ಬಿ ಖಾತಾ ಸೈಟ್ ಮಾಲೀಕರಿಗೆ ಸಿಹಿ ಸುದ್ದಿ; ಆಸ್ತಿ ಖರೀದಿ ಇನ್ಮುಂದೆ ಮತ್ತಷ್ಟು ಸುಲಭ
ಬೆಂಗಳೂರು: ಮಾಸ್ಟರ್ ಪ್ಲಾನ್ (ಸಿಡಿಪಿ) ಪ್ರದೇಶದಲ್ಲಿ ಭೂಮಿಯನ್ನು ಸ್ವಯಂ ಪರಿವರ್ತನೆ ಮಾಡುವ ಅಗತ್ಯವನ್ನು ಸರ್ಕಾರ ಇದೀಗ ತೆಗೆದುಹಾಕಿದೆ. ಮಾಸ್ಟರ್ ಪ್ಲಾನ್ ಪ್ರಕಾರ ನೇರವಾಗಿ ಯೋಜನೆ ಅನುಮೋದನೆ ಪಡೆಯಬಹುದು. ಯೋಜನಾ ಅನುಮೋದನೆಯ ಭಾಗವಾಗಿ ಪರಿವರ್ತನೆ ಮಾಡಲಾಗುತ್ತದೆ. ಅಲ್ಲದೆ ಮಾಸ್ಟರ್ ಪ್ಲಾನ್ ಪ್ರಕಾರ ಲಕ್ಷಾಂತರ ಜಿಬಿಎ ಬಿ ಖಾತಾ ಸೈಟ್ ಮಾಲೀಕರಿಗೆ ಪ್ರಯೋಜನವಾಗುವಂತೆ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಸಕ್ರಿಯಗೊಳಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಶನಿವಾರ ವಿಕಾಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಬಿಎ ವ್ಯಾಪ್ತಿಯ ಭೂಮಿ ಸ್ವಯಂ ಪರಿವರ್ತನೆ (Land Auto Conversion) ನೂತನ ತಂತ್ರಾಂಶವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮಾಸ್ಟರ್ ಪ್ಲಾನ್ ಪ್ರಕಾರ ನೇರವಾಗಿ ಯೋಜನಾ ಅನುಮೋದನೆ ಪಡೆಯಬಹುದಾಗಿದೆ. ಯೋಜನಾ ಅನುಮೋದನೆಯ ಭಾಗವಾಗಿಯೇ ಭೂ ಪರಿವರ್ತನೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಬಿ ಖಾತಾದಿಂದ ಎ ಖಾತಾಗೆ ಸುಲಭ
ಈ ನಿರ್ಧಾರದಿಂದ ಲಕ್ಷಾಂತರ ಜಿಬಿಎ ಬಿ ಖಾತಾ ಸೈಟ್ ಮಾಲೀಕರಿಗೆ ದೊಡ್ಡ ಅನುಕೂಲವಾಗಲಿದೆ. ಬಿ ಖಾತಾದಿಂದ ಎ ಖಾತಾಗೆ ಪರಿವರ್ತಿಸುವ ಪ್ರಕ್ರಿಯೆಯನ್ನು ಸರ್ಕಾರ ಸಕ್ರಿಯಗೊಳಿಸಿದ್ದು, ಕಾನೂನು ಚೌಕಟ್ಟನ್ನು ಸರಳೀಕರಿಸಲಾಗಿದೆ ಎಂದು ತಿಳಿಸಿದರು. ಈ ಹಿಂದೆ ಅನಧಿಕೃತ ಸೈಟ್‌ಗಳನ್ನು ಖರೀದಿಸಿದ್ದ ಆಸ್ತಿ ಮಾಲೀಕರಿಗೂ ಇದೀಗ ಕಾನೂನು ಬಲ ಸಿಗಲಿದೆ ಎಂದರು. ಈವರೆಗೆ ಮಾಸ್ಟರ್ ಪ್ಲಾನ್ ಒಳಗಿದ್ದ ಭೂಮಿಗೂ ಪರಿವರ್ತನೆ ಅಗತ್ಯವಿದ್ದು, ಕನಿಷ್ಠ 4-6 ತಿಂಗಳು ಸಮಯ ತೆಗೆದುಕೊಳ್ಳುತ್ತಿತ್ತು. ಇದರಿಂದ ಮಧ್ಯವರ್ತಿಗಳ ದೌರ್ಜನ್ಯ, ವಿಳಂಬ, ಕಿರುಕುಳ ಮತ್ತು ಭ್ರಷ್ಟಾಚಾರ ಹೆಚ್ಚಾಗಿತ್ತು. ಇದರ ಅಂತಿಮ ಹೊರೆ ಸಾಮಾನ್ಯ ಸೈಟ್ ಖರೀದಿದಾರರ ಮೇಲೇ ಬೀಳುತ್ತಿತ್ತು ಎಂದು ಕೃಷ್ಣಬೈರೇಗೌಡ ವಿಷಾದ ವ್ಯಕ್ತಪಡಿಸಿದರು.
