ಕೆಎಸ್‌ಆರ್‌ಟಿಸಿ ಬಸ್ ಹತ್ತಲು ಇಂದಿನಿಂದ ಪೀಣ್ಯಕ್ಕೆ ಹೋಗಿ
ಬೆಂಗಳೂರು, ಸೆ. 10 : ಪೀಣ್ಯದಲ್ಲಿ ಕೆಎಸ್‌ಆರ್‌ಟಿಸಿ ನೂತನವಾಗಿ ನಿರ್ಮಿಸಿರುವ ಬಸವೇಶ್ವರ ಬಸ್ ನಿಲ್ದಾಣ ಇಂದಿನಿಂದ ಕಾರ್ಯರಂಭ ಮಾಡಲಿದೆ. ಉತ್ತರ ಕರ್ನಾಟಕದ ನಾನಾ ಪ್ರದೇಶಗಳಿಗೆ ಕೆಂಪೇಗೌಡ ಬಸ್ ನಿಲ್ದಾಣದಿಂದ (ಕೆಬಿಎಸ್) ಸಂಚರಿಸುತ್ತಿದ್ದ 146 ವೇಗದೂತ ಬಸ್‌ಗಳು ಬುಧವಾರದಿಂದ ಪೀಣ್ಯ ನಿಲ್ದಾಣದಿಂದ ಹೊರಡಲಿವೆ.
ಬಸವೇಶ್ವರ ಬಸ್ ನಿಲ್ದಾಣಕ್ಕೆ ತೆರಳಲು ಕೆಎಸ್‌ಆರ್‌ಟಿಸಿ ಮೆಜೆಸ್ಟಿಕ್‌ನಿಂದ ಪೀಣ್ಯಕ್ಕೆ 10 ಸಂಪರ್ಕ ಸಾರಿಗೆ ಬಸ್ ವ್ಯವಸ್ಥೆಯನ್ನು ಮಾಡಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10ರ ತನಕ ಪ್ರತಿ 10-15 ನಿಮಿಷಕ್ಕೊಮ್ಮೆ ಬಸ್ ಮೆಜೆಸ್ಟಿಕ್‌ನಿಂದ ಪೀಣ್ಯಕ್ಕೆ ತೆರಳಲಿದ್ದು, 15 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ. ರಾತ್ರಿ 10 ರ ನಂತರ ಪ್ರತಿ 30 ನಿಮಿಷಕ್ಕೊಂದು ಬಸ್ ಪೀಣ್ಯಕ್ಕೆ ತೆರಳಲಿದೆ.

ಬಸ್ಸುಗಳು ಪೀಣ್ಯದಿಂದ ಸಂಚರಿಸುವ ಹಿನ್ನಲೆಯಲ್ಲಿ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮೆಜೆಸ್ಟಿಕ್‌ನಿಂದ ಹೊರಡುತ್ತಿದ್ದ ಸಮಯದಲ್ಲಿಯೇ ಪೀಣ್ಯ ನಿಲ್ದಾಣದಿಂದಲೂ ಹೊರಡಲಿವೆ. ಆದ್ದರಿಂದ ಪ್ರಯಾಣಿಕರು ಸುಮಾರು ಅರ್ಧಗಂಟೆ ಮೊದಲು ಪೀಣ್ಯ ತಲುಪಬೇಕಾಗುತ್ತದೆ. [ಪೀಣ್ಯ ಬಸ್ ನಿಲ್ದಾಣ ಹೇಗಿದೆ ಗೊತ್ತಾ?]
ಉತ್ತರ ಕರ್ನಾಟಕದಿಂದ ಮಂಗಳವಾರ ರಾತ್ರಿ ಆಗಮಿಸಿದ ಬಸ್ಸುಗಳು ಇಂದು ಬೆಳಗ್ಗೆ ಮೆಜೆಸ್ಟಿಕ್‌ಗೆ ಆಗಮಿಸಿ ನಂತರ ಪೀಣ್ಯಕ್ಕೆ ಮರಳಲಿವೆ. ಬುಧವಾರ ಮುಂಜಾನೆಯಿಂದ ಹೊರಡುವ ಬಸ್ಸುಗಳು ಪೀಣ್ಯದಿಂದ ಸಂಚಾರ ಆರಂಭಿಸಿವೆ. ಇಂದು ಮಧ್ಯಾಹ್ನದ ಬಳಿಕ ಉತ್ತರ ಕರ್ನಾಟಕದ ಕಡೆ ಸಾಗುವ ಯಾವ ವೇಗದೂತ ಬಸ್ಸುಗಳು ಮೆಜೆಸ್ಟಿಕ್‌ಗೆ ಬರುವುದಿಲ್ಲ. [ಊರಿಗೆ ತೆರಳಲು ಪೀಣ್ಯಕ್ಕೆ ಹೋಗಬೇಕು]
ಯಾವ ಬಸ್ಸುಗಳ ಸಂಚಾರ : ಮೊದಲ ಹಂತದಲ್ಲಿ ಪೀಣ್ಯದಿಂದ ಚಿತ್ರದುರ್ಗ, ಸಿರಿಗೆರೆ, ದಾವಣಗೆರೆ, ಹರಿಹರ, ಹರಪನಹಳ್ಳಿ, ಹೂವಿನಹಡಗಲಿ, ರಾಣೆಬೆನ್ನೂರು, ಹಿರೇಕೆರೂರು, ಬ್ಯಾಡಗಿ, ಹಾವೇರಿ, ಹಾನಗಲ್, ಸವಣೂರು, ಹುಬ್ಬಳ್ಳಿ, ಗದಗ, ಧಾರವಾಡ, ಬೆಳಗಾವಿ, ಸಂಕೇಶ್ವರ, ಕೊಲ್ಲಾಪುರ, ಲಕ್ಷ್ಮೇಶ್ವರ, ರೋಣ, ನರಗುಂದ, ರಾಮದುರ್ಗ, ಮುಂಡರಗಿ, ದಾಂಡೇಲಿ, ಹಳಿಯಾಳ, ನವಲಗುಂದ, ಸವದತ್ತಿ, ಬೈಲಹೊಂಗಲ, ಖಾನಾಪುರ, ರಾಯಭಾಗ, ಜಮಖಂಡಿ, ಅಥಣಿ, ಮೀರಜ್, ಗೋಕರ್ಣ ಮಾರ್ಗಗಳಲ್ಲಿ ಸಂಚರಿಸುವ 146 ಬಸ್‌ಗಳು ಹೊರಡಲಿವೆ.












Click it and Unblock the Notifications