"ಗುಡ್ ನ್ಯೂಸ್: ಬೆಂಗಳೂರಿನ ಪೌರಕಾರ್ಮಿಕರು, ಸ್ವಚ್ಛತಾ ಸಿಬ್ಬಂದಿಗೆ ವಿಶ್ರಾಂತಿ ಕೊಠಡಿ ವ್ಯವಸ್ಥೆ''
ಬೆಂಗಳೂರು, ನವೆಂಬರ್ 27: ಬೆಂಗಳೂರು ನಗರವನ್ನು ಸ್ವಚ್ಛಗೊಳಿಸಿ, ಅದರ ಅಂದ ಹೆಚ್ಚಿಸಲು ಶ್ರಮಿಸುತ್ತಿರುವ ಪೌರಕಾರ್ಮಿಕರು ಹಾಗೂ ಎಲ್ಲಾ ಸ್ವಚ್ಛತಾ ಸಿಬ್ಬಂದಿಗಳ ಉಪಯೋಗಕ್ಕಾಗಿ ಸುವಿಧ ವಿಶ್ರಾಂತ ಕೊಠಡಿಗಳಿಲ್ಲದ ಕಡೆ ಎಲ್ಲಾ ಮಸ್ಟರಿಂಗ್ ಪಾಯಿಂಟ್ ಗಳಲ್ಲಿ ಕೊಠಡಿ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಪಿ. ರಘು ಅವರು ಸೂಚಿಸಿದರು.
ಇಂದು ಗುರುವಾರ ಯಲಹಂಕದ ಎನ್.ಇ.ಎಸ್ ಬಳಿ ಇರುವ ಡಾ: ಬಿ. ಆರ್. ಅಂಬೇಡ್ಕರ್ ಭವನದಲ್ಲಿ 'ನೇರ ಸಂವಾದ ಕಾರ್ಯಕ್ರಮ'ದಲ್ಲಿ ಮಾತನಾಡಿದರು. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಪೌರಕಾರ್ಮಿಕರು, ಲೋಡರ್ಸ್, ಕ್ಲೀನರ್ಸ್, ಆಟೋ ಟಿಪ್ಪರ್ ಚಾಲಕರು, ಇತರೆ ಸ್ವಚ್ಛತಾ ಸಿಬ್ಬಂದಿ ಕುಂದುಕೊರತೆ ಬಗ್ಗೆ ಸಂವಾದ ನಡೆಸಿದರು. ಅವರು ಕುಂದು ಕೊರತೆ ಆಲಿಸಿ ಈ ಮೇಲಿನಂತ ಸೂಚಿಸಿದರು.

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 300 ಜನ ಪೌರಕಾರ್ಮಿಕರು, ಲೊಡರ್ಸ್, ಕ್ಲೀನರ್ಸ್, ಆಟೋ ಟಿಪ್ಪರ್ ಗಳ ಚಾಲಕರು ಈ ನೇರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ದೈನಂದಿನ ಸಮಸ್ಯೆ ತಿಳಿಸಿದರು. ರಘು ಅವರೊಂದಿಗೆ ಪಾಲಿಕೆ ಅಧಿಕಾರಿಗಳು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.
ಉತ್ತರ ನಗರ ಪಾಲಿಕೆ ಆಯುಕ್ತರವರು ಹಿಂದಿನ ಹಲವು ಇಲಾಖೆಗಳಲ್ಲಿ ನಿರ್ವಹಿಸಿದ ಅಭಿವೃದ್ಧಿ ಕಾರ್ಯಗಳ ಹಾಗೂ ಇತರೆ ಕಾರ್ಯಗಳಲ್ಲಿನ ಸುಧಾರಣೆ ಹಾಗೂ ಪ್ರಸ್ತುತ ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ ಅವರ ಕಾರ್ಯ ವೈಖರಿಯ ಕುರಿತು ಅಧ್ಯಕ್ಷ ರಘು ಅವರು ಶ್ಲಾಘಿಸಿದರು.
ಸಂವಾದ ಕಾರ್ಯಕ್ರಮದ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅಧ್ಯಕ್ಷರು, ಪೌರ ಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳ ಈ ಕೆಳಕಂಡ ಸಮಸ್ಯೆಗಳ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು. ಪಾಲಿಕೆ ವ್ಯಾಪ್ತಿಯ ಎಲ್ಲಾ ಹೋಟೆಲ್ ಗಳಲ್ಲಿ ಪೌರ ಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಶೌಚಾಲಯ ಬಳಕೆ ಮಾಡಲು ಅನುಮತಿಸುವಂತೆ ಆದೇಶ ಹೊರಡಿಸುವಂತೆ ಹೇಳಿದರು. ಇದರೊಂದಿಗೆ ಸಭೆಯಲ್ಲಿ ನೀಡಿದ ಸೂಚನೆಗಳ ಪಟ್ಟಿ ಇಲ್ಲಿದೆ.
