ಮಾಜಿ CM ಕುಮಾರಸ್ವಾಮಿಗೆ ಕೊರಳಿಗೆ ಹಲಗೇ ವಡೇರನಹಳ್ಳಿ ಉರುಳು !
ಬೆಂಗಳೂರು ಏಪ್ರಿಲ್ 01 : ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಗೆ ಎದುರಾಗಿರುವ ಹಲಗೆ ವಡೆರನಹಳ್ಳಿ ಡಿನೋಟಿಫಿಕೇಷನ್ ಭೂ ಕಂಟಕ ಸದ್ಯಕ್ಕೆ ಬಿಡುವಂತೆ ಕಾಣುತ್ತಿಲ್ಲ. ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಕುಮಾರಸ್ವಾಮಿಗೆ ನೋಟಿಸ್ ನೀಡಿದೆ. ಏ. 17 ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೂಚಿಸಿದೆ.
ಏನಿದು ಅಕ್ರಮ: ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಉತ್ತರಹಳ್ಳಿ ಹೋಬಳಿಯ ಹಲಗೆ ವಡೇರಹಳ್ಳಿ ಸರ್ವೆ ನಂ 128, 137 ರಲ್ಲಿನ 2 ಎಕರೆ 24 ಗುಂಟೆ ಜಮೀನನ್ನು ಕಾನೂನು ಬಾಹಿರವಾಗಿ ಡಿ ನೋಟಿಫಿಕೇಷನ್ ಮಾಡಿದ ಆರೋಪ ಕೇಳಿ ಬಂದಿತ್ತು. ಬನಶಂಕರಿ ಲೇಔಟ್ ನಿರ್ಮಾಣಕ್ಕೆ ಬಿಡಿಎ 1989 ರಲ್ಲಿ ಸ್ವಾಧೀನ ಪಡಿಸಿಕೊಂಡಿತ್ತು. 1995 ರಲ್ಲಿ ಅಂತಿಮ ಆದೇಶ ಹೊರಡಿಸಿತ್ತು. ಭೂಮಿಯನ್ನು ಸ್ವಾಧೀನದಿಂದ ಕೈ ಬಿಡುವಂತೆ ಭೂ ಮಾಲೀಕರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ರದ್ದು ಪಡಿಸಿತ್ತು.
ಇದಾದ ನಂತರ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇದೇ ಭೂಮಿಯನ್ನು ಡಿ ನೋಟಿಫಿಕೇಷನ್ ಮಾಡಿ ಆದೇಶ ಹೊರಡಿಸಿದ್ದರು. ಈ ಕುರಿತ ದಾಖಲೆಗಳ ಸಮೇತ ಮಹದೇವಸ್ವಾಮಿ ಅವರು 2012 ರಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಖಾಸಗಿ ದೂರನ್ನು ತನಿಖೆ ನಡೆಸಲು ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೂಚಿಸಿತ್ತು. ಅದರಂತೆ ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ಬಿ. ವರದಿಯನ್ನು ಸಲ್ಲಿಸಿದ್ದರು.

Recommended Video
ವಿಶೇಷ ವೆಂದರೆ ಕುಮಾರಸ್ವಾಮಿ ವಿರುದ್ಧ ಡಿ ನೋಟಿಫಿಕೇಷನ್ ಅಕ್ರಮ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು "ಬಿ" ವರದಿ ಸಲ್ಲಿಸಿದ್ದರು. ಈ ವರದಿಯನ್ನು ದೂರುದಾರ ಮಹದೇವ ಸ್ವಾಮಿ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.ಲೋಕಾಯುಕ್ತ ಪೊಲೀಸರ ಬಿ ವರದಿ ತಿರಸ್ಕರಿಸಿದ್ದ ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಂಡಿತ್ತು. ವಿಶೇಷ ನ್ಯಾಯಾಲಯದ ನೋಟಿಸ್ ಪ್ರಶ್ನಿಸಿ ಕುಮಾರಸ್ವಾಮಿ ಹೈಕೋರ್ಟ್ ಮೊರೆ ಹೋಗಿದ್ದರು. ಆನಂತರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ, ವಿಚಾರಣೆ ಎದುರಿಸುವಂತೆ ಸುಪ್ರೀಂಕೋರ್ಟ್ ಕೂಡ ಇತ್ತೀಚೆಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಏಪ್ರಿಲ್ 17 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶಿಸಿದೆ.












Click it and Unblock the Notifications