GBA: ಗಣೇಶ ಮೆರವಣಿಗೆಗೆ ತೊಂದರೆಯಾಗದಂತೆ ಸಿದ್ಧತೆ: ರಸ್ತೆಗುಂಡಿ, ಕಸ ತೆರವಿಗೆ ಖಡಕ್ ಸೂಚನೆ
ಗೌರಿ - ಗಣೇಶ ಹಬ್ಬಕ್ಕೆ ಬೆಂಗಳೂರಿನ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೆರವಣಿಗೆಗಳಿಗೆ ಯಾವುದೇ ತೊಂದರೆಯಾಗದಂತೆ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ನಿರ್ವಹಣೆ ಹಾಗೂ ಸಾರ್ವಜನಿಕರಿಗೆ ಎದುರಾಗುತ್ತಿರುವ ಮೂಲಸೌಕರ್ಯ ಸಮಸ್ಯೆಗಳನ್ನು ಪರಿಶೀಲಿಸುವ ಉದ್ದೇಶದಿಂದ, ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಸೆಪ್ಟೆಂಬರ್ 11ರ ಶುಕ್ರವಾರ ರಾತ್ರಿ ಪಾಲಿಕೆಯ ಮುಖ್ಯ ಎಂಜಿನಿಯರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ವಿವಿಧ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದರು.

ಪುಲಿಕೇಶಿನಗರದಿಂದ ದೊಡ್ಡಿ ಸಿಗ್ನಲ್, ಅಲ್ಲಿಂದ ಪೆರಿಯಾರ್ ಸರ್ಕಲ್, ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ವರೆಗೆ ಪರಿಶೀಲನೆ ನಡೆಸಲಾಯಿತು. ಈ ವೇಳೆ ರಸ್ತೆಗುಂಡಿಗಳು, ರಸ್ತೆ ಬದಿಯ ಡೆಬ್ರಿಸ್, ಚರಂಡಿಗಳು, ಕಾಣೆಯಾಗಿರುವ ಸ್ಲ್ಯಾಬ್‌ಗಳು, ರಸ್ತೆ ಕಟಿಂಗ್‌ನಿಂದ ಉಂಟಾಗಿರುವ ಹಾನಿ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿರುವ ಇತರೆ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಲಾಯಿತು.
ಗಣೇಶನ ಮೆರವಣಿಗೆಗೆ ತೊಂದರೆಯಾಗದ ಹಾಗೆ ಸಿದ್ಧತೆಗೆ ಸೂಚನೆ
ಟ್ಯಾನರಿ ರಸ್ತೆಯಿಂದ ದೊಡ್ಡಿ ಸಿಗ್ನಲ್, ಪುಲಿಕೇಶಿನಗರ ಹಾಗೂ ಸರ್ವಜ್ಞನಗರ ವಿಭಾಗಗಳಲ್ಲಿ ಗಣಪತಿ ಹಬ್ಬದ ಪ್ರಯುಕ್ತ ಹಲವಾರು ಗಣೇಶನ ಮೆರವಣಿಗೆಗಳು ಸಾಗಲಿರುವ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆಸಲಾಯಿತು. ಮೆರವಣಿಗೆಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲು ಆಯುಕ್ತರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇನ್ನು ಪರಿಶೀಲನೆಯ ಸಂದರ್ಭದಲ್ಲಿ BSMILEಗೆ ಸಂಬಂಧಪಟ್ಟ ರಸ್ತೆ ನಿರ್ವಹಣಾ ಕಾರ್ಯಗಳ ಕುರಿತು ಆಯುಕ್ತರು BSMILE ಮುಖ್ಯ ಎಂಜಿನಿಯರರು ಹಾಗೂ ಕಾರ್ಯಪಾಲಕ ಎಂಜಿನಿಯರರಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
BWSSB ವತಿಯಿಂದ ನೀರು ಸರಬರಾಜು ಮಾರ್ಗಗಳು ಹಾಗೂ ಚಾನೆಲ್‌ಗಳ ಬದಲಾವಣೆ ಮತ್ತು ಪೈಪ್‌ಲೈನ್ ಕಾಮಗಾರಿಗಳನ್ನು ಕೈಗೊಂಡಿರುವ ಸ್ಥಳಗಳಲ್ಲಿ ರಸ್ತೆಗುಂಡಿಗಳು ಉಂಟಾಗಿರುವುದನ್ನು ಗಮನಿಸಲಾಯಿತು. ಅಂತಹ ಸ್ಥಳಗಳಲ್ಲಿ ರಸ್ತೆಗಳನ್ನು ಸಮರ್ಪಕವಾಗಿ ಮುಚ್ಚಿ, ಅಗತ್ಯವಿರುವ ಕಡೆಗಳಲ್ಲಿ ಆಸ್ಫಾಲ್ಟ್ ಹಾಕಿ ರಸ್ತೆಗಳನ್ನು ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಪುನರ್‌ಸ್ಥಾಪಿಸಲು ಸೂಚಿಸಲಾಯಿತು. ಪೈಪ್‌ಲೈನ್ ಕಾಮಗಾರಿಗಳು, ವಾಲ್ ಚೇಂಬರ್‌ಗಳ ನಿರ್ಮಾಣ ಹಾಗೂ ಇತರೆ ಕಾಮಗಾರಿಗಳಿಂದ ಉಂಟಾಗಿರುವ ಡೆಬ್ರಿಸ್‌ಗಳನ್ನು ತೆರವುಗೊಳಿಸಿ, ರಸ್ತೆಗಳನ್ನು ಸಮರ್ಪಕವಾಗಿ ದುರಸ್ತಿ ಮಾಡುವಂತೆ BWSSB ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಪೆರಿಯಾರ್ ಸರ್ಕಲ್‌ನಿಂದ ಬೇಗೂರು ಸ್ವಾಮಿ ದೇವಸ್ಥಾನದವರೆಗೆ ಮೆಟ್ರೋ ಅಧಿಕಾರಿಗಳು ಕೈಗೊಳ್ಳಲು ಉದ್ದೇಶಿಸಿರುವ ಟ್ಯಾನರಿ ರಸ್ತೆಯ ಆಸ್ಫಾಲ್ಟ್ ಕಾಮಗಾರಿಗಳ ಸಿದ್ಧತೆಗಳನ್ನೂ ಆಯುಕ