ಎಲೆಚುಕ್ಕೆ ರೋಗಕ್ಕೆ ಪರಿಹಾರ ಬದಲು ಭೂತಾನ್ ಅಡಿಕೆ ಆಮದು ಬಗ್ಗೆ ಚಿಂತೆ: ಎಚ್‌ಡಿಕೆ ಆಕ್ರೋಶ
ಬೆಂಗಳೂರು, ಅ.12: ರಾಜ್ಯದಲ್ಲಿ ಎಲೆಚುಕ್ಕೆ ರೋಗ ವ್ಯಾಪಕವಾಗಿ ಹರಡುತ್ತಿದ್ದು, ಇದರಿಂದಾಗಿ ಅಡಿಕೆ ಕೃಷಿಕರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಆದರೆ, ಕೇಂದ್ರ ಬಿಜೆಪಿ ಸರ್ಕಾರ ಕೃಷಿಯನ್ನು ಕಡೆಗಣಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, "ಕೃಷಿಯನ್ನು ಕೇಂದ್ರ ಬಿಜೆಪಿ ಸರಕಾರ ಇನ್ನಿಲ್ಲದಷ್ಟು ಕಡೆಗಣಿಸುತ್ತಿದೆ ಎನ್ನುವುದಕ್ಕೆ ಈಗ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟಗಳೇ ಸಾಕ್ಷಿ. ಹವಾಮಾನ ವೈಪರಿತ್ಯ ಹಾಗೂ ಎಲೆಚುಕ್ಕೆ ರೋಗದಿಂದ ಅಡಿಕೆ ಕೃಷಿಕರ ಬವಣೆ ಹೇಳತೀರದಾಗಿದೆ" ಎಂದು ಆತಂಕ ಹೊರ ಹಾಕಿದ್ದಾರೆ.
"ಕರಾವಳಿ, ಮಲೆನಾಡು, ಹಾಸನ, ಕೊಡಗು ಸೇರಿ ಇನ್ನೂ ಹಲವಾರು ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಜಗತ್ತಿನಲ್ಲಿ ಅತಿಹೆಚ್ಚು ಅಡಿಕೆ ಬೆಳೆಯುವ ಭಾರತದಲ್ಲಿ ಹೆಚ್ಚು ಫಸಲು ಬರುವುದೇ ನಮ್ಮ ರಾಜ್ಯದಲ್ಲಿ. ಆದರೆ, ಈ ಬೆಳೆ ತೆಗೆಯುವ ರಾಜ್ಯದ ರೈತರ ಬದುಕು ಕತ್ತಲೆಯಲ್ಲಿದೆ" ಎಂದಿದ್ದಾರೆ.

"ಅಡಿಕೆ ಬೆಳೆಯುವುದು ಎಂದರೆ ಕತ್ತಿಯ ಮೇಲಿನ ಸವಾರಿ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅತಿವೃಷ್ಟಿ, ಅನಾವೃಷ್ಟಿ ಜತೆಗೆ, ನಿರಂತರ ರೋಗರುಜಿನಗಳು ಬಾಧಿಸುತ್ತ ರೈತರನ್ನು ಕಿತ್ತು ತಿನ್ನುತ್ತಿವೆ. ರಾಜ್ಯ ಸರಕಾರವು ಪರಿಣಾಮಕಾರಿ ಔಷಧಿ ಪತ್ತೆ ಹಚ್ಚಿ ಬೆಳೆಗಾರರಿಗೆ ಕಡಿಮೆ ದರದಲ್ಲಿ ಒದಗಿಸಬೇಕಿದೆ. ಬೆಳೆ ನಷ್ಟಕ್ಕೆ ಪರಿಹಾರವನ್ನು ಕೂಡ ಕೊಡಬೇಕು" ಎಂದು ಒತ್ತಾಯಿಸಿದ್ದಾರೆ.
"ಮೊದಲೇ ಸಂಕಷ್ಟದಲ್ಲಿರುವ ಅಡಿಕೆ ರೈತರ ಮೇಲೆ ಕೇಂದ್ರ ಸರಕಾರ ಹೊಸ ಭೂತವನ್ನು ಛೂ ಬಿಡುತ್ತಿದೆ. ನೆರೆ ದೇಶ ಭೂತಾನ್ ನಿಂದ 17,000 ಟನ್ ಹಸಿರು ಅಡಿಕೆ ಆಮದು ಮಾಡಿಕೊಳ್ಳುತ್ತಿರುವ ಕ್ರಮ ನಮ್ಮ ಅಡಿಕೆ ಬೆಳೆಗಾರರ ಮೇಲೆ ಬರೆ ಎಳೆಯುವ ಹುನ್ನಾರವಷ್ಟೆ" ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

"ಅಡಿಕೆ ಬೆಳೆಯುತ್ತಾ ಅಡಕತ್ತರಿಯಲ್ಲಿ ಸಿಲುಕಿರುವ ರೈತರ ಹಿತ ಕಾಯುವುದು ರಾಜ್ಯ ಬಿಜೆಪಿ ಸರಕಾರದ ಕರ್ತವ್ಯ. ಅವರ ಸಂಕಷ್ಟಕ್ಕೆ ಮಿಡಿಯುವುದು ಮಾತ್ರವಲ್ಲ, ಎಲ್ಲಾ ರೀತಿಯಲ್ಲೂ ನೆರವಿಗೆ ಧಾವಿಸಬೇಕು" ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇತ್ತಿಚೆಗೆ ರಾಜ್ಯದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ, ರಾಜ್ಯ ಸರಕಾರ ಒಟ್ಟು ಎಂಟು ಕೋಟಿ ರುಪಾಯಿಗಳಷ್ಟು ಅನುದಾನ ನಿಗದಿ ಮಾಡಿ, ನಾಲ್ಕು ಕೋಟಿ ರೂಪಾಯಿಗಳನ್ನು, ತಕ್ಷಣಕ್ಕೆ ರೈತರಿಗೆ ವಿತರಿಸಲು, ಬಿಡುಗಡೆ ಮಾಡಿದೆ.












Click it and Unblock the Notifications