ಜಿಬಿಎ ಮತದಾರರ ಪಟ್ಟಿ ತಯಾರಿಕೆ: ಅಧಿಕಾರಿಗಳಿಗೆ ಮಹತ್ವದ ಸೂಚನೆ ಕೊಟ್ಟ ಮಹೇಶ್ವರ್ ರಾವ್
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆಗೆ ಮೇ ನಂತರ ನಡೆಸಲು ಮುಹೂರ್ತ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣೆ ಆಯೋಗ, ಪಾಲಿಕೆ ಅಧಿಕಾರಿಗಳು ಎಲ್ಲ ವಿಧದ ಸಿದ್ಧತೆಗಳು ಆರಂಭಿಸಿದ್ದಾರೆ. ಇದೀಗ ಮತದಾರರ ಪಟ್ಟಿ ತಯಾರಿಕೆ ಕುರಿತು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಮಹತ್ವದ ನಿರ್ದೇಶನ ನೀಡಿದ್ದರು.
ಬೆಂಗಳೂರಿನಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಬಿಎ ವ್ಯಾಪ್ತಿಯಲ್ಲಿ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ ತಯಾರಿಕಾ ಪ್ರಕ್ರಿಯೆಯು ನಿಯಮಾನುಸಾರ ಹಾಗೂ ಪಾರದರ್ಶಕವಾಗಿ ನಡೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ರಾಜ್ಯ ಚುನಾವಣಾ ಆಯೋಗದಿಂದ 22ನೇ ಜನವರಿ 2026ರಂದು ಪರಿಷ್ಕೃತ ಸುತ್ತೋಲೆ ಹೊರಡಿಸಿದೆ. ಅದರಂತೆ ಎಲ್ಲಾ ಐದು ನಗರ ಪಾಲಿಕೆಗಳ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕೆಂದು ಹೇಳಿದರು.

ಆಯಾ ನಗರ ಪಾಲಿಕೆಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಾರ್ಡ್ ಗಡಿಗಳನ್ನು ಖುದ್ದಾಗಿ ಪರಿಶೀಲನೆ ನಡೆಸಬೇಕು. ಗಡಿಗಳಲ್ಲಿ ಯಾವುದೇ ರೀತಿಯ ಗೊಂದಲಗಳು ಉಂಟಾಗದಂತೆ ನೋಡಿಕೊಳ್ಳಬೇಕು. ಮತದಾರರ ಪಟ್ಟಿ ತಯಾರಿಕಾ ಪ್ರಕ್ರಿಯೆಯನ್ನು ನಿಯಮಾನುಸಾರ ಹಾಗೂ ಪಾರದರ್ಶಕವಾಗಿ ನಡೆಸಬೇಕು.
ಚುನಾವಣಾ ಕಾರ್ಯಗಳಿಗೆ ಸಮಯ ಮೀಸಲಿಡಿ
ಮತದಾರರ ನೋಂದಣಾಧಿಕಾರಿಗಳು ಚುನಾವಣಾ ಸಂಬಂಧಿತ ಕಾರ್ಯಗಳಿಗೆ ಪ್ರತಿದಿನ 2-3 ಗಂಟೆಗಳ ಸಮಯ ಮೀಸಲಿಡಬೇಕು. ಮತದಾರರ ನೋಂದಣಾಧಿಕಾರಿಗಳು (ಕಂದಾಯ ಅಧಿಕಾರಿಗಳು) ಆಸ್ತಿ ತೆರಿಗೆ ಸಂಗ್ರಹದ ಜೊತೆಗೆ ಚುನಾವಣಾ ಕಾರ್ಯಗಳಿಗೂ ಆದ್ಯತೆ ನೀಡಿ, ಯಾವುದೇ ಲೋಪದೋಷಗಳು ಉಂಟಾಗದಂತೆ ಮತದಾರರ ಪಟ್ಟಿಯನ್ನು ತಯಾರಿಸಬೇಕೆಂದು ಹೇಳಿದರು. ಈ ಮೂಲಕ ಬಿಬಿಎಂಪಿ ಜಿಬಿಎ ಆಗಿ ಬದಲಾದ ಬಳಿಕ ಹಾಗೂ ವರ್ಷಗಳ ನಂತರ ನಡೆಯುತ್ತಿರುವ ಮೊದಲ ಚುನಾವಣೆಯಲ್ಲಿ ಪಾರದರ್ಶಕತೆ ಹೆಚ್ಚು ಒತ್ತು ನೀಡುತ್ತಿರುವುದು ಗೊತ್ತಾಗುತ್ತದೆ.
ಬಿಎಲ್ಓಗಳಿಂದ ಮನೆ ಮನೆಗೆ ಭೇಟಿ
ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಸೇರ್ಪಡೆ, ತಿದ್ದುಪಡಿ ಹಾಗೂ ತೆಗೆಯುವಿಕೆ ಪ್ರಕ್ರಿಯೆ ನಡೆಸುವಾಗ ಸಂಬಂಧಿತ ದಾಖಲೆಗಳನ್ನು ಸರಿಯಾಗಿ ಶೇಕರಿಸಿಡುವಂತೆ ನೋಡಿಕೊಳ್ಳಬೇಕು ಎಂದರು.
ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ರಾಮಚಂದ್ರನ್ ಅವರು ಮಾತನಾಡಿ, 2002ರ ಮತದಾರರ ಪಟ್ಟಿಗೆ 2025ರ ಮತದಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡುವ ಕಾರ್ಯದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವಂತೆ ಸೂಚಿಸಿದರು. ಆಯಾ ನಗರ ಪಾಲಿಕೆಗಳಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದ ಹಕ್ಕು-ಆಕ್ಷೇಪಣೆಗಳನ್ನು ಸ್ವೀಕರಿಸುವ ಸಂದರ್ಭದಲ್ಲಿ ನಮೂನೆ 6, 7 ಹಾಗೂ 8ಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಜಿಬಿಎ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗದಿಂದ ನೇಮಕಗೊಳ್ಳುವ ವೀಕ್ಷಕರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು.
ಮತದಾರರು ಆಯಾ ವಾರ್ಡ್ ಒಳಗೇ ಬರಬೇಕು
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್ ಗಡಿಗಳನ್ನು ಗುರುತಿಸಲಾಗಿದೆ. ಅದರಂತೆ ಎಲ್ಲಾ ಮತದಾರರು ತಮ್ಮ ಸಂಬಂಧಿತ ವಾರ್ಡ್ ಗಡಿ ಒಳಗೇ ಬರುವಂತೆ ಖಚಿತಪಡಿಸಿಕೊಳ್ಳಬೇಕು ಎಂದು ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ರಮೇಶ್ ಅವರು ತಿಳಿಸಿದರು.
ಆಯಾ ನಗರ ಪಾಲಿಕೆಗಳ ವಾರ್ಡ್ ಗಡಿಗಳನ್ನು ಮ್ಯಾಪ್ ಅನ್ನು ಬೂತ್ ಮಟ್ಟದ ಮೇಲ್ವಿಚಾರಕರು ಹಾಗೂ ಬಿಎಲ್‌ಒಗಳಿಗೆ ವಿತರಿಸಿ, ಅದರ ಆಧಾರದ ಮೇಲೆ ಸಮಗ್ರ ಪರಿಶೀಲನೆ ನಡೆಸಿ ಮತದಾರರ ಪಟ್ಟಿ ಅಂತಿಮಗೊಳಿಸಬೇಕು. ಕುಟುಂಬದ ಸದಸ್ಯರ ಮತಗಳು ಒಂದೇ ಮತಗಟ್ಟೆಯೊಳಗೆ ಬರುವಂತೆ ನೋಡಿಕೊಳ್ಳಬೇಕು. ಸ್ಥಳೀಯ ನಾಗರಿಕರು, ರಾಜಕೀಯ ಪ್ರತಿನಿಧಿಗಳು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳೊಂದಿಗೆ ಸಭೆ ನಡೆಸಿ, ಮತದಾರರು ಒಂದೇ ವಾರ್ಡ್‌ನಲ್ಲೇ ಒಳಗೊಂಡಿದ್ದಾರೆ ಎಂಬ ಮಾಹಿತಿ ನೀಡುವ ಮೂಲಕ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳುವಂತೆ ನಿರ್ದೇಶಿಸಿದರು.












Click it and Unblock the Notifications