• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡ್ರಗ್ಸ್ ಮಾಫಿಯಾ: ಇಬ್ಬರು ನಾಯಕರ ಮಧ್ಯೆ ಮುಂದುವರೆದ ಟ್ವೀಟ್ ಸಮರ!

|

ಬೆಂಗಳೂರು, ಆ. 31: ಡ್ರಗ್ ಮಾಫಿಯಾದ ಹಣದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳಿಸಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿಕೆ ಕೊಟ್ಟಿರುವುದು ಹಲವು ಸಚಿವರು ಕೆರಳುವಂತೆ ಮಾಡಿದೆ. ಎಚ್‌ಡಿಕೆ ಹೇಳಿಕೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಆವರು ತೀಕ್ಷ್ಣವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಮದ್ಯ, ಮಾದಕ ವಸ್ತುಗಳು ಹಾನಿಕಾರಕ ಹೌದೋ? ಅಲ್ಲವೋ?

ಡ್ರಗ್ಸ್ ಮಾಫಿಯಾ ನೆಪದಲ್ಲಿ ಹೊರಗೆ ಬಂದಿರುವ ಆರೋಪ-ಪ್ರತ್ಯಾರೋಪಗಳು ವೈಯಕ್ತಿಕ ಮಟ್ಟಕ್ಕೆ ಬಂದು ನಿಂತಿವೆ. ಇಬ್ಬರೂ ನಾಯಕರು ಟ್ವಿಟ್ಟರ್‌ನಲ್ಲಿ ಒಬ್ಬರ ಮೇಲೊಬ್ಬರು ಮುಗಿಬಿದ್ದಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು, ಕಳೆದ ಎರಡು ದಶಕಗಳಿಂದ ಸುಧಾಕರ್ ಅವರು ಯಾವ್ಯಾವ ನಾಯಕರಿಗೆ ಎಂತೆಂಥ ಸೇವೆಗಳನ್ನು ಮಾಡಿದ್ದಾರೆ ಎಂಬ ಹಿನ್ನೆಲೆ ಬಗೆಗೆ ನಾನು ಮಾತನಾಡಲಾರೆ ಎಂದಿದ್ದಾರೆ. ಅದಕ್ಕೆ ತಿರುಗೇಟು ಕೊಟ್ಟಿರುವ ಡಾ. ಸುಧಾಕರ್ ಅವರು, ಯಾವ್ಯಾವ ನಾಯಕರಿಗೆ, ಏನೇನು ಸೇವೆ ಮಾಡಿ 15 ವರ್ಷಗಳಲ್ಲಿ 2 ಬಾರಿ ಮುಖ್ಯಮಂತ್ರಿಗಳಾದಿರಿ ಎಂಬ ಬಗ್ಗೆಯೂ ಒಮ್ಮೆ ತಮ್ಮನ್ನು ಕೇಳಬಹುದೇ? ಎಂದಿದ್ದಾರೆ. ಇನ್ನು ಹಲವು ಆರೋಪಗಳನ್ನು ಇಬ್ಬರೂ ನಾಯಕರು ಮಾಡಿಕೊಂಡಿದ್ದಾರೆ.

ಡ್ರಗ್ಸ್ ಮಾಫಿಯಾ ಕುರಿತು ಮಾಜಿ ಸಿಎಂ ಎಚ್‌ಡಿಕೆ ಗಂಭೀರ ಆರೋಪ

ಇಬ್ಬರೂ ನಾಯಕರೂ ವಚನಗಳೊಂದಿಗೆ ಆರೋಪ-ಪ್ರತ್ಯಾರೋಪಗಳನ್ನು ಮುಕ್ತಾಯ ಮಾಡಿರುವುದು ವಿಶೇಷ.

