Chandru Murder Case : ಬೇಜಾವಬ್ದಾರಿ ಹೇಳಿಕೆ ಕೊಟ್ಟು ಯೂಟರ್ನ್ ಹೊಡೆದ ಗೃಹ ಸಚಿವ ಆರಗ ಜ್ಞಾನೇಂದ್ರ
ಬೆಂಗಳೂರು ಏಪ್ರಿಲ್ 6: ಬೆಂಗಳೂರಿನಲ್ಲಿ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಹೇಳಿಯನ್ನು ವಾಪಸ್ಸು ಪಡೆದಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, 'ನನ್ನ ಹೇಳಿಕೆಯಲ್ಲಿ ತಪ್ಪಾಗಿದೆ. ತಕ್ಷಣದ ಮಾಹಿತಿಯನ್ನು ಆಧರಿಸಿ ಮಾಹಿತಿಯನ್ನು ಕೊಟ್ಟಿದ್ದೆ. ಅದು ಭಾಷೆ ವಿಚಾರಕ್ಕೆ ಆಗಿರುವ ಹತ್ಯೆ ಅಲ್ಲ. ಮಾಹಿತಿ ಇಲ್ಲದೇ ಮಾತನಾಡಿದೆ. ಅದು ತಪ್ಪಾಗಿದೆ. ಬೈಕ್ ಡಿಕ್ಕಿಯಾಗಿದ್ದು ಬಿಟ್ಟರೆ ಯಾವುದೇ ಹಿನ್ನೆಲೆ ಇಲ್ಲ' ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಯೂಟರ್ನ್ ಹೊಡೆದಿದ್ದಾರೆ.
ಎರಡು ಬೈಕ್ ನಡುವೆ ಡಿಕ್ಕಿಯಾಗಿ ಗಲಾಟೆಯಾಗಿದೆ. ಈ ವೇಳೆ ಚಂದ್ರು ತೊಡೆಗೆ ಒಬ್ಬ ಚಾಕು ಇರಿದಿದ್ದಾನೆ. ಇದರಿಂದ ರಕ್ತಸ್ರಾವವಾಗಿ ಚಂದ್ರು ಮೃತಪಟ್ಟಿದ್ದಾನೆ. ನನ್ನ ಹೇಳಿಕೆಯಲ್ಲಿ ಉರ್ದು ಎನ್ನುವ ಭಾಷೆ ಬಂದಿದೆ. ಆ ರೀತಿ ಏನು ಇಲ್ಲ. ಸದ್ಯ ಪೊಲೀಸರಿಂದ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಆರಗ ಜ್ಞಾನೇಂದ್ರ ಯೂಟರ್ನ್ ಹೊಡೆದಿದ್ದಾರೆ.
'ಆರಗ ಜ್ಞಾನೇಂದ್ರ ಅವರೇ ತೀರ್ಪು ಕೊಟ್ಟಿದ್ದಾರೆ' ಹೆಚ್‌ಡಿಕೆ
ಬೆಂಗಳೂರಿನಲ್ಲಿ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಮತ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. 'ಗೃಹ ಸಚಿವರಿಗೆ ಜವಬ್ದಾರಿಯಿಲ್ಲ. ಸಣ್ಣತನದಿಂದ ಹೇಳಿಕೆ ನೀಡಿದ್ದಾರೆ. ಸಮಾಜದಲ್ಲಿ ಅಶಾಂತಿ ತರುವಂತ ಮಾತನಾಡಿದ್ದಾರೆ. 'ಯುವಕನಿಗೆ ಉರ್ದು ಮಾತನಾಡಲು ಬಂದಿಲ್ಲ' ಎನ್ನುವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವರ್ಣಾತ್ಮಕ ರೀತಿಯಲ್ಲಿ ವರ್ಣನೆ ಕೊಟ್ಟಿದ್ದಾರೆ. ಅವರಿಗೆ ಜವಬ್ದಾರಿ ಇಲ್ಲ. ಅವರ ಹೇಳಿಕೆಯಲ್ಲಿ ಸತ್ಯಾಂಶ ಇಲ್ಲ. ತನಿಖೆಯಾಗದೇ ಅವರು ಸಾರ್ವಜನಿಕವಾಗಿ ಹೇಳಿಕೆ ಕೊಟ್ಟಿದ್ದಾರೆ. ಇದರಲ್ಲಿ ಯಾವುದು ಸತ್ಯ ಯಾವುದು ಅಸತ್ಯ? ಮಂತ್ರಿನೇ ತೀರ್ಪು ಕೊಟ್ಟ ಮೇಲೆ ಇನ್ಯಾವ ತನಿಖೆ ನಡೆಸುತ್ತೀರಿ? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಪೊಲೀಸರ ತನಿಖೆಯಾಗದೆ ಘಟನೆಯ ಬಗ್ಗೆ ಬೇರೆ ಬೇರೆ ಹೇಳಿಕೆ ನೀಡಲಾಗಿದೆ. ಆರಗ ಜ್ಞಾನೇಂದ್ರ ಅವರು ಯುವಕನನ್ನು ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಲಾಗಿದೆ ಎಂದು ವರ್ಣಮಯವಾಗಿ ಹೇಳಿಕೆ ಕೊಟ್ಟಿದ್ದಾರೆ. ಉರ್ದು ಭಾಷೆ ಮಾತನಾಡಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ ಇದು ಸಮಾಜದಲ್ಲಿ ಶಾಂತಿ ಕದಡುವಂತ ಹೇಳಿಕೆ ಎಂದು ಹೆಚ್ ಡಿ ಕುಮಾರಸ್ವಾಮಿ ದೂರಿದ್ದಾರೆ.
ಪೊಲೀಸ್ ಇಲಾಖೆ ಮೇಲೆ ಸ್ವಲ್ಪ ನಂಬಿಕೆ ಇದೆ. ಆದರೆ ಗೃಹ ಸಚಿವರು ಅದನ್ನು ಕಡಿಮೆ ಮಾಡಿದ್ದಾರೆ. ಇಂಥಹ ಕೊಲೆ ಪ್ರಕರಣಗಳು ನಡೆದಿವೆ. ಆದರೆ ಈವರೆಗೆ ಇಂಥಹ ಹೇಳಿಕೆಗಳು ಬಂದಿಲ್ಲ. ಆದರೆ ಯುವಕನ ಕೊಲೆ ಪ್ರಕರಣವನ್ನು ದಲಿತನ ಕೊಲೆ ಎಂದು ಹೇಳಿಕೆ ನೀಡಿದ್ದಾರೆ, ಜೊತೆಗೆ ವಿಚಾರಣೆಗೂ ಮುನ್ನ ಅವರೇ ತೀರ್ಪನ್ನು ಕೊಟ್ಟಿದ್ದಾರೆ. ಬಿಜೆಪಿಯವರು ಕೇವಲ ಮತ ರಾಜಕಾರಣ ಮಾಡುತ್ತಾರೆ ಎಂದು ಹೆಚ್‌ಡಿಕೆ ಹರಿಹಾಯ್ದಿದ್ದಾರೆ.

ಮೂವರ ಬಂಧನ
ಬೆಂಗಳೂರಿನಲ್ಲಿ ಬೈಕ್ ಡಿಕ್ಕಿಯ ವಿಚಾರವಾಗಿ ವಾದ ವಿವಾದದ ನಂತರ ಒಬ್ಬನನ್ನು ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್,'' ಏಪ್ರಿಲ್ 5ರ ಮಧ್ಯ ರಾತ್ರಿ ಸ್ನೇಹಿತನೊಂದಿಗೆ ಚಂದ್ರು ಮೈಸೂರು ರಸ್ತೆ ಕಡೆಗೆ ಹೋಗಿದ್ದರು. ವಾಪಸ್ಸು ಮರಳುತ್ತಿದ್ದಾಗ ಅವರ ಬೈಕ್ ಮತ್ತೊಂದು ಬೈಕ್‌ಗೆ ತಗುಲಿದೆ. ಈ ವೇಳೆ ಗಲಾಟೆ ನಡೆದಿದೆ. ಗಲಾಟೆಗೆ ಸ್ಥಳೀಯ ಗುಂಪು ಸೇರಿಕೊಂಡಿದೆ. ಗುಂಪಿನಲ್ಲಿದ್ದ ಓರ್ವ ವ್ಯಕ್ತಿ ಚಂದ್ರು ಮೇಲೆ ಹಲ್ಲೆ ಮಾಡಿದ್ದಾನೆ. ಕೂಡಲೇ ಗಾಯಗೊಂಡಿದ್ದ ಚಂದ್ರು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಧಿಕ ರಕ್ತ ಸ್ರಾವದಿಂದಾಗಿ ಆತ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications