Greater Bengaluru: ಬಿಡಿಎ ಅಧಿಕಾರಕ್ಕೆ ಬೀಳಲಿದೆ ಕತ್ತರಿ
ಬೆಂಗಳೂರು, ಜುಲೈ 11 : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಚರ್ಚೆಯಾಗುತ್ತಿರುವ ಪ್ರಮುಖ ವಿಚಾರ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ'. ಬೆಂಗಳೂರು ನಗರದ ಆಡಳಿತ ವ್ಯಸ್ಥೆಯಲ್ಲಿ ಇದರಿಂದಾಗಿ ಹೊಸ ವ್ಯವಸ್ಥೆ ರಚನೆಯಾಗಲಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕುರಿತು ನಾಲ್ವರು ಸದಸ್ಯರ ಸಮಿತಿ ಕರಡು ಮಸೂದೆಯನ್ನು ಸಿದ್ಧಪಡಿಸಿದೆ. ಜಿಬಿಎ ಜಾರಿಗೆ ಬಂದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧಿಕಾರಕ್ಕೆ ಕತ್ತರಿ ಬೀಳಲಿದೆ.

ಕರಡು ಮಸೂದೆಯಲ್ಲಿ ಬೆಂಗಳೂರು ಆಡಳಿತದ ನಿರ್ವಹಣೆಗೆ 3 ಹಂತದ ವ್ಯವಸ್ಥೆಯನ್ನು ಪ್ರಸ್ತಾಪಿಸಲಾಗಿದೆ. ಇದು ಜಾರಿಗೆ ಬಂದರೆ ದೇಶದಲ್ಲಿಯೇ ಈ ರೀತಿಯ ಆಡಳಿತ ಪ್ರಯೋಗ ಮೊದಲು ಎಸಿಸಲಿದೆ. ಆದರೆ ಇದಕ್ಕೆ ಇನ್ನೂ ಕರ್ನಾಟಕ ಸರ್ಕಾರದ ಅನುಮೋದನೆ ಸಿಕ್ಕಿಲ್ಲ.
ಜಿಬಿಎ ಆಡಳಿತ ವ್ಯವಸ್ಥೆ: ಕರಡು ಮಸೂದೆಯ ಪ್ರಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದರೆ ಆರ್ಥಿಕ ಬಲ ಹೆಚ್ಚಲಿದೆ ಮತ್ತು ಬಹು ಪಾಲಿಕೆಗಳು, ಇಲಾಖೆಗಳ ಮೇಲುಸ್ತುವಾರಿ ಇರಲಿದೆ. ಇದರಿಂದಾಗಿ ಆಡಳಿತದಲ್ಲಿ ಮಹತ್ವದ ಬದಲಾವಣೆಯಾಗಲಿದೆ.
ಜಿಬಿಎ ಮಸೂದೆ ಪ್ರಕಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಪ್ರಾಧಿಕಾರ ರಚನೆಯಾಗಲಿದೆ. ಪಾಲಿಕೆ ಸದಸ್ಯರಿಂದ ಆಯ್ಕೆಯಾಗುವ ಮೇಯರ್‌ಗಳು, ಆಯ್ದ ಪಾಲಿಕೆ ಸದಸ್ಯರು, ನಗರದ ಎಲ್ಲಾ ಶಾಸಕರು ಮತ್ತು ತಜ್ಞರು ಸಮಿತಿಯ ಸದಸ್ಯರಾಗಿದ್ದಾರೆ.
ಬೆಂಗಳೂರು ನಗರದ ಪ್ರಮುಖ ಸಂಸ್ಥೆಗಳಾದ ಬೆಸ್ಕಾಂ, ಜಲಮಂಡಳಿ, ನಮ್ಮ ಮೆಟ್ರೋ, ಸಾರಿಗೆ ಎಲ್ಲವೂ ಪ್ರಾಧಿಕಾರದ ಅಡಿಯಲ್ಲಿ ಬರುತ್ತದೆ. ಬಿಡಿಎ ಭೂ ಕಬಳಿಕೆ ಹಾಗೂ ಅಭಿವೃದ್ಧಿ ನಕ್ಷೆ ಅನುಮೋದಿಸುವ ಅಧಿಕಾರವನ್ನು ಕಳೆದುಕೊಳ್ಳಲಿದೆ. ರಸ್ತೆ, ನೀರು ಕಾಲುವೆಯಂತಹ ಬೃಹತ್ ಮೂಲ ಸೌಕರ್ಯ ಯೋಜನೆಯನ್ನು ಕೈಗೆತ್ತಿಕೊಳ್ಳುವ ಜವಾಬ್ದಾರಿ ಹೊಂದಲಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿಗೆ ಬಂದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ ರದ್ದಾಗಲಿದ್ದು, ಹಲವು ಹಂತದ ಪಾಲಿಕೆ ಜಾರಿಗೆ ಬರಲಿದೆ. ಆಗ ವಾರ್ಡ್‌ಗಳ ಆಡಳಿತ ವಿಕೇಂದ್ರಿಕರಣಗೊಳ್ಳಲಿದೆ. ಬಿಬಿಎಂಪಿ ಪ್ರಸ್ತುತ 708 ಚದರ ಕಿಲೋಮಿಟರ್ ಪ್ರದೇಶದಲ್ಲಿ ವ್ಯಾಪಿಸಿದೆ. ಜಿಬಿಎ ಅಡಿ ಅದು 250 ಚದರ ಮೀಟರ್ ಇನ್ನೂ ಹೆಚ್ಚಾಗಲಿದೆ. ನಗರದ ಹೊರ ಭಾಗದಲ್ಲಿ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳನ್ನು ಜಿಬಿಎ ವ್ಯಾಪ್ತಿಗೆ ಸೇರಿಸಲಾಗುತ್ತದೆ.
ಬಿಬಿಎಂಪಿ ವಿಭಜನೆ ಮಾಡಿದರೆ ಯೋಜನೆ ವಿಫಲವಾಗುತ್ತದೆ ಎಂದು ಜಿಬಿಎ ಹೇಳಿದೆ. ದೆಹಲಿಯಲ್ಲಿ ಮೂರು ಪಾಲಿಕೆಯನ್ನು ಮಾಡಿ ಅವು ಆರ್ಥಿಕ ಶಕ್ತಿ ಇಲ್ಲದೇ ಸೊರಗುತ್ತಿವೆ. ಆದ್ದರಿಂದ ಬಿಬಿಎಂಪಿಯನ್ನು ಮೂರು ಪಾಲಿಕೆಗಳಾಗಿ ಮಾಡಿದರೆ ಉಪಯೋಗ ಆಗುವುದಿಲ್ಲ ಎಂದು ನಾಲ್ವರ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಡಿ. ಕೆ. ಶಿವಕುಮಾರ್ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಬಳಿಕ ಬ್ರಾಂಡ್ ಬೆಂಗಳೂರು ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಜಿಬಿಎ ಮಸೂದೆಯನ್ನು ವಿಧಾನಸಭೆ ಅಧಿವೇಶನದಲ್ಲಿ ಯಾವಾಗ ಮಂಡಿಸಲಾಗುತ್ತದೆ? ಎಂಬ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ.
ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ. ಎಸ್. ಪಾಟೀಲ್ ಅಧ್ಯಕ್ಷತೆಯ ಸಮಿತಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಬಗ್ಗೆ ಹಲವಾರು ಅಂಶಗಳನ್ನು ಉಲ್ಲೇಖ ಮಾಡಿದೆ. ಬೆಂಗಳೂರು ನಗರದ ಆಡಳಿತವನ್ನು ನಿರ್ವಹಣೆ ಮಾಡಲು ಹಲವು ಬದಲಾವಣೆಗಳನ್ನು ಶಿಫಾರಸು ಮಾಡಲಾಗಿದೆ.
ಸರ್ಕಾರ ಈ ವರದಿ ಅನುಷ್ಠಾನಕ್ಕಾಗಿ ಕಾಯ್ದೆ ರೂಪಿಸಬೇಕಿದೆ. ಈ ವರದಿ ಜಾರಿಗೊಳಿಸುವ ಕುರಿತು ಸರ್ಕಾರವೇ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ. ಈಗಾಗಲೇ ಬಿಬಿಎಂಪಿ ಪುನರ್ ರಚನಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ, ಇಂತಹ ಸಂದರ್ಭದಲ್ಲಿಯೇ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವರದಿಯೂ ಸರ್ಕಾರದ ಕೈ ಸೇರಿದೆ.












Click it and Unblock the Notifications