ಬಿಬಿಎಂಪಿಗೆ ಬಂತು ಸರ್ಕಾರದ ಶೋಕಾಸ್ ನೋಟಿಸ್
ಬೆಂಗಳೂರು, ಮಾ. 19 : ಹಗರಣಗಳಿಂದ ಸುದ್ದಿಯಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಸರ್ಜಿಸಲು ಸರ್ಕಾರ ಚಿಂತನೆ ನಡೆಸಿದೆ. ಇದರ ಭಾಗವಾಗಿಯೇ ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಮಾ.30ರೊಳಗೆ ಉತ್ತರ ನೀಡಬೇಕು ಎಂದು ಸೂಚನೆ ನೀಡಿದೆ.
ಬುಧವಾರ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಎನ್.ಗೋಪಾಲಯ್ಯ ಅವರು ಬಿಬಿಎಂಪಿ ಮೇಯರ್, ಉಪಮೇಯರ್, ಆಯುಕ್ತರು, ಎಲ್ಲ ಸ್ಥಾಯಿ ಸಮಿತಿಗಳ ಅಧ್ಯಕ್ಷರಿಗೆ ನೋಟಿಸ್ ನೀಡಿದ್ದಾರೆ. ಇದರಿಂದಾಗಿ ಪಾಲಿಕೆಯ ಆಡಳಿತ ಅವಧಿಗೂ ಮುನ್ನವೇ ಅಂತ್ಯಗೊಳ್ಳುವ ಸಾಧ್ಯತೆ ಇದೆ.[ಬಿಬಿಎಂಪಿ ಬಜೆಟ್ ಮುಖ್ಯಾಂಶಗಳು]

ನೋಟಿಸ್‌ನಲ್ಲೇನಿದೆ : ಸಂವಿಧಾನದತ್ತ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫಲವಾದ ಬಿಬಿಎಂಪಿಯನ್ನು ಕೆಎಂಸಿ ಕಾಯಿದೆ ಸೆಕ್ಷನ್ 99ರ ಅನ್ವಯ ಏಕೆ ವಿಸರ್ಜನೆ ಮಾಡಬಾರದು? ಎಂದು ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ. [ಬಿಬಿಎಂಪಿ ಸೂಪರ್ ಸೀಡ್]
ಬಿಬಿಎಂಪಿಯನ್ನು ವಿಸರ್ಜನೆ ಮಾಡಬಾರದು ಎನ್ನುವುದಾದದರೆ ಸೂಕ್ತ ಕಾರಣಗಳನ್ನು ನೀಡಿ, ಮಾ.30ರೊಳಗೆ ವಿವರಣೆ ನೀಡುವಂತೆ ನೋಟಿಸ್‌ನಲ್ಲಿ ಸೂಚನೆ ನೀಡಲಾಗಿದೆ. ಅಂದಹಾಗೆ ಏ.22ಕ್ಕೆ ಬಿಬಿಎಂಪಿ ಅವಧಿ ಪೂರ್ಣಗೊಳ್ಳಲಿದ್ದು, ಚುನಾವಣೆ ನಡೆಯಬೇಕಾಗಿದೆ. ಅದಕ್ಕೂ ಮೊದಲೇ ವಿಸರ್ಜನೆ ಆಗುವುದೇ? ಎಂಬುದು ಸದ್ಯದ ಪ್ರಶ್ನೆ.
ಬಿಬಿಎಂಪಿಯಲ್ಲಿ 2008-09ನೇ ಸಾಲಿನಿಂದ 2012-13ನೇ ಸಾಲಿನವರೆಗೆ ಜಾರಿಯಾದ ಹಲವು ಕಾಮಗಾರಿಗಳಲ್ಲಿನ ಅವ್ಯವಹಾರ ಕುರಿತ ಮಹಾಲೇಖಪಾಲರ ವರದಿಯನ್ನು ಮತ್ತು ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ನಿಯಮ ಉಲ್ಲಂಘನೆಗಳಿಂದ ಪಾಲಿಕೆ ಬೊಕ್ಕಸಕ್ಕೆ ಆಗಿರುವ ನಷ್ಟದ ಬಗ್ಗೆ ಉಪಲೋಕಾಯುಕ್ತರು ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿ ಈ ನೋಟಿಸ್ ಜಾರಿಗೊಳಿಸಲಾಗಿದೆ.











Click it and Unblock the Notifications