೌನ್ ಮಾಡಲು ಸರ್ಕಾರ ನಿರ್ಧಾರ ಮಾಡಿದ್ದರೆ ಅದನ್ನು ಜನರಿಗೆ ನೇರವಾಗಿ ತಿಳಿಸಲಿ. ಯಾವ್ಯಾವ ಜಿಲ್ಲೆಗಳಿಗೆ ಸೀಲ್‌ಡೌನ್ ಅನ್ವಯ? ಸೀಲ್‌ಡೌನ್ ಅವಧಿಯಲ್ಲಿ ಏನೆಲ್ಲ ಲಭ್ಯ, ಏನು ಲಭ್ಯವಿರದು ಎಂಬುದರ ಬಗ್ಗೆ ಸರ್ಕಾರ ಕೂಡಲೇ ಅಧಿಕೃತವಾಗಿ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಗಾಳಿ ಸುದ್ದಿಗಳು, ಸುಳ್ಳು ಮಾಹಿತಿಗಳು ಜನರ ದಿಕ್ಕು ತಪ್ಪಿಸಲಿವೆ. ಇದರಿಂದ ಮತ್ತೊಂದು ಸಮಸ್ಯೆ ಎದುರಾಗಲಿದೆ ಎಂದು ಮಾಜಿ ಸಿಎಂ ಎಚ್‌ಡಿಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಸೂಕ್ತ ತಿಳಿವಳಿಕೆ ಕೊಡದಿದ್ದರೆ ಜನರು ಆತಂಕಕ್ಕೆ ಒಳಗಾಗುತ್ತಾರೆ
ಸೂಕ್ತ ತಿಳಿವಳಿಕೆ ಕೊಡದೇ ಸೀಲ್‌ಡೌನ್ ಮಾಡುವುದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗುತ್ತದೆ. ಸೀಲ್‌ಡೌನ್ ಕುರಿತು ಸರ್ಕಾರ ಸೂಕ್ತ ತಿಳಿವಳಿಕೆ ಕೊಡಬೇಕಾದ ಅನಿವಾರ್ಯತೆಯಿದೆ. ಏಕಾಏಕಿ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಲಕ್ಷಾಂತರ ಕೂಲಿ ಕಾರ್ಮಿಕರು ಇನ್ನು ಜಿಲ್ಲೆಗಳ ಗಡಿಯಲ್ಲಿ ಅತಂತ್ರ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಈಗ ಏಕಾಏಕಿ ಯಾವುದೆ ಮಾಹಿತಿ ಕೊಡದೇ ಸೀಲ್‌ಡೌನ್ ಜಾರಿ ಮಾಡಿದ್ರೆ ಮತ್ತೊಂದು ರೀತಿಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಸೋಂಕು ಹರಡದಂತೆ ತಡೆಯಲು ಏಕಾಏಕಿ ನಿರ್ಧಾರಗಳು ತಕ್ಷಣಕ್ಕೆ ಪರಿಹಾರ ಕೊಟ್ಟರೂ ಭವಿಷ್ಯದಲ್ಲಿ ಬೇರೆ ರೀತಿಯ ಸಂಕಷ್ಟಗಳಿಗೆ ಕಾರಣವಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.












Click it and Unblock the Notifications