HD Revanna: ಶುಭ ಮುಹೂರ್ತದಲ್ಲಿ ಪ್ರಜ್ವಲ್ ನೋಡಲು ಜೈಲಿಗೆ ಆಗಮಿಸಿದ ರೇವಣ್ಣ
ಬೆಂಗಳೂರು ಜುಲೈ 3: ಅತ್ಯಾಚಾರ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ನೋಡಲು ಇಂದು ತಂದೆ ಎಚ್‌ಡಿ ರೇವಣ್ಣ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದ್ದರು.
ಕಳೆದ ದಿನ ಪ್ರಜ್ವಲ್ ನೋಡಲು ಹೋಗುವುದಿಲ್ಲ ಎಂದಿದ್ದ ಮಾಜಿ ಸಚಿವ ಎಚ್‌ಡಿ ರೇವಣ್ಣ ಇಂದು ಶುಭ ಗಳಿಗೆ ನೋಡಿಕೊಂಡು ಪುತ್ರನನ್ನು ಭೇಟಿ ಮಾಡಿ ಬಂದಿದ್ದಾರೆ. ಸೋಮವಾರ ಭವಾನಿ ರೇವಣ್ಣ ಮಗನನ್ನು ನೋಡಲು ಜೈಲಿಗೆ ತೆರಳಿದ್ದರು. ಇಂದು ರೇವಣ್ಣ ಜೈಲಿಗೆ ಭೇಟಿ ನೀಡಿ ಪುತ್ರನ ಯೋಗಕ್ಷೇಮ ವಿಚಾರಿಸಿದ್ದಾರೆ. ಈ ವೇಳೆ ಪರಪ್ಪನ ಅಗ್ರಹಾರ ಜೈಲು ಬಳಿ ಕ್ಯಾಮರಾ ಕಣ್ಣಿಗೆ ಬಿದ್ದ ಎಚ್‌ಡಿ ರೇವಣ್ಣ ಮಾತನಾಡಲು ನಿರಾಕರಿಸಿದರು.

ಕಳೆದ ದಿನ ಎಚ್‌ಡಿ ರೇವಣ್ಣ ಅವರು ಮೈಸೂರಿನಲ್ಲಿ ಮಾತನಾಡಿ ತಮ್ಮಿಬ್ಬರು ಮಕ್ಕಳ ಬಗ್ಗೆ ಹೇಳಿಕೊಂಡಿದ್ದರು. ಕಳೆದ ದಿನ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ಡಿ ರೇವಣ್ಣ ಅವರು, 'ನಾನು ಸದ್ಯ ಪ್ರಜ್ವಲ್ ರೇವಣ್ಣನನ್ನು ನೋಡಲು ಹೋಗುವುದಿಲ್ಲ. ನಾನು ಪ್ರಜ್ವಲ್ ಭೇಟಿಗೆ ಹೋದರೆ ಏನೋ ಹೇಳಿಕೊಟ್ಟ ರೇವಣ್ಣ ಅಂತಾರೆ. ಹೀಗಾಗಿ ನಾನು ಪ್ರಜ್ವಲ್ ಭೇಟಿ ಮಾಡುವುದಿಲ್ಲ' ಎಂದು ಹೇಳಿದ್ದರು.
ಹಾಗೇ ಸೂರಜ್ ರೇವಣ್ಣ ಅವರನ್ನು ಭೇಟಿ ಮಾಡಲು ಹೋಗಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ್ದ ರೇವಣ್ಣ, 'ಸೂರಜ್ ದೈವ ಭಕ್ತ. ಆತ ಸಲೀಸಾಗಿ ಜೈಲಿನಿಂದ ಹೊರಬರುತ್ತಾನೆ. ಸದ್ಯ ಯಾವ ವಿಚಾರಗಳನ್ನೂ ನಾನು ಮಾತನಾಡುವುದಿಲ್ಲ. ಎಲ್ಲವೂ ನ್ಯಾಯಾಲಯದ ಮುಂದೆ ಇದೆ. ಎಲ್ಲವೂ ಮುಗಿಯಲಿ, ಆಮೇಲೆ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ. ಎಲ್ಲದಕ್ಕೂ ಕಾಲ ಉತ್ತರ ನೀಡಲಿದೆ. ನಾನು ಯಾವುತ್ತೂ ಯಾವುದಕ್ಕೂ ಹೆದರುವುದಿಲ್ಲ' ಎಂದು ರೇವಣ್ಣ ಹೇಳಿದ್ದರು.
ಪ್ರಜ್ವಲ್ ರೇವಣ್ಣ ಅವರನ್ನು ರೇವಣ್ಣ ಭೇಟಿ ಮಾಡಲು ತೆರಳುವುದಿಲ್ಲ ಎಂದಷ್ಟೇ ಹೇಳಿದರು. ಆದರೆ ಸೂರಜ್ ರೇವಣ್ಣ ಅವರ ಬಗ್ಗೆ ಕೇಳಿದಾಗ ಅವರು ಹೇಳಿದ್ದು ಸೂರಜ್ ದೈವ ಭಕ್ತ ಎಂದು. ಹಾಗಾದರೆ ಸೂರಜ್ ದೈವ ಭಕ್ತನಾದರೆ ಪ್ರಜ್ವಲ್ ದೈವ ಭಕ್ತರಲ್ಲವೇ? ಅವರು ದೇವರನ್ನು ನಂಬುವುದಿಲ್ಲವೇ? ಪ್ರಜ್ವಲ್ ಸಲೀಸಾಗಿ ಹೊರಬರುವುದಿಲ್ಲವೇ? ಎನ್ನುವ ಪ್ರಶ್ನೆಗಳು ಉದ್ಬವಿಸಿವೆ.

ಸಾಮಾನ್ಯವಾಗಿ ಎಚ್‌ಡಿ ರೇವಣ್ಣ ಆಧ್ಯಾತ್ಮದಲ್ಲಿ ಹೆಚ್ಚು ನಂಬಿಕೆ ಉಳ್ಳವರು. ಹೋದಲ್ಲಿ ಬಂದಲ್ಲಿ ಜೊತೆಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಓಡಾಡುವ ರೇವಣ್ಣ ಎಲ್ಲವನ್ನೂ ದೇವರ ಮೇಲೆ ಬಿಡುತ್ತಾರೆ. ಸದ್ಯ ನಡೆಯುವ ಘಟನೆಯಿಂದ ದೇವರು ಕಾಪಾಡುತ್ತಾನೆ ಎಂದೇ ಅವರು ನಂಬಿದ್ದಾರೆ.
ನಮಗೆ ದೇವರು ಬಿಟ್ಟರೆ ಇನ್ಯಾರು ಗತಿ ಎಂದು ಮಾತು ಆರಂಭಿಸಿದ ರೇವಣ್ಣ, 'ಸೋಮವಾರ ನನ್ನ ಪತ್ನಿ ಮಗನನ್ನು ನೋಡಿಕೊಂಡು ಬಂದಿದ್ದಾರೆ. ಮಗ ಅಲ್ವಾ ಮನಸ್ಸು ಸೆಳೆಯುತ್ತೆ ಹೀಗಾಗಿ ಹೋಗಿದ್ದಾರೆ ಅಷ್ಟೇ. ತಾಯಿ-ಮಗ ಏನು ಮಾತನಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ನಾನು ಅವರಿಗೆ ಕೇಳಿಲ್ಲ' ಎಂದಿದ್ದರು.
ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರ ಇಬ್ಬರೂ ಪುತ್ರರು ಜೈಲಿನಲ್ಲಿದ್ದಾರೆ. ಪ್ರಜ್ವಲ್ ರೇವಣ್ಣ ಅವರು ಅತ್ಯಾಚಾರ ಪ್ರಕರಣದಲ್ಲಿ ಹಾಗೂ ಸೂರಜ್ ರೇವಣ್ಣ ಅವರು ಅಸಹಜ ಲೈಂಗಿಕ ಆರೋಪದಡಿ ಜೈಲುವಾಸ ಅನುಭವಿಸುತ್ತಿದ್ದಾರೆ. ಇದರಿಂದ ಸಹಜವಾಗಿ ನೋವಿನಲ್ಲಿರುವ ಎಚ್‌ಡಿ ರೇವಣ್ಣ ಪ್ರಜ್ವಲ್ ರೇವಣ್ಣ ಅವರನ್ನು ಸದ್ಯಕ್ಕೆ ನೋಡಲು ಹೋಗುವುದಿಲ್ಲ ಎಂದು ಹೇಳಿದ್ದರು. ಆದರೂ ಇಂದು ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ಪ್ರಜ್ವಲ್ ಅವರನ್ನ ಭೇಟಿ ಮಾಡಿ ಬಂದಿದ್ದಾರೆ.












Click it and Unblock the Notifications