ಗ್ರೇಟರ್ ಬೆಂಗಳೂರು ಪ್ರಾರಂಭದಲ್ಲೇ ವಿವಾದ: ಸಿಎಂ ಪುತ್ರನಿಗೆ ಚಾನ್ಸ್!
ಬೆಂಗಳೂರಿನ ಆಡಳಿತ ಇತಿಹಾಸವೇ ಇಂದಿನಿಂದ ಬದಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬದಲಿಗೆ ಇಂದಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ಪ್ರಾರಂಭವಾಗಿದ್ದು. ಬೆಂಗಳೂರಿನಲ್ಲಿ ಒಂದು ಪಾಲಿಕೆಯ ಬದಲಿಗೆ ಐದು ಪಾಲಿಕೆಗಳು ರಚನೆ ಆಗಿವೆ. ಅಲ್ಲದೇ ಐದು ಮಹಾನಗರ ಪಾಲಿಕೆಗಳಿಗೆ ಆಯುಕ್ತರನ್ನೂ ನೇಮಕ ಮಾಡಿ ರಾಜ್ಯ ಸರ್ಕಾರವು ಆದೇಶ ಮಾಡಿದೆ. ಆದರೆ ಈ ರೀತಿ ಹೊಸ ಅಧ್ಯಯನ ಪ್ರಾರಂಭವಾದ ಮೊದಲ ದಿನವೇ ಹೊಸ ವಿವಾದವೊಂದು ಸೃಷ್ಟಿಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಅನವಶ್ಯಕವಾಗಿ ಭಾಗಿಯಾಗುತ್ತಿದ್ದಾರೆ ಎಂದು ಈ ಹಿಂದಿನಿಂದಲೂ ಆರೋಪಗಳು ಕೇಳಿ ಬರುತ್ತಿದ್ದವು. ಇದೀಗ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಂಬಂಧವೇ ಇಲ್ಲದ ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲೂ ಅವರ ಹೆಸರು ಕಾಣಿಸಿಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಇಂದಿನಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎನ್ನುವ ಇತಿಹಾಸ ಮುಕ್ತಾಯವಾಗಿದೆ. ಬಿಬಿಎಂಪಿ ಇತಿಹಾಸದ ಪುಟ ಸೇರಿದೆ. ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ರೂಪಾಂತರಗೊಂಡು ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿದೆ.

ಈ ರೀತಿ ಹೊಸ ಇತಿಹಾಸ ಪ್ರಾರಂಭವಾಗುತ್ತಿರುವ ಸಂದರ್ಭದಲ್ಲಿಯೇ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸದಸ್ಯತ್ವ ಹಂಚಿಕೆ ವಿಷಯವು ಭಾರೀ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸದಸ್ಯತ್ವ ನೀಡಿದ್ದಾರೆ ಎನ್ನುವುದು ಪ್ರಾರಂಭ ಹಂತದಲ್ಲೇ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ. ಬೆಂಗಳೂರಿಗೆ ಸಂಬಂಧವೇ ಇಲ್ಲದೆ ಇರುವವರ ಹೆಸರನ್ನು ಸೇರಿಸುವ ಅವಶ್ಯಕತೆಯಾದರೂ ಏನಿದೆ ಎಂದು ವಿರೋಧ ಪಕ್ಷದ ನಾಯಕರು ಪ್ರಶ್ನೆ ಮಾಡಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 02ರಂದು ಕೆಲವೊಂದು ಮಹತ್ವದ ಆದೇಶವನ್ನು ಮಾಡಿದೆ. ಅದರಲ್ಲಿ ಮುಖ್ಯವಾಗಿ ಬೆಂಗಳೂರಿನ ಸಂಸದರು, ಶಾಸಕರು, ರಾಜ್ಯಸಭಾ ಸದಸ್ಯರು ಹಾಗೂ ವಿಧಾನಪರಿಷತ್ ಸದಸ್ಯರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸದಸ್ಯತ್ವ ಕೊಡಲಾಗಿದೆ. ಆದರೆ, ಬೆಂಗಳೂರು ನಗರದ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೆ ಇರುವ ಹಾಗೂ ಬೆಂಗಳೂರಿನ ಜನಪ್ರತಿನಿಧಿಯೂ ಅಲ್ಲದೇ ಇರುವ ಮತ್ತು ಮೈಸೂರು ಜಿಲ್ಲೆಯ ನಾಯಕರಾದ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಬೆಂಗಳೂರು ಸದಸ್ಯತ್ವ ಕೊಟ್ಟಿರುವುದು ಚರ್ಚೆಗೆ ಕಾರಣವಾಗಿದೆ.
ಯಾವ ಮಾನದಂಡದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಯಾವ ಕಾರಣಕ್ಕೆ ಸದಸ್ಯತ್ವ ಕೊಡಲಾಗಿದೆ. ಈ ವಿಚಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವರಣೆ ಕೊಡಬೇಕು ಎಂದು ಬಿಬಿಎಂಪಿ ಮಾಜಿ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಅವರು ಆಗ್ರಹಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯ ಬಗ್ಗೆಯೇ ಕೆಲವೊಂದು ಗೊಂದಲಗಳು ಇನ್ನೂ ಬಗೆಹರಿದಿಲ್ಲ. ಈ ರೀತಿ ಇರುವಾಗಲೇ ಸದಸ್ಯತ್ವದಲ್ಲೂ ಗೊಂದಲ ಸೃಷ್ಟಿಯಾಗಿದೆ.












Click it and Unblock the Notifications