ಬ್ಲಿಂಕಿಟ್, ಝೆಪ್ಟೋ ಮಾದರಿಯಲ್ಲಿ ಕೆಲವೇ ನಿಮಿಷದಲ್ಲಿ ರಸ್ತೆ ಗುಂಡಿ ದುರಸ್ತಿ: ಜಿಬಿಎ ಆಯುಕ್ತ ಮಹೇಶ್ವರ ರಾವ್

ಬೆಂಗಳೂರು: ಸಿಲಿಕಾನ್ ಸಿಟಿಯ ಜನರಿಗೆ ತೀವ್ರ ತಲೆನೋವಾಗಿ ಪರಿಣಮಿಸಿರುವ ರಸ್ತೆ ಗುಂಡಿಗಳ ಸಮಸ್ಯೆಗೆ ತಂತ್ರಜ್ಞಾನ ಆಧಾರಿತ ತ್ವರಿತ ಪರಿಹಾರ ಕಂಡುಕೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೊಸ ಯೋಜನೆಯೊಂದನ್ನ ರೂಪಿಸುತ್ತಿದೆ.

ಕ್ವಿಕ್ ಕಾಮರ್ಸ್ ಆ್ಯಪ್‌ಗಳಾದ ಬ್ಲಿಂಕಿಟ್ ಅಥವಾ ಝೆಪ್ಟೋ ಮೂಲಕ ದಿನಸಿ ಆರ್ಡರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾಮಗ್ರಿಗಳು ಮನೆ ಬಾಗಿಲಿಗೆ ತಲುಪುವಂತೆಯೇ, ಸಾರ್ವಜನಿಕರು ದೂರು ದಾಖಲಿಸಿದ ತಕ್ಷಣವೇ ಸ್ಥಳಕ್ಕೆ ತೆರಳಿ ರಸ್ತೆ ಗುಂಡಿಗಳನ್ನ ಮುಚ್ಚುವ ಹೈಟೆಕ್ ವ್ಯವಸ್ಥೆಯನ್ನ ಭವಿಷ್ಯದಲ್ಲಿ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.

GBA Plans Quick Commerce Style Pothole Repair Mechanism in Bengaluru Like Blinkit Zepto Soon

ಬೆಂಗಳೂರು ರಸ್ತೆ ಗುಂಡಿ ದುರಸ್ತಿ: ತಂತ್ರಜ್ಞಾನ ಆಧಾರಿತ ತ್ವರಿತ ಸೇವೆ

ಜಿಬಿಎ ಅಧಿಕೃತ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾದ ಪಾಡ್‌ಕಾಸ್ಟ್‌ನಲ್ಲಿ ನಗರದ ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸಿದ ಆಯುಕ್ತರು, ಗುಂಡಿ ದುರಸ್ತಿಗೆ ಸಂಬಂಧಿಸಿದಂತೆ ಹಲವು ಮಹತ್ವದ ಸಂಗತಿಗಳನ್ನ ಹಂಚಿಕೊಂಡಿದ್ದಾರೆ.

'ಪ್ರಾಧಿಕಾರದಲ್ಲಿ ಕೋಟ್ಯಂತರ ರೂಪಾಯಿ ಅನುದಾನವಿದ್ದರೂ ಸಣ್ಣದೊಂದು ಗುಂಡಿ ಮುಚ್ಚಲು ಇಷ್ಟೊಂದು ವಿಳಂಬವೇಕೆ?' ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಳೆಗಾಲದಲ್ಲಿ ಗುಂಡಿ ಸಮಸ್ಯೆ ಗರಿಷ್ಠ ಮಟ್ಟ ತಲುಪುತ್ತದೆ. ಮಳೆ ಸುರಿಯುತ್ತಿರುವಾಗ ಡಾಂಬರೀಕರಣ ಅಥವಾ ಶಾಶ್ವತ ತೇಪೆ ಹಾಕುವುದು ಅಸಾಧ್ಯವಾಗಿದ್ದು, ಕೇವಲ ವೆಟ್ ಮಿಕ್ಸ್ ಬಳಸಿ ತಾತ್ಕಾಲಿಕ ದುರಸ್ತಿ ಮಾತ್ರ ಮಾಡಬಹುದಾಗಿದೆ ಎಂದರು.

ಇದೇ ಕಾರಣಕ್ಕೆ ಭವಿಷ್ಯದಲ್ಲಿ ಕ್ವಿಕ್ ಕಾಮರ್ಸ್ ರೀತಿಯಲ್ಲಿ ನಿಮಿಷಗಳಲ್ಲೇ ಸ್ಪಂದಿಸುವ ತಂತ್ರಜ್ಞಾನ ರೂಪಿಸಲು ಪ್ರಾಧಿಕಾರ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.

ಹಳೆಯ ಪೈಪ್‌ಲೈನ್ ಸೋರಿಕೆಯಿಂದ ಹೆಚ್ಚುತ್ತಿರುವ ಗುಂಡಿಗಳು

ನಗರದ ರಸ್ತೆಗಳಲ್ಲಿ ಪದೇ ಪದೇ ಗುಂಡಿಗಳು ಬೀಳಲು ಕಳಪೆ ಕಾಮಗಾರಿ ಮಾತ್ರವಲ್ಲದೆ, ಮೂಲಸೌಕರ್ಯದ ದೌರ್ಬಲ್ಯವೂ ಪ್ರಮುಖ ಕಾರಣವಾಗಿದೆ. ನಗರದ ರಸ್ತೆಗಳ ಅಡಿಯಲ್ಲೇ ಒಳಚರಂಡಿ ಮತ್ತು ಕುಡಿಯುವ ನೀರಿನ ಪೈಪ್‌ಲೈನ್‌ಗಳನ್ನ ಅಳವಡಿಸಲಾಗಿದೆ.

ಸುಮಾರು 20 ರಿಂದ 30 ವರ್ಷಗಳಷ್ಟು ಹಳೆಯದಾದ ಈ ಪೈಪ್‌ಲೈನ್‌ಗಳನ್ನ ಕಾಲಕಾಲಕ್ಕೆ ಸಮಗ್ರವಾಗಿ ಬದಲಾಯಿಸಬೇಕಿತ್ತು. ಆದರೆ ಹಾಗೆ ಮಾಡದಿರುವುದರಿಂದ ಹಲವೆಡೆ ನೀರಿನ ಸೋರಿಕೆ ಉಂಟಾಗಿ, ರಸ್ತೆಯ ಕೆಳಗಿನ ಮಣ್ಣು ಕುಸಿದು ಡಾಂಬರು ಕಿತ್ತುಬರುತ್ತಿದೆ. ಈ ನಿಟ್ಟಿನಲ್ಲಿ ಜಲಮಂಡಳಿ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಹಳೆಯ ಪೈಪ್‌ಲೈನ್‌ಗಳ ಸಾಮರ್ಥ್ಯ ಹೆಚ್ಚಿಸುವ ಅಗತ್ಯವಿದೆ ಎಂದು ಆಯುಕ್ತರು ಹೇಳಿದರು.

ಮೂಲಸೌಕರ್ಯದ ಮೇಲಿನ ಒತ್ತಡ

ಬೆಂಗಳೂರು ನಗರವು ವೇಗವಾಗಿ ಬೆಳೆಯುತ್ತಿರುವುದರಿಂದ ಪ್ರತಿಯೊಂದು ಮೂಲಸೌಕರ್ಯದ ಮೇಲೂ ತೀವ್ರ ಒತ್ತಡ ಬೀಳುತ್ತಿದೆ. ಹಳೆಯ ಕಟ್ಟಡಗಳನ್ನ ಕೆಡವಿ ಬಹುಮಹಡಿ ಕಟ್ಟಡಗಳನ್ನ ನಿರ್ಮಿಸಿದಾಗ, ಆ ನಿರ್ದಿಷ್ಟ ಬಡಾವಣೆಯ ಮೂಲಸೌಕರ್ಯ ಸಾಮರ್ಥ್ಯವನ್ನ ದುಪ್ಪಟ್ಟುಗೊಳಿಸಬೇಕಾಗುತ್ತದೆ.

ಮೆಟ್ರೋ ಕಾಮಗಾರಿಗಳು, ರಸ್ತೆ ವಿಸ್ತರಣೆ, ವಿದ್ಯುತ್ ಕೇಬಲ್ ಅಳವಡಿಕೆ, ಗ್ಯಾಸ್ ಪೈಪ್‌ಲೈನ್ ಹಾಗೂ ರಾಜಕಾಲುವೆ ನಿರ್ಮಾಣದಂತಹ ನಿರಂತರ ಯೋಜನೆಗಳು ರಸ್ತೆಗಳಿಗೆ ಹಾನಿಯುಂಟುಮಾಡುತ್ತಿವೆ.

ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಪ್ರಾಧಿಕಾರ ಬದ್ಧವಾಗಿದ್ದು, ಎಲ್ಲ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ರಸ್ತೆ ಗುಂಡಿ ಮುಕ್ತ ಬೆಂಗಳೂರು ನಿರ್ಮಿಸಲು ಸಾಧ್ಯ ಎಂದು ಮಹೇಶ್ವರ ರಾವ್ ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+