ಬೆಂಗಳೂರಿನಲ್ಲಿ ಕುಶಲ ಕರ್ಮಿಗಳ ಕರಕುಶಲ ವೈಭವ
ಬೆಂಗಳೂರು, ಏ. 16 : ಮಾನ್ಯ ಆರ್ಟ್ ಎಂಡ್ ಕ್ರಾಫ್ಟ್ಸ್ ಅಸೋಸಿಯೇಶನ್ ದೇಶದಾದ್ಯಂತ ಇರುವ ಕುಶಲಕರ್ಮಿಗಳನ್ನು ಒಂದೇ ಸೂರಿನಡಿಗೆ ತಂದು, ಅವರ ಕೌಶಲವನ್ನು ಪ್ರದರ್ಶಿಸುವ ಹಸ್ತಕಲಾ (ಕರಕುಶಲ) ಮೇಳವನ್ನು ನಗರದ ಚಿತ್ರಕಲಾ ಪರಿಷತ್ ನಲ್ಲಿ ಏಪ್ರಿಲ್ 17ರಿಂದ 26ರವರೆಗೆ ಏರ್ಪಡಿಸಿದೆ.
ಈ ವರ್ಷ ಇನ್ನೂ ವಿಭಿನ್ನವಾಗಿ ಮಾನ್ಯ ಆರ್ಟ್ ಎಂಡ್ ಕ್ರಾಫ್ಟ್ ಸಂಘವು ಈ ಮೇಳವನ್ನು ಆಯೋಜಿಸುತ್ತಿದೆ. ದೇಶೀಯ ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಈ ಪ್ರದರ್ಶನ, ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ. ಮೇಳವನ್ನು ಕೊಡಗಿನ ಬೆಡಗಿ, ರೂಪದರ್ಶಿ ಮತ್ತು 'ಬೆಳ್ಳಿ ಮೋಡದ ಅಂಬರ' ಚಿತ್ರದಲ್ಲಿ ನಟಿಸಿದ್ದ ಟೀನಾ ಪೊನ್ನಪ್ಪ ಅವರು ಉದ್ಘಾಟಿಸಲಿದ್ದಾರೆ.
ದೇಶದ 23 ರಾಜ್ಯಗಳ ಕುಲಶಕರ್ಮಿಗಳು ಈ ಪ್ರದರ್ಶನದಲ್ಲಿ ತಮ್ಮ ಕೌಶಲ ಪ್ರದರ್ಶಿಸಲಿದ್ದಾರೆ. ಈ ಮೇಳದಲ್ಲಿ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ ಪಡೆದ ಕುಶಲಕರ್ಮಿಗಳೂ ಪಾಲ್ಗೊಳ್ಳುತ್ತಿದ್ದಾರೆ. ಕರ್ನಾಟಕ, ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡಿನ ಕುಶಲಕರ್ಮಿಗಳಲ್ಲದೆ, ಜೈಪುರ, ಜೋಧ್‌ಪುರದಂತಹ ಸಾಂಪ್ರದಾಯಿಕ ನಗರಗಳ ಕುಶಲಕರ್ಮಿಗಳೂ ಪಾಲ್ಗೊಳ್ಳಲಿದ್ದಾರೆ.

ಮೇಳದಲ್ಲಿ ಏನೇನಿರಲಿದೆ? : ಅವರು ಕೈಮಗ್ಗದ ಉತ್ಪನ್ನಗಳಲ್ಲದೆ, ತಮ್ಮ ಶ್ರೀಮಂತ ಕಲಾ ಮತ್ತು ಕರಕುಶಲ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಿದ್ದಾರೆ ಎಂದು ಮಾನ್ಯ ಆರ್ಟ್ ಎಂಡ್ ಕ್ರಾಫ್ಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಜಯಂತ್ ನಜ್ರೆ ಒನ್ಇಂಡಿಯಾಗೆ ತಿಳಿಸಿದರು.