ಸಭೆಯ ಪ್ರಮುಖ ಸೂಚನೆಗಳು
* ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಒಟ್ಟು 27 ಸುವಿಧ ವಿಶ್ರಾಂತಿ ಕೊಠಡಿ ಇದೆ. ಪ್ರತಿ ಮಸ್ಟರಿಂಗ್ ಪಾಯಿಂಟ್ ನಲ್ಲಿಯೂ ಕೊಠಡಿ ವ್ಯವಸ್ಥೆ ಹಾಗೂ ಶೌಚಾಲಯ ವ್ಯವಸ್ಥೆ ಕಲ್ಪಿಸುವುದು.
* ಖಾಯಂ ನೇಮಕಾತಿ ಆದೇಶ ನೀಡುವುದು.
* ವಸತಿ ಯೋಜನೆಗಳ ಬಗ್ಗೆ ಕ್ರಮ ವಹಿಸಬೇಕು.
* ಆರೋಗ್ಯ ತಪಾಸಣೆ ಕೈಗೊಳ್ಳತಕ್ಕದ್ದು.
* ಸಕಾಲಕ್ಕೆ ವೇತನ ಪಾವತಿ ಮಾಡುವುದು.
* ಕಲ್ಯಾಣ ಕಾರ್ಯಕ್ರಮಗಳ ಅಡಿಯಲ್ಲಿ ಮಕ್ಕಳ ಶಿಕ್ಷಣದ ಶುಲ್ಕ ಮರುಪಾವತಿಸುವುದು.
* ಮೊರಾರ್ಜಿ ದೇಸಾಯಿ ಮತ್ತು ಇತರೆ ವಸತಿ ಶಾಲೆಯಲ್ಲಿ ಸ್ವಚ್ಛತಾ ಸಿಬ್ಬಂದಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಕ್ರಮ ವಹಿಸುವುದು.
* 250 ಕ್ಕೂ ಹೆಚ್ಚು ಪೌರಕಾರ್ಮಿಕರು ವಾಸಿಸುತ್ತಿರುವ ಕೋಗಿಲು ಬಂಡೆ ಪ್ರದೇಶದಲ್ಲಿ ಶೌಚಾಲಯ ವ್ಯವಸ್ಥೆಗೆ ಕ್ರಮ ವಹಿಸತಕ್ಕದ್ದು.
* ಸೇವೆಯಲ್ಲಿರುವಾಗಲೇ ಮೃತಪಟ್ಟ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳ ಕುಟುಂಬಕ್ಕೆ ನೀಡಬೇಕಾದ ಪರಿಹಾರ ಒದಗಿಸಲು ಕ್ರಮ ವಹಿಸತಕ್ಕದ್ದು.
ಈ ವೇಳೆ ಮಾತನಾಡಿದ ಬೆಂಗಳೂರು ಉತ್ತರ ನಗರ ಪಾಲಿಕೆ ಪೊಮ್ಮಲ ಸುನೀಲ್ ಕುಮಾರ್ ಅವರು, ಸ್ವಚ್ಛತೆ ಕಾಪಾಡಲು ಬಿಡುವಿಲ್ಲದ ನಿರಂತರ ಸೇವೆ ಮಾಡುತ್ತಿರುವ ಪೌರ ಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಆತ್ಮವಿಶ್ವಾಸದಿಂದ ಇರಬೇಕು. ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ /ಸಾರ್ವಜನಿಕರಿಗೆ ಸ್ವಚ್ಛತಾ ಅರಿವು ಮೂಡಿಸುವಲ್ಲಿ, ಹೋಟೆಲ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ಬಳಸುವಲ್ಲಿ ಯಾರಿಗೂ ಅಂಜದಂತೆ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಇರಬೇಕು. ನಿಮಗೇನಾದರೆ ತೊಂದರೆ ನೀಡಿದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಲ್ಯಾಣ ಕಾರ್ಯಕ್ರಮಗಳ ಅಡಿಯಲ್ಲಿ ಪೌರ ಕಾರ್ಮಿಕರಿಗೆ ನೀಡಬೇಕಾಗಿರುವ ಸೌಲಭ್ಯಗಳಿಗೆ ಅವಶ್ಯವಿರುವ ಅನುದಾನ ಮುಂದಿನ ಆರ್ಥಿಕ ವರ್ಷದಲ್ಲಿ ಮೀಸಲಿಡಲಾಗುವುದು. ಶೌಚಾಲಯ ಇಲ್ಲದ ಕಡೆ ಪರ್ಯಾಯ ವ್ಯವಸ್ಥೆಯಾಗಿ ತಾತ್ಕಾಲಿಕವಾಗಿ ಪೌರ ಕಾರ್ಮಿಕರಿಗೆ ಉದ್ಯಾನವನಗಳಲ್ಲಿನ ಶೌಚಾಲಯ ಬಳಕೆ ಮಾಡಲು ಅನುವಾಗುವಂತೆ ಕ್ರಮ ಕೈಗೊಳ್ಳಬೇಕು. ಕಾಲ ಕಾಲಕ್ಕೆ ಸಿಬ್ಬಂದಿ ಆರೋಗ್ಯ ತಪಾಸಣೆಗೆ ಆದ್ಯತೆ ನೀಡುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.












Click it and Unblock the Notifications