15 ಲಕ್ಷದ ಕೈತುಂಬಾ ಸಂಬಳ ಬರೋ ಕೆಲಸ ಬಿಟ್ಟು ಕೆಫೆ ಓಪನ್ ಮಾಡಿದ GenZ ಯುವತಿಗೆ ಕಾದಿತ್ತು ಬಿಗ್ ಶಾಕ್
ಸ್ವಂತದೊಂದು ಬ್ಯುಸಿನೆಸ್ ಶುರು ಮಾಡಬೇಕು, ಯಾರ ಕೈ ಕೆಳಗೆ ಅಥವಾ ಯಾರ ಮುಂದೆಯೂ ತಲೆಬಾಗಿ ಕೆಲಸ ಮಾಡಬಾರದು ಎಂಬುದು ಇಂದಿನ ಬಹುತೇಕ ಯುವಜನತೆಯ ಕನಸಾಗಿರುತ್ತದೆ. ಇದೇ ಕಾರಣಕ್ಕೆ ಕೈತುಂಬಾ ಸಂಬಳ ಬರುವ ಕೆಲಸವನ್ನು ಬಿಟ್ಟು ಸ್ವಂತ ವ್ಯಾಪಾರ ಶುರು ಮಾಡಲು ಹಲವರು ಮುಂದಾಗುತ್ತಾರೆ. ಆದರೆ, ವ್ಯಾಪಾರ , ವ್ಯವಹಾರ ಎನ್ನುವುದು ನಾವು ಅಂದುಕೊಂಡಷ್ಟು ಸುಲಭವಲ್ಲ. ಅದಕ್ಕೊಂದು ಒಳ್ಳೆಯ ಉದಾಹರಣೆ ನೀಡುವುದಾದರೆ, ವರ್ಷಕ್ಕೆ 15 ಲಕ್ಷ ರೂಪಾಯಿ ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟು ಕೆಫೆ ತೆರೆದಿದ್ದ 22 ವರ್ಷದ ಯುವತಿಯೊಬ್ಬಳು ಇದೀಗ ತೀವ್ರ ನಷ್ಟ ಅನುಭವಿಸುತ್ತಿದ್ದಾರೆ.
ತಮ್ಮ ಈ ಸಂಕಷ್ಟವನ್ನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವ್ಯಾಪಾರದಲ್ಲಿ ಎದುರಾಗಿದ್ದ ಕಹಿಸತ್ಯವನ್ನ ಬಿಚ್ಚಿಟ್ಟಿದ್ದಾರೆ.

15 ಲಕ್ಷದ ಕೆಲಸ ಬಿಟ್ಟು 30 ಲಕ್ಷ ರೂ. ಹೂಡಿಕೆ ಮಾಡಿ ಕೆಫೆ ಆರಂಭಿಸಿದ ಯುವತಿ
ದೆಹಲಿಯ ಹಡ್ಸನ್ ಲೇನ್‌ನಲ್ಲಿ ಈ ಘಟನೆ ನಡೆದಿದೆ. 21ನೇ ವಯಸ್ಸಿಗೆ ವರ್ಷಕ್ಕೆ 15 ಲಕ್ಷ ರೂ. ಪ್ಯಾಕೇಜ್ ಹೊಂದಿದ್ದ ಕಾರ್ಪೊರೇಟ್ ಕೆಲಸಕ್ಕೆ ರಾಜೀನಾಮೆ ನೀಡಿದ ಯುವತಿ, ತಾನು ಉಳಿತಾಯ ಮಾಡಿದ್ದ ಬರೋಬ್ಬರಿ 30 ಲಕ್ಷ ರೂಪಾಯಿಗಳನ್ನ ಬಂಡವಾಳವಾಗಿ ಹಾಕಿ ಸ್ವಂತ ಕೆಫೆ ಆರಂಭಿಸಿದ್ದರು.
"ನಾನು 17 ವರ್ಷದವಳಿದ್ದಾಗಿನಿಂದಲೇ ಕಾಮಿಕ್ ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದೆ. ಆ ಮೂಲಕ 30 ಲಕ್ಷ ರೂಪಾಯಿ ಉಳಿತಾಯ ಮಾಡಿದ್ದೆ" ಎಂದು ಯುವತಿ ಹೇಳಿಕೊಂಡಿದ್ದಾಳೆ. ಆರಂಭದಲ್ಲಿ ಬಹಳ ಉತ್ಸಾಹದಿಂದ ಕೆಫೆ ಶುರು ಮಾಡಿದ ಈ ಯುವತಿಗೆ ದಿನ ಕಳೆದಂತೆ ವ್ಯಾಪಾರದಲಲಿ ಎದುರಾಗುವ ನಿಜವಾದ ಪರಿಸ್ಥಿತಿಯ ಅರಿವಾಗಿದೆ. ಕೆಫೆ ಆರಂಭಿಸಿ ಒಂದು ವರ್ಷ ಕಳೆದರೂ ಯಾವುದೇ ಲಾಭವಾಗಿಲ್ಲ, ಬದಲಾಗಿ ಭಾರಿ ನಷ್ಟದ ಸುಳಿಗೆ ಸಿಲುಕಿದ್ದಾರೆ.