ಒಂದೇ ಸೂರಿನಡಿಗೆ ಕುಶಲಕರ್ಮಿ ಮತ್ತು ಗ್ರಾಹಕರನ್ನು ತಂದು, ಕುಶಲಕರ್ಮಿಗಳು ಮತ್ತು ಕೈಮಗ್ಗ ನೇಕಾರರ ಕೆಲಸಕ್ಕೆ ಉತ್ತಮ ಧಾರಣೆ ದೊರಕಿಸಿಕೊಡುವುದು ಈ ಪ್ರದರ್ಶನದ ಉದ್ದೇಶ. ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿರುವ ಇಂತಹ ಕುಶಲಕರ್ಮಿಗಳಿಗೆ ಉತ್ತಮ ಮಾರುಕಟ್ಟೆಯ ಕೊರತೆ ಇರುತ್ತದೆ. ಇಂತಹ ಅಂತರವನ್ನು ನಿವಾರಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಅವರು ವಿವರಿಸಿದರು.
ಪ್ರದರ್ಶನದ ವಿಶೇಷ : 23 ರಾಜ್ಯಗಳ ಕುಶಲಕರ್ಮಿಗಳ ಉತ್ಪನ್ನಗಳನ್ನು 120 ಮಳಿಗೆಗಳಲ್ಲಿ ಪ್ರದರ್ಶಿಸಲಾಗುವುದು. ಆಕರ್ಷಕ ಕೈಮಗ್ಗದ ಜವಳಿ, ಚರ್ಮ, ಬಿದಿರಿನ ಉತ್ಪನ್ನಗಳು ಸಹಿತ ಹಲವಾರು ಆಕರ್ಷಕ ಉತ್ಪನ್ನಗಳ ಪ್ರದರ್ಶನ ಇಲ್ಲಿರುತ್ತದೆ. ಕುಶಲಕರ್ಮಿಗಳೇ ಸ್ವತಃ ಸ್ಥಳದಲ್ಲಿ ಇರುತ್ತಾರೆ, ಅವರ ಅನುಭವವನ್ನು ಸಹ ಪಡೆದುಕೊಳ್ಳುವುದು ಸಾಧ್ಯ. ಯಾವುದೇ ಮಧ್ಯವರ್ತಿ ಇಲ್ಲದೆ ಗ್ರಾಹಕರು ನೇರವಾಗಿ ಉತ್ಪನ್ನಗಳನ್ನು ಇಲ್ಲಿ ಪಡೆದುಕೊಳ್ಳಲು ಸಾಧ್ಯವಿದೆ.
ಮಾನ್ಯ ಸಂಘವು ಲಾಭರಹಿತ ನೋಂದಾಯಿತ ಸಂಘವಾಗಿದ್ದು, ಕಳೆದ 10 ವರ್ಷಗಳಿಂದ ಕುಶಲಕರ್ಮಿಗಳ ಜೀವನ ಸುಧಾರಣೆಗಾಗಿ ಶ್ರಮಿಸುತ್ತ ಬಂದಿದೆ. ಕುಶಲಕರ್ಮಿಗಳು ಅದರಲ್ಲೂ ಮುಖ್ಯವಾಗಿ ಮಹಿಳಾ ಉದ್ಯಮಿಗಳ ಉತ್ತೇಜನಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕ್ರಾಫ್ಟ್ ಬಜಾರ್‌ಗಳನ್ನು ಏರ್ಪಡಿಸುವ ಮೂಲಕ ಕುಶಲಕರ್ಮಿಗಳ ಜೀವನ ಸುಧಾರಣೆಗೆ ಶ್ರಮಿಸುತ್ತಿದೆ.
ಗ್ರಾಮೀಣ ಕುಶಲಕರ್ಮಿಗಳ ಕಲಾ ಶ್ರೀಮಂತಿಕೆ ನಗರಗಳಿಗೂ ಪರಿಚಯವಾಗಬೇಕು ಎಂಬ ಉದ್ದೇಶದೊಂದಿಗೆ ಇದೀಗ ಬೆಂಗಳೂರಿನಲ್ಲಿ ಹಸ್ತಕಲಾ ಪ್ರದರ್ಶನ, ಮಾರಾಟ ಮೇಳ ಏರ್ಪಡಿಸಲಾಗಿದೆ.
ಪ್ರದರ್ಶನ ಸಮಯ : ಬೆಳಿಗ್ಗೆ 10.30ರಿಂದ ರಾತ್ರಿ 8.
ಮಾಹಿತಿಗೆ ಸಂಪರ್ಕಿಸಿ : 9845695922/ 9886545019












Click it and Unblock the Notifications