Virus Risk: 'ಸಾಂಕ್ರಾಮಿಕ ಸನ್ನದ್ಧತೆ ಆವಿಷ್ಕಾರ ಕೇಂದ್ರ' ಸ್ಥಾಪನೆ ಚಿಂತನೆ: ಅಶ್ವಥ್ ನಾರಾಯಣ
ಮನುಷ್ಯರಷ್ಟೇ ಅಲ್ಲದೇ ಪ್ರಾಣಿಗಳು ಮತ್ತು ಪರಿಸರಕ್ಕೂ ಅಪಾಯ ತಂದೊಡ್ಡಬಹುದಾದ ಸೋಂಕುಗಳ ವಿರದ್ಧದ ಹೋರಾಟಕ್ಕೆ ನೆರವಾಗಲು ರಾಜ್ಯ ಸರ್ಕಾರ ಭಾರತ್ ಬಯೋಟೆಕ್ ಮತ್ತು ವಿಸ್ಕಾನ್ಸಿಸ್ ವಿಶ್ವವಿದ್ಯಾಲಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಿದೆ.
ಬೆಂಗಳೂರು, ಫೆಬ್ರವರಿ 09: ಮನುಷ್ಯರಷ್ಟೇ ಅಲ್ಲದೇ ಪ್ರಾಣಿಗಳು ಮತ್ತು ಪರಿಸರಕ್ಕೂ ಅಪಾಯ ತಂದೊಡ್ಡಬಹುದಾದ ಸೋಂಕುಗಳ ವಿರದ್ಧದ ಹೋರಾಟಕ್ಕೆ ನೆರವಾಗಲು ರಾಜ್ಯ ಸರ್ಕಾರ ಭಾರತ್ ಬಯೋಟೆಕ್ ಮತ್ತು ವಿಸ್ಕಾನ್ಸಿಸ್ ವಿಶ್ವವಿದ್ಯಾಲಯಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಿದೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಗುರುವಾರ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರು ಹಾಗೂ ಅಧಿಕಾರಿಗಳು ಮಹತ್ವದ ಸಭೆ ನಡೆಸಿದರು. ಈ ವೇಳೆ ಲಸಿಕೆ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಭಾರತ್ ಬಯೋಟೆಕ್, ವಿಸ್ಕಾನ್ಸಿನ್ ವಿಶ್ವವಿದ್ಯಾಲಯ ನಿಯೋಗದ ಜೊತೆಗೆ ಚರ್ಚಿಸಿ ಮಹತ್ವ ನಿರ್ಧಾರ ಕೈಗೊಳ್ಳಲಾಗಿದೆ.
ಮನುಷ್ಯರು ಸೇರಿದಂತೆ ಪ್ರಾಣಿಪಕ್ಷಿಗಳಿಗೆ ಮತ್ತು ಪರಿಸರಕ್ಕೆ ವಿವಿಧ ತಳಿಗಳ ಸೋಂಕಿನಿಂದ ಎದುರಾಗಬಹುದಾದ ಅಪಾಯಗಳನ್ನು ಸಮರ್ಥವಾಗಿ ಎದುರಿಸಬೇಕಿದೆ. ಅದಕ್ಕಾಗಿ 'ಸಾಂಕ್ರಾಮಿಕ ಸನ್ನದ್ಧತೆ ನಾವೀನ್ಯತೆ ಕೇಂದ್ರ' ( Pandemic Preparedness Innovation Center) ಸ್ಥಾಪನೆ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ಸಭೆಯಲ್ಲಿ ಮಾತನಾಡಿದ ಐಟಿ ಬಿಟಿ ಖಾತೆ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು, ವಿಶ್ವವನ್ನೇ ಬಹುಕಾಲ ಕಾಡಿದ ಕೋವಿಡ್ ನಂತರದಲ್ಲಿ ಹೊಸ ಬಗೆಯ ವೈರಾಣು/ ಸೋಂಕುಗಳು ಪತ್ತೆಯಾದವು. ಇಂದಿಗೂ ಉಪತಳಿ ಸೋಂಕುಗಳು ಪತ್ತೆಯಾಗುತ್ತಲೇ ಇವೆ. ಇದರಿಂದ ಯಾವುದೇ ಸಂದರ್ಭದಲ್ಲಿ ಮನುಷ್ಯರು, ಪ್ರಾಣಿಪಕ್ಷಿಗಳು ಹಾಗೂ ಪರಿಸರ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಇಂತಹ ಅಪಾಯ ಪರಿಸ್ಥಿತಿ ಎದುರಿಸಲು 'ಸಾಂಕ್ರಾಮಿಕ ಸನ್ನದ್ಧತೆ ನಾವೀನ್ಯತೆ ಕೇಂದ್ರ' ಸ್ಥಾಪನೆ ಅತ್ಯಗತ್ಯವಾಗಿದೆ. ಈ ಸಂಬಂಧ ಭಾರತ್ ಬಯೋಟೆಕ್ ಮತ್ತು ವಿಸ್ಕಾನ್ಸಿಸ್ ವಿಶ್ವವಿದ್ಯಾಲಗಳ ಸಹಭಾಗಿತ್ವ ಮಾಡಿಕೊಳ್ಳಲಿದೆ. ಇದರಿಂದ
ವಿಸ್ಕಾನ್ಸಿನ್ ತಜ್ಞರು ನಡೆಸುವ ಅಧ್ಯಯನಗಳ ಕುರಿತು ಸರ್ಕಾರ ಮಾಹಿತಿ ವಿನಿಮಯ ಸಾಧ್ಯವಾಗುತ್ತದೆ ಎಂದರು.

ಜನರ ಆರೋಗ್ಯ ರಕ್ಷಣೆಗೆ ಹಾಗೂ ಸುಸ್ಥಿರ ಪರಿಸರ ನಿರ್ಮಾಣಕ್ಕೆ ಪೂರಕವಾಗಿ ವ್ಯವಸ್ಥೆಗಳನ್ನು ಒದಗಿಸಲು ಸರ್ಕಾರ ಯೋಜಿಸಿದೆ. ಸಹಭಾಗಿತ್ವದ ಸಂಸ್ಥೆಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಭಾರತ್ ಬಯೋಟೆಕ್ ಹಾಗೂ ಅಮೆರಿಕದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದ ಪ್ರತಿನಿಧಿಗಳು, ಬಯೋಟೆಕ್ ಸಹ-ಸಂಸ್ಥಾಪಕ ಕೃಷ್ಣ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಮಣರೆಡ್ಡಿ, ಕ್ಯಾನ್ಸರ್ ತಜ್ಞರು ಡಾ. ವಿಶಾಲ್ ರಾವ್, ಬಯೊಟೆಕ್ ವ್ಯವಸ್ಥಾಪಕ ನಿರ್ದೇಶಕ ರವಿ, ಬಿಬಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಜಿತೇಂದ್ರ ಕುಮಾರ್, ವಿಸ್ಕಾನ್ಸಿನ್ ನಮ್ಯಾಡಿಸನ್ ಮತ್ತಿತರರು ನಿಯೋಗದಲ್ಲಿದ್ದರು.












Click it and Unblock the Notifications