Property Tax: ತೆರಿಗೆ ಸಂಗ್ರಹದ ಗುರಿ ಮುಟ್ಟಲು ಜಿಬಿಎ ಸೂಚನೆ, 10.5 ಟನ್ ತ್ಯಾಜ್ಯ ತೆರವು
ಬೆಂಗಳೂರು, ಅಕ್ಟೋಬರ್ 18: ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹದ ವಿಚಾರದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ತೆರಿಗೆ ಸಂಗ್ರಹವು ಪ್ರಮುಖ ಆದಾಯದ ಮೂಲವಾಗಿದೆ. ಈ ಆಸ್ತಿ ತೆರಿಗೆ ಸಂಗ್ರಹದಲ್ಲಿ ಗುರಿ ಸಾಧಿಸುವಂತೆ ಅಧಿಕಾರಿಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ ರಾವ್ ನಿರ್ದೇಶಿಸಿದರು.
ನಗರ ವ್ಯಾಪ್ತಿಯ ಬೀದಿ ದೀಪಗಳ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಂಡು, ದುರಸ್ತಿ ಕಾರ್ಯಗಳ ಅಗತ್ಯವಿದ್ದಲ್ಲಿ ದುರಸ್ತಿ ಕಾರ್ಯವನ್ನು ತ್ವರಿತವಾಗಿ ನಡೆಸಬೇಕು. ನಗರ ಪಾಲಿಕೆಗಳಲ್ಲಿ ಟಿಡಿಆರ್ ಸೆಲ್ ಸ್ಥಾಪಿಸಲು ನಿರ್ದೇಶನ ನೀಡಿ, ಈ ಮೂಲಕ ಸಾರ್ವಜನಿಕ ಸೌಕರ್ಯಗಳ ಸಮತೋಲಿತ ಹಂಚಿಕೆಯನ್ನು ಖಾತ್ರಿಪಡಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಸರ್ವಜ್ಞನಗರ: 10.5 ಟನ್ ತ್ಯಾಜ್ಯ ತೆರವು
ಬೆಂಗಳೂರಿನ ಸ್ವಚ್ಛತೆ ಮತ್ತು ಸೌಂದರ್ಯವನ್ನು ಹೆಚ್ಚಿಸುವ ಉದ್ದೇಶದಿಂದ, ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಸರ್ವಜ್ಞನಗರ ವಿಭಾಗ ವ್ಯಾಪ್ತಿಯಲ್ಲಿ ಇಂದು ಸಾಮೂಹಿಕ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು.
ಶನಿವಾರ ವೇಮನಾ ಸರ್ಕಲ್ (ಬಾಣಸವಾಡಿ)ದಿಂದ ಐ.ಟಿ.ಸಿ ಬ್ರಿಡ್ಜ್ ವರೆಗೆ 2.7 ಕಿಲೋಮೀಟರ್ ವ್ಯಾಪ್ತಿಯಲ್ಲಿ ನಡೆದ ಈ ಅಭಿಯಾನದಲ್ಲಿ ಒಟ್ಟು 157 ಪೌರಕಾರ್ಮಿಕರು, 5 ಟ್ರ್ಯಾಕ್ಟರ್‌ಗಳು ಹಾಗೂ 1 ಜೆಸಿಬಿ ಯಂತ್ರಗಳನ್ನು ಬಳಸಿ ವ್ಯಾಪಕ ಹೂಳು ಮತ್ತು ಕಸ ತೆರವು ನಡೆಯಿತು. ಅಭಿಯಾನದ ಮೂಲಕ 6 ಟನ್ ತ್ಯಾಜ್ಯ ಹಾಗೂ 4.5 ಟನ್ ಕಟ್ಟಡ ಭಗ್ನಾವಶೇಷಗಳು ಸೇರಿ ಒಟ್ಟು 10.5 ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ.
ನಗರದ ಸ್ವಚ್ಛತೆ ಕಾಪಾಡಲು ಪ್ರತಿದಿನವೂ ನಗರ ಪಾಲಿಕೆಯ ಸಿಬ್ಬಂದಿ ತಂಡ ಶ್ರಮಿಸುತ್ತಿದ್ದಾರೆ. ಸಾರ್ವಜನಿಕರು ಸಹ ಈ ಪ್ರಯತ್ನಕ್ಕೆ ಕೈಜೋಡಿಸಬೇಕು ಎಂದು ಉತ್ತರ ನಗರ ಪಾಲಿಕೆಯ ಆಯುಕ್ತರು ಮನವಿ ಮಾಡಿದರು.
17.20 ಲಕ್ಷ ಮನೆಗಳ ಸಮೀಕ್ಷೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಕಳೆದ 14 ದಿನಗಳಲ್ಲಿ ಸಮೀಕ್ಷೆ ಪ್ರಾರಂಭದಿಂದ ಈವರೆಗೆ 17.20 ಲಕ್ಷ ಮನೆಗಳ ಸಮೀಕ್ಷೆ ನಡೆಸಲಾಗಿದೆ ಎಂದು ಜಿಬಿಎ ಅಧಿಕಾರಿಗಳು ಮಾಹಿತಿ ನೀಡಿದರು.
ಅಕ್ಟೋಬರ್ 17ರವರೆಗೆ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಸಂಜೆ 07.30 ಗಂಟೆಯವರೆಗೆ 76,695 ಮನೆಗಳನ್ನು ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ಪ್ರಾರಂಭ ದಿನದಿಂದ ಈವರೆಗೆ ಜಿಬಿಎ 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಮೀಕ್ಷೆಯಾಗಿದ್ದು ಒಟ್ಟು 17,20,490 ಮನೆಗಳು ಎಂದು ಜಿಬಿಎ ಪ್ರಕಟಣೆ ತಿಳಿಸಿದೆ.












Click it and Unblock the Notifications