ಸ್ವಯಂ ಪರಿವರ್ತನೆ ಜಾರಿಯಿಂದ ಶೋಷಣೆ, ವಿಳಂಬ ನೀತಿ ಹಾಗೂ ಭ್ರಷ್ಟಾಚಾರವನ್ನು ಮೂಲದಲ್ಲೇ ತಡೆಯಲು ಇಲಾಖೆ ಮುಂದಾಗಿದೆ. ಆಡಳಿತ ಸುಧಾರಣೆ ಮತ್ತು ಪಾರದರ್ಶಕತೆಯ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಅವರು ಹೇಳಿದರು. ಈ ಸುಧಾರಣೆಗಳು ಕೇವಲ ವಸತಿ ಅಭಿವೃದ್ಧಿಗೆ ಮಾತ್ರ ಸೀಮಿತವಾಗದೇ, ಮಾಸ್ಟರ್ ಪ್ಲಾನ್‌ನಲ್ಲಿ ಅನುಮತಿ ನೀಡಲಾದ ಕೈಗಾರಿಕಾ ಹಾಗೂ ಇತರ ಬಳಕೆಗಳಿಗೂ ಅನ್ವಯವಾಗಲಿವೆ. ಭೂ ಅಭಿವೃದ್ಧಿಯ ವೆಚ್ಚ ಮತ್ತು ಸಮಯ ಎರಡೂ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಸಚಿವರು ಭರವಸೆ ನೀಡಿದರು.
ಆಸ್ತಿ ಮೌಲ್ಯ ಹೆಚ್ಚಳ, ಸಾಲ ಪಡೆಯಲು ಸುಲಭ
ಎ ಖಾತಾ ದೊರಕುವುದರಿಂದ ಆಸ್ತಿಗಳಿಗೆ ಕಾನೂನು ಮಾನ್ಯತೆ ಸಿಗಲಿದ್ದು, ಬ್ಯಾಂಕ್ ಸಾಲ, ಆಸ್ತಿ ಮೌಲ್ಯ ಹೆಚ್ಚಳ ಹಾಗೂ ವಹಿವಾಟುಗಳು ಸುಲಭವಾಗಲಿವೆ. ಆನ್‌ಲೈನ್ ಪಾರದರ್ಶಕತೆ, ಸಮಯ-ಪರಿಮಿತಿ ಹಾಗೂ ಸ್ವಯಂಚಾಲಿತ ಪ್ರಕ್ರಿಯೆಗಳ ಮೂಲಕ ಸೇವೆಗಳನ್ನು ಮತ್ತಷ್ಟು ಜನಪರಗೊಳಿಸಲಾಗಿದೆ. ಇ-ಖಾತಾ ಜೊತೆಗೆ ಎಲ್ಲ ದಾಖಲೆಗಳ ಇಂಟಿಗ್ರೇಷನ್ ಮೂಲಕ ಆಸ್ತಿ ಮಾಲೀಕತ್ವಕ್ಕೆ ಹೆಚ್ಚಿನ ಬಲ ಸಿಗಲಿದೆ ಎಂದು ಹೇಳಿದರು. ಇದರಿಂದ ಪ್ರಮುಖವಾಗಿ ಬೆಂಗಳೂರು ವ್ಯಾಪ್ತಿಯಲ್ಲಿ ಆಸ್ತಿ ಖರೀದಿ ಮತ್ತಷ್ಟು ಸರಳಗೊಳ್ಳಲಿದೆ.
ಈ ನಿರ್ಧಾರವನ್ನು ಭೂ ಅಭಿವೃದ್ಧಿ ಕ್ಷೇತ್ರದ ಮಹತ್ವದ ಆಡಳಿತ ಸುಧಾರಣೆ ಎಂದು ಹೇಳಲಾಗಿದ್ದು, ನಗರೀಕರಣದ ಒತ್ತಡದ ನಡುವೆಯೂ ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಆಸ್ತಿ ಖರೀದಿಗೆ ದಾರಿ ಸುಗಮಗೊಳಿಸುವ ಗುರಿ ಸರ್ಕಾರದದ್ದಾಗಿದೆ. ಈ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಸರ್ಕಾರದ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಮೌನೀಶ್ ಮುದ್ಗಿಲ್ ಹಾಗೂ ಕಂದಾಯ ಆಯುಕ್ತೆ ಮೀನಾ ನಾಗರಾಜ್ ಉಪಸ್ಥಿತರಿದ್ದರು.












Click it and Unblock the Notifications