ಖಾಲಿಯಾದ ಹಣ, ಹೆಚ್ಚಿದ ಬಾಡಿಗೆ ಹೊರೆ
ಕೆಫೆಯಲ್ಲಿ ಕಾಫಿ ಮತ್ತು ಊಟದ ರುಚಿ ಚೆನ್ನಾಗಿದ್ದರೂ ಸಹ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಇದರಿಂದ ತೀವ್ರ ಆರ್ಥಿಕ ಸಮಸ್ಯೆ ಎದುರಾಗಿದೆ ಎಂದು ಯುವತಿ ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾರೆ. "ನನ್ನ ಕೆಫೆಗೆ ಪ್ರತಿ ತಿಂಗಳು 1.2 ಲಕ್ಷ ರೂಪಾಯಿ ಬಾಡಿಗೆ ಕಟ್ಟಬೇಕು. ಸಿಬ್ಬಂದಿಯ ಸಂಬಳಕ್ಕೆ 2 ಲಕ್ಷ ರೂಪಾಯಿ ಖರ್ಚಾಗುತ್ತದೆ ಮತ್ತು ಶೇಕಡಾ 30ರಷ್ಟು ನಿರ್ವಹಣಾ ವೆಚ್ಚವಿದೆ.
ಕೆಫೆಯಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯಲ್ಲಿ ಸ್ವಲ್ಪ ಸಮಸ್ಯೆಯಿದೆ. ಆದರೆ ಅದನ್ನು ಸರಿಪಡಿಸಲು ಹಾಗೂ ಕೆಫೆಯನ್ನ ನವೀಕರಣ ಮಾಡಲು ಈಗ ನನ್ನ ಬಳಿ ಬಿಡಿಗಾಸೂ ಉಳಿದಿಲ್ಲ" ಎಂದು ಯುವ ಉದ್ಯಮಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ರೆಡ್ಡಿಟ್ ವೈರಲ್ ಪೋಸ್ಟ್: ನೆಟ್ಟಿಗರ ಬಳಿ ಸಲಹೆ ಕೇಳಿದ Gen Z ಯುವತಿ
ತನ್ನ ಪರಿಸ್ಥಿತಿಯನ್ನ ವಿವರಿಸಿ ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿರುವ ಯುವತಿ, ವ್ಯಾಪಾರವನ್ನ ಹೇಗೆ ಸುಧಾರಿಸುವುದು ಎಂದು ನೆಟ್ಟಿಗರ ಬಳಿ ಸಲಹೆ ಕೇಳಿದ್ದಾರೆ. ಈ ರೆಡ್ಡಿಟ್ ವೈರಲ್ ಪೋಸ್ಟ್ ನೋಡಿ ಹಲವರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು, "ಮೊದಲು ನಿಮಗೆ ಸರಿಯಾಗಿ ಮಾರ್ಗದರ್ಶನ ನೀಡುವಂತಹ ಒಬ್ಬ ಮೆಂಟರ್ ಅನ್ನು ಹುಡುಕಿ, ಅವರು ಹೇಳಿದ್ದನ್ನು ಪಾಲಿಸಿ" ಎಂದು ಸಲಹೆ ನೀಡಿದ್ದಾರೆ.
ಅದೇ ಪ್ರದೇಶದಲ್ಲಿ ವಾಸಿಸುವ ಮತ್ತೊಬ್ಬರು ಕಾಮೆಂಟ್ ಮಾಡಿ, "ನಿಮ್ಮ ಕೆಫೆಯ ಹೊರಗಿನ ವಿನ್ಯಾಸ ಆಕರ್ಷಕವಾಗಿಲ್ಲ. ಅಲ್ಲಿ ಕಾಫಿ ಸಿಗುತ್ತದೆ ಎಂಬುದೇ ಯಾರಿಗೂ ಗೊತ್ತಾಗುವುದಿಲ್ಲ. ಜನರನ್ನ ಸೆಳೆಯುವಂತಹ ಯಾವುದೇ 'ಎಕ್ಸ್ ಫ್ಯಾಕ್ಟರ್' ನಿಮ್ಮ ಕೆಫೆಯಲ್ಲಿಲ್ಲ. ಅದೊಂದು ಸಾಮಾನ್ಯ ಕೆಫೆಯಂತೆ ಕಾಣುತ್ತದೆ" ಎಂದು ಹೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಯುವತಿ, "ಗ್ರಾಹಕರ ಸೇವೆ, ರುಚಿ ಮತ್ತು ಆಸನದ ವ್ಯವಸ್ಥೆಯನ್ನ ಸರಿಪಡಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ರಸ್ತೆಯಲ್ಲಿ ಬೋರ್ಡ್‌ಗಳನ್ನ ಇಡಲು ನಿಯಮಗಳ ಪ್ರಕಾರ ಅವಕಾಶವಿಲ್ಲ. ಹೀಗಾಗಿ ಕೆಫೆಯತ್ತ ಜನರನ್ನು ಸೆಳೆಯಲು ಬೇರೆ ದಾರಿ ಹುಡುಕುತ್ತಿದ್ದೇನೆ" ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications
