ಅಪಾರ್ಟ್ ಮೆಂಟಿನಲ್ಲಿ ಅಟ್ಟಾಡಿಸಿ ಎಚ್ಆರ್ ಹತ್ಯೆ
ಬೆಂಗಳೂರು, ಜೂನ್ 16: ನಗರದ ಎಚ್ಎಸ್ಆರ್ ಲೇಔಟಿನ ಅಪಾರ್ಟ್ ಮೆಂಟಿನಲ್ಲಿ ವಾಸವಾಗಿದ್ದ ಉತ್ತರ ಪ್ರದೇಶ ಲಖ್ನೋ ಮೂಲದ ಸೌರಭ್ ರಸ್ತೋಗಿ ಎಂಬುವವರನ್ನು ತೀವ್ರ ಪ್ರತಿರೋಧದ ನಡುವೆ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಲಾಗಿದೆ.
32 ವರ್ಷದ ಸೌರಭ್ ರಸ್ತೋಗಿ ಜೆನ್ ಪ್ಯಾಕ್ಟ್ ಔಟ್ ಸೋರ್ಸಿಂಗ್ ಬಹುರಾಷ್ಟ್ರೀಯ ಕಂಪನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿದ್ದರು. ಇಬ್ಬಲೂರಿನ ಸನ್ ಸಿಟಿ ಅಪಾರ್ಟ್ ಮೆಂಟಿನಲ್ಲಿ 8ನೇ ಮಹಯಡಿಯಲ್ಲಿ ಎರಡೂವರೆ ವರ್ಷದಿಂದ ಪತ್ನಿಯ ಜತೆ ವಾಸವಾಗಿದ್ದರು. ಕೆಲಸದ ನಿಮಿತ್ತ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದ ಸೌರಭ್, ವಾರದ ಹಿಂದಷ್ಟೇ ನಗರಕ್ಕೆ ಹಿಂದಿರುಗಿದ್ದರು.
3 ದಿನದ ಹಿಂದೆ ಪತ್ನಿ ಅಂಕಿತಾ ಪುಣೆಯಲ್ಲಿರುವ ಸೋದರನ ಮನೆಗೆ ತೆರಳಿದ್ದರಿಂದ ಅಪಾರ್ಟ್ ಮೆಂಟಿನಲ್ಲಿ ಸೌರಭ್ ಒಬ್ಬರೇ ಇದ್ದರು. ಶನಿವಾರ ತಡ ರಾತ್ರಿ ದುಷ್ಕರ್ಮಿಗಳು ಸಲೀಸಾಗಿ ಮನೆಯೊಳಕ್ಕೆ ಪ್ರವೇಶ ಪಡೆದಿದ್ದು, ಸೌರಭ್ ಮೇಲೆ ಭೀಕರವಾಗಿ ಹಲ್ಲೆ ಮಾಡಿ, ತೀವ್ರ ಪ್ರತಿರೋಧದ ನಡುವೆ ಕತ್ತು ಕೊಯ್ದು ಹತ್ಯೆ ಮಾಡಿದ್ದಾರೆ. (ಅಪಾರ್ಟ್ ಮೆಂಟ್ ಮಾಲೀಕರ ಹೊಣೆಗೇಡಿತನವೂ ಕಾರಣ)

ಸೌರಭ್ ರಾತ್ರಿ 10 ಗಂಟೆಯಲ್ಲಿ ನೆರೆಮನೆಯವರೊಂದಿಗೆ ಮಾತನಾಡಿದ್ದಾರೆ. ಆದರೆ 10.30ರ ಬಳಿಕ ಪತ್ನಿ ಅಂಕಿತಾ ಹಲವು ಬಾರಿ ಪತಿ ಸೌರಭ್ ಮೊಬೈಲಿಗೆ ಕರೆ ಮಾಡಿದ್ದಾರೆ. ಆದರೆ ಅವರ ಕರೆಗಳು ನಿರುತ್ತರವಾಗಿವೆ. ತಡಮಾಡದೆ ಅಪಾರ್ಟ್ ಮೆಂಟಿನಲ್ಲಿ ವಾಸವಾಗಿರುವ ಪರಿಚಿತ ಮೃನಾಲ್ ಎಂಬುವವರಿಗೆ ಕರೆ ಮಾಡಿದ ಅಂಕಿತಾ, ತಮ್ಮ ಮನೆಗೆ ಹೋಗಿ ಪತಿಯ ಬಗ್ಗೆ ಸ್ವಲ್ಪ ವಿಚಾರಿಸ್ತೀರಾ ಎಂದು ವಿನಂತಿಸಿದ್ದಾರೆ.
ಅದರಂತೆ ಸೌರಬ್ ಮನೆಗೆ ಬಂದ ಮೃನಾಲ್ ಹಲವು ಬಾರಿ ಕಾಲಿಂಗ್ ಬೆಲ್ ಒತ್ತಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೊನೆಗೆ, ಸೌರಬ್ ನಿದ್ರೆಗೆ ಜಾರಿರಬಹುದು ಎಂದು ಬಗೆದ ಮೃನಾಲ್ ವಾಪಸಾಗಿದ್ದಾರೆ. ಇತ್ತ, ಆತಂಕದಲ್ಲೇ ರಾತ್ರಿ ಕಳೆದ ಅಂಕಿತಾ ಭಾನುವಾರ ಬೆಳಗಾಗುತ್ತಿದ್ದಂತೆಯೇ ಮತ್ತೆ ಪತಿ ಸೌರಭ್ ಮೊಬೈಲಿಗೆ ಕರೆ ಮಾಡಿದ್ದಾರೆ. ಮತ್ತೆ ಉತ್ತರವಿಲ್ಲ. ಇದರಿಂದ ಮತ್ತಷ್ಟು ಆತಂಕಗೊಂಡ ಅಂಕಿತಾ ಮತ್ತೆ ಮೃನಾಲ್ ಮೊರೆಹೋಗಿದ್ದಾರೆ.
ಮೃನಾಲ್ ಮತ್ತೆ ಮತ್ತೆ ಸೌರಭ್ ಮನೆಯ ಕಾಲಿಂಗ್ ಬೆಲ್ ಒತ್ತಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆಗ ಅಪಾಯದ ಸುಳಿವರಿತ ಮೃನಾಲ್, ಎಚ್ಎಸ್ಆರ್ ಲೇಔಟ್ ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡಿದ್ದಾರೆ. (ಲಿಫ್ಟ್ ನಲ್ಲಿ ಮಹಿಳೆ ಭೀಕರ ಕೊಲೆ, ವಾಚ್ಮನ್ ಎಸ್ಕೇಪ್)
ಪೊಲೀಸರು ಸ್ಥಳಕ್ಕೆ ಬಂದವರೇ ಬಾಗಿಲನ್ನು ಒಡೆದು ಒಳಪ್ರವೇಶಿಸಿದ್ದಾರೆ. ನಡುಮನೆಯಲ್ಲಿ ರಕ್ತದ ಮಡುವಿನಲ್ಲಿ ಸೌರಭ್ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಮನೆಯೆಲ್ಲಾ ಜಾಲಾಡಿದ್ದು, ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದಿರುವುದು ಕಂಡುಬಂದಿದೆ. ಚಿನ್ನ, ಹಣ ದೋಚಿರುವ ಸಾಧ್ಯತೆಯಿದೆ. ಪತ್ನಿ ಅಂಕಿತಾಗೆ ವಿಷಯ ತಿಳಿಸಿರುವ ಪೊಲೀಸರು ಆಕೆಯಿಂದ ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದಾರೆ.
ಈ ಮಧ್ಯೆ, ಶನಿವಾರ ಮಧ್ಯಾಹ್ನ ಪತ್ನಿಗೆ ಕರೆ ಮಾಡಿದ್ದ ಸೌರಭ್, ರಾತ್ರಿ ತಮ್ಮ ಮನೆಗೆ ಇಬ್ಬರು ಸ್ನೇಹಿತರು ಬರುತ್ತಿರುವುದಾಗಿ ಹೇಳಿದ್ದಾರೆ. ಮತ್ತೊಂದು ವಿಷಯವೆಂದರೆ ದುಷ್ಕರ್ಮಿಗಳು ಬಲವಂತವಾಗಿ ಸೌರಭ್ ಮನೆ ಪ್ರವೇಶಿಸಿರುವ ಕುರುಹುಗಳಿಲ್ಲ. ಹಾಗಾಗಿ ಪರಿಚಿತರೇ ಹತ್ಯೆ ಮಾಡಿರುವ ಸಾಧ್ಯತೆಯಿದೆ. ಸೌರಭ್, ತೀವ್ರ ಪ್ರತಿರೋಧ ತೋರಿರುವ ಕುರುಹುಗಳು ಕಂಡಿವೆ ಎಂದು ಪೊಲೀಸರು ಲೆಕ್ಕಾಚಾರ ಹಾಕಿದ್ದಾರೆ.
ಸೌರಭ್ ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು, ಕರೆಗಳ ಜಾಡು ಜಾಲಾಡುತ್ತಿದ್ದಾರೆ. ಆರೋಪಿಗಳ ಪತ್ತೆಗೆ 2 ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications