60 ಕೋಟಿ ಸಾಲ ಮಾಡಿದ್ದ ಚಿತ್ರ ನಿರ್ಮಾಪಕ ಜಿ.ರಘುನಾಥ್‌ಗಿಲ್ಲ ಜಾಮೀನು
ಬೆಂಗಳೂರು, ಅ.13. ನಗರದ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಂದ 60 ಕೋಟಿ ನಗದನ್ನು ಸಾಲ ಪಡೆದಿದ್ದ ಚಲನಚಿತ್ರ ನಿರ್ಮಾಪಕ ಮತ್ತು ಉದ್ಯಮಿ ಜಿ.ರಘುನಾಥ್ ಅವರಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಸದ್ಯ ನ್ಯಾಯಾಂಗ ಬಂಧನದಲ್ಲಿರುವ ರಘುನಾಥ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಆದೇಶವೇನು?
ವಾದ ಆಲಿಸಿದ ನಂತರ ನ್ಯಾಯಪೀಠ, "ಅರ್ಜಿದಾರರು 60 ಕೋಟಿ ನಗದನ್ನು ಸಾಲದ ರೂಪದಲ್ಲಿ ಪಡೆದಿರುವ ಪ್ರಕ್ರಿಯೆ ಕಾನೂನಿಗೆ ವಿರುದ್ಧವಾಗಿದೆ. ಈ ಸಾಲ ಎಲ್ಲಿ ಹೂಡಿಕೆ ಮಾಡಲಾಗಿದೆ ಎಂಬ ವಿವರ ಬಹಿರಂಗಪಡಿಸಿಲ್ಲ. ಹಾಗಾಗಿ ಜಾಮೀನು ನೀಡಿದರೆ ಅವರು ತಮ್ಮ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡದಂತೆ ತಡೆಯುವ ಎಲ್ಲ ಸಾಧ್ಯತೆಗಳಿವೆ. ಆದ್ದರಿಂದ, ಈ ಹಂತದಲ್ಲಿ ಬಿಡುಗಡೆ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದೆ. .

ಅರ್ಜಿದಾರರ ಪರ ಹಿರಿಯ ವಕೀಲರು, "ಅರ್ಜಿದಾರರು, ಕೆಂಗೇರಿಯಲ್ಲಿ ಹೋಟೆಲ್ ತೆರೆದಿದ್ದು, ಸಿನಿಮಾ ನಿರ್ಮಾಪಕರೂ ಹೌದು. ಇವರು ಕೇವಲ ಬ್ಯಾಂಕ್‌ನ ಸಾಲಗಾರ. 2020ರ ಜನವರಿ ತನಕ ನಿಯಮಿತವಾಗಿ ಇಎಂಐ ಪಾವತಿಸಿದ್ದಾರೆ. ಬ್ಯಾಂಕ್ ಅಧಿಕಾರಿಗಳೊಂದಿಗೆ ಅಥವಾ ಇತರರ ಜೊತೆಗಿನ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಅನಗತ್ಯವಾಗಿ ಅವರನ್ನು ಸಿಲುಕಿಸಲಾಗಿದೆ, ಅವರಿಗೂ ಬ್ಯಾಂಕ್ ಹಗರಣಕ್ಕೂ ಸಂಬಂಧವಿಲ್ಲ" ಎಂದು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ:
ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಸಹಕಾರಿ ಬ್ಯಾಂಕ್ ನಲ್ಲಿ ನಕಲಿ ಠೇವಣಿಗಳನ್ನು ಸೃಷ್ಟಿಸಿ, ಸೂಕ್ತ ದಾಖಲೆಗಳಿಲ್ಲದೆ ಸಾಲ ಮಂಜೂರು ಮಾಡಿ 1,556 ಕೋಟಿ ನಷ್ಟಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಮತ್ತು ಇತರರ ವಿರುದ್ಧ ಇಡಿ ಪ್ರಕರಣ ದಾಖಲಿಸಿದ್ದು ರಘುನಾಥ್ 17ನೇ ಆರೋಪಿಯಾಗಿದ್ದಾರೆ. ರಘುನಾಥ್ ಬ್ಯಾಂಕ್ ನಿಂದ 105 ಕೋಟಿ ಸಾಲ ಪಡೆದಿದ್ದು, ಬ್ಯಾಂಕ್ ಅಧಿಕಾರಿಗಳ ಜೊತೆ ಶಾಮೀಲಾಗಿ ಈ ಹಣವನ್ನು ಲಪಟಾಯಿಸಿದ್ದಾರೆ ಎಂದು ಆರೋಪಿಸಿ ಇಡಿ ಅಧಿಕಾರಿಗಳು 2022ರ ಜೂ. 28ರಂದು ಇವರನ್ನು ಬಂಧಿಸಿದ್ದರು.
ಭಾರತೀಯ ದಂಡ ಸಂಹಿತೆ-1890 ಐಪಿಸಿ, ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತರಕ್ಷಣಾ ಕಾಯ್ದೆ-2004 (ಕೆಪಿಐಡಿಎಫ್‌ಇ) ಹಾಗೂ ಹಣ ಅಕ್ರಮ ವರ್ಗಾವಣೆ ಕಾಯ್ದೆ-2002ರ (ಪಿಎಂಎಲ್) ವಿವಿಧ ಕಲಂಗಳ ಅಡಿಯಲ್ಲಿ ರಘುನಾಥ್ ವಿರುದ್ಧ ಇಸಿಐ ಆರ್‌ದಾಖಲು ಮಾಡಿದ್ದಾರೆ.
"ಹೆಬ್ಬುಲಿ" ಚಿತ್ರಗಳನ್ನು ನಿರ್ಮಿಸಿರುವ ಜಿ. ರಘುನಾಥ್ ಜಾಮೀನು ಕೋರಿ ಸಿಸಿಸಿಎಚ್-1ರ ಪ್ರಧಾನ ಮತ್ತು ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದರು.












Click it and Unblock the Notifications