ರಾಜ್ಯದ ಜನತೆ ನಗುತ್ತಾರೆ

ರಾಜ್ಯದ ಜನತೆ ನಗುತ್ತಾರೆ

ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ನನ್ನ ಹಿನ್ನೆಲೆ ಬಗೆಗೆ ಮಾತನಾಡಿದ್ದಾರೆ. ಬಹುಶಃ ಸುಧಾಕರ್ ಅವರಿಗೆ ಸ್ಮರಣಶಕ್ತಿ ಕಡಿಮೆ ಇದ್ದಂತಿದೆ. ರಾಜಕೀಯವಾಗಿ ಈಗಾಗಲೇ ಎಷ್ಟು ನೆಲೆಗಳನ್ನು ಬದಲಾಯಿಸಿ ರಾತ್ರೋರಾತ್ರಿ ವಿಮಾನ ಬದಲಿಸಿ ಓಡಾಡಿ ಬಂದವರು ನನ್ನ ಹಿನ್ನೆಲೆ ಬಗೆಗೆ ಮಾತನಾಡಿದರೆ ರಾಜ್ಯದ ಜನತೆ ನಗುತ್ತಾರೆ. ಬಿಜೆಪಿ ಸಿದ್ಧಾಂತದ ಬಗ್ಗೆ ಮಾತನಾಡುವಷ್ಟು ಅರ್ಹತೆ ಸುಧಾಕರ್ ಅವರಿಗೆ ಬಂದಿದೆಯೇ ಎಂಬುದನ್ನು ಅವರ ಪಕ್ಷದ ಕಾರ್ಯಕರ್ತರು ಕೂಡ ಒಪ್ಪುವುದಿಲ್ಲ.

ಡ್ರಗ್ಸ್ ಮಾಫಿಯಾ, ಬೆಟ್ಟಿಂಗ್ ದಂಧೆ ಮಾಡುವವರಿಂದ ವಸೂಲಿ ಮಾಡಿದ ಹಣದಿಂದಲೇ ನನ್ನ ಸರ್ಕಾರವನ್ನು ಬುಡಮೇಲು ಮಾಡಲಾಯಿತು ಎಂಬುದು ಸೂರ್ಯ-ಚಂದ್ರರಷ್ಟೇ ಸ್ಪಷ್ಟ. ಇದನ್ನು ಮುಂಬೈವೀರರು ಚೆನ್ನಾಗಿಯೇ ಬಲ್ಲರು. ಅದಕ್ಕೆ ಸಚಿವ ಸುಧಾಕರ್ ಹೊರತಲ್ಲ. ಸಚಿವ ಸ್ಥಾನ ಸಿಕ್ಕಿದೆ ಎಂಬ ಉತ್ಸಾಹದಲ್ಲಿ ನನ್ನ ಹಿನ್ನೆಲೆ-ಮುನ್ನೆಲೆ ಬಗೆಗೆ ಮಾತನಾಡುವುದು ಸುಧಾಕರ್ ಅವರ ನೈಜ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎಂದು ಟ್ವಿಟರ್‌ನಲ್ಲಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಎಂತೆಂಥ ಸೇವೆ ಮಾಡಿದ್ದಾರೆ

ಎಂತೆಂಥ ಸೇವೆ ಮಾಡಿದ್ದಾರೆ

ಮುಂದುವರೆದು, ಅಧಿಕಾರ ಶಾಶ್ವತ ಮತ್ತು ತಮ್ಮ ಸ್ವಂತ ಶಕ್ತಿ ಎಂಬ ಭ್ರಮೆಯಲ್ಲಿ ಇರುವವರು ಮಾತ್ರ ಹೀಗೆ ಮಾತನಾಡುತ್ತಾರೆ ಎಂಬುದು ನನ್ನ ಗ್ರಹಿಕೆ. ಕಳೆದ ಎರಡು ದಶಕಗಳಿಂದ ಸುಧಾಕರ್ ಅವರು ಯಾವ್ಯಾವ ನಾಯಕರಿಗೆ ಎಂತೆಂಥ ಸೇವೆಗಳನ್ನು ಮಾಡಿದ್ದಾರೆ ಎಂಬ ಹಿನ್ನೆಲೆ ಬಗೆಗೆ ನಾನು ಮಾತನಾಡಲಾರೆ. ಜನಸೇವೆಯಲ್ಲಿ ವಿಶ್ವಾಸವಿಟ್ಟು ರಚ‌ನೆಗೊಂಡ ಸರಕಾರವೊಂದು ಮಾಫಿಯಾದ ಹಣದಿಂದ ಹೇಗೆ ಬುಡಮೇಲಾಯಿತು ಎಂಬುದಷ್ಟನ್ನೇ ಜನತೆಯ ಮುಂದೆ ಹೇಳಿದ್ದೇನೆ. ಆದರೆ ಸಚಿವ ಸುಧಾಕರ್ ಹೆಗಲು ಮುಟ್ಟಿಕೊಳ್ಳುವ ಪ್ರಮೇಯ ಉದ್ಭವಿಸಿದ್ದು ಏಕೆಂದು ಅರ್ಥವಾಗಲಿಲ್ಲ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಅವರ ಟ್ವೀಟ್‌ಗೆ ಡಾ. ಸುಧಾಕರ್ ತಿರುಗೇಟು ಕೊಟ್ಟಿದ್ದಾರೆ.

ರಾಜಕೀಯ ನಿವೃತ್ತಿ ತಗೊಳ್ತೀರಾ?

ರಾಜಕೀಯ ನಿವೃತ್ತಿ ತಗೊಳ್ತೀರಾ?

ಡ್ರಗ್ ಮಾಫಿಯಾ ಹಣ ನಮ್ಮ ಸರ್ಕಾರಕ್ಕೆ ಬಂದಿದೆ ಎಂಬ ಆರೋಪಕ್ಕೆ ಪುರಾವೆ ಒದಗಿಸಿದರೆ ನಾನು ರಾಜೀನಾಮೆ ಕೊಡುತ್ತೇನೆ. ಆದರೆ ನೀವು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವಿರಾ? ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.

ಡ್ರಗ್ ಮಾಫಿಯಾದಿಂದ ತಮ್ಮ ಸರ್ಕಾರ ಬುಡಮೇಲಾಯಿತು ಎಂಬ ಆರೋಪಕ್ಕೆ, ನಾನು ಯಾವ ಮುಂಬೈಗೂ ಹೋಗಿಲ್ಲ. ಮಾಜಿ ಮುಖ್ಯಮಂತ್ರಿಗಳಾಗಿ ಇಂತಹ ಗಂಭೀರ ಆರೋಪ ಮಾಡಬಾರದು. ಆರೋಪ ಮಾಡಿದರೆ ಅದಕ್ಕೆ ಪುರಾವೆಯನ್ನೂ ನೀಡಬೇಕು. ಬಿಜೆಪಿ ಅಂತಹ ಅನೈತಿಕ ಕೆಲಸವನ್ನೂ ಎಂದೂ ಮಾಡಿಲ್ಲ. ನನ್ನ ಅರ್ಹತೆ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ನಿರ್ಣಯಿಸುತ್ತಾರೆ. ತಾವು ತಲೆ ಕೆಡಿಸಿಕೊಳ್ಳುವ ಅಗತ್ಯವೇನಿದೆ? ಎಂದು ಡಾ. ಸುಧಾಕರ್ ಪ್ರಶ್ನಿಸಿದ್ದಾರೆ.

ನಾನು ಮಾಜಿ ಪ್ರಧಾನಿ ಮಗನಲ್ಲ

ನಾನು ಮಾಜಿ ಪ್ರಧಾನಿ ಮಗನಲ್ಲ

ನಾನು ಮಾಜಿ ಮುಖ್ಯಮಂತ್ರಿ, ಪ್ರಧಾನಮಂತ್ರಿಯ ಮಗನಲ್ಲ. ಶಾಲಾ ಶಿಕ್ಷಕನ ಮಗನಾಗಿ ಸ್ವಸಾಮರ್ಥ್ಯದಿಂದ ರಾಜಕೀಯದಲ್ಲಿ ಸಕ್ರಿಯನಾಗಿದ್ದೇನೆ. ನಾನೆಂದೂ ಯಾರ ಹೆಸರಿನಲ್ಲೂ ರಾಜಕೀಯ ಮಾಡಿಲ್ಲ ಎಂದು ಡಾ. ಸುಧಾಕರ್ ಪ್ರತಿಕ್ರಿಯಿಸಿದ್ದಾರೆ. ಯಾವ್ಯಾವ ನಾಯಕರಿಗೆ, ಏನೇನೂ ಸೇವೆ ಮಾಡಿ 15 ವರ್ಷದಲ್ಲಿ 2 ಬಾರಿ ಮುಖ್ಯಮಂತ್ರಿಗಳಾದಿರಿ ಎಂಬ ಬಗ್ಗೆಯೂ ಒಮ್ಮೆ ತಮ್ಮನ್ನು ಕೇಳಬಹುದೇ? ಪಕ್ಕದಲ್ಲಿ ಧರಮ್ ಸಿಂಗ್ ಅವರನ್ನು ಇಟ್ಟುಕೊಂಡು, ಕೆಲವು ಸ್ನೇಹಿತರೊಂದಿಗೆ ರಾತ್ರೋರಾತ್ರಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದ ಹಿನ್ನಲೆ ಬಗ್ಗೆ ಜನರೇ ಮಾತನಾಡುತ್ತಿದ್ದಾರೆ. ಒಮ್ಮೆ ಕೇಳಿಸಿಕೊಳ್ಳಿ ಎಂದು ಸುಧಾಕರ್ ಲೇವಡಿ ಮಾಡಿದ್ದಾರೆ.

ನಾನು ಕೇಳಿದ್ದು ಡ್ರಗ್ ಮಾಫಿಯಾ ಆರೋಪದ ಹಿನ್ನಲೆಗಳ ಬಗ್ಗೆ, ಮಾಜಿ ಮುಖ್ಯಮಂತ್ರಿಗಳಾಗಿ, ಡ್ರಗ್ ಮಾಫಿಯಾ ಹಣದಿಂದ ಸರ್ಕಾರ ಬಂದಿದೆ ಎಂದು ಚುನಾಯಿತ ಸರ್ಕಾರದ ಮೇಲಿನ ಬೇಜಾವಾಬ್ದಾರಿ ಹೇಳಿಕೆಯ ಹಿನ್ನಲೆ ಬಗ್ಗೆ! ಬಿಜೆಪಿ ಅನೈತಿಕ ಕೆಲಸವನ್ನು ಎಂದೂ ಮಾಡಿಲ್ಲ, ಮಾಡುವುದಿಲ್ಲ. ಅದಕ್ಕೆ 2ಸ್ಥಾನದಿಂದ 303 ಸ್ಥಾನಗಳನ್ನು ಜನ ಆಶೀರ್ವದಿಸಿದ್ದಾರೆ ಎಂದು ಸುಧಾಕರ್ ಸ್ಪಷ್ಟನೆ ಕೊಟ್ಟಿದ್ದಾರೆ.

ಕೂಡಲ ಸಂಗಮದೇವಾ...!

ಕೂಡಲ ಸಂಗಮದೇವಾ...!

ಕೆಸರಲ್ಲಿ ಬಿದ್ದ ಪಶುವಿನಂತೆ

ಅನು ದೆಸೆದೆಸೆಗೆ ಬಾಯ ಬಿಡುತ್ತಿದ್ದೇನೆ.

ಅಯ್ಯಾ, ಆರೈವವರಿಲ್ಲ, ಅಕಟಕಟ

ಪಶುವೆಂದೆನ್ನ ಕೂಡಲಸಂಗಮದೇವ ಕೊಂಬ ಹಿಡಿದೆತ್ತುವನ್ನಕ್ಕ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ. ಅದಕ್ಕೆ ಬಸವಣ್ಣನ ವಚನದಲ್ಲಿಯೇ ಡಾ. ಸುಧಾಕರ್ ಅವರು ತಿರುಗೇಟು ಕೊಟ್ಟಿದ್ದಾರೆ.

ನಗೆ ಮುನಿದವರಿಗೆ ತಾ ಮುನಿಯಲೇಕಯ್ಯಾ

ತನಗಾದ ಆಗೇನು ಅವರಿಗಾದ ಚೇಗೆಯೇನು

ತನುವಿನ ಕೋಪ ತನ್ನ ಹಿರಿಯತನದ ಕೇಡು

ಮನದ ಕೋಪ ತನ್ನರಿವಿನ ಕೇಡು

ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೇ

ನೆರೆಮನೆಯ ಸುಡದೋ

ಕೂಡಲಸಂಗಮದೇವ ಎಂದು ಬಸವಣ್ಣನ ವಚನವನ್ನು ಡಾ. ಸುಧಾಕರ್ ಟ್ವೀಟ್ ಮಾಡಿದ್ದಾರೆ.

English summary
Former chief minister HD Kumaraswamy says the Congress-JDS alliance government was overthrown with the money from mafia. Kumaraswamy's statement has made many ministers irritated. Medical Education Minister Sudhakar responded sharply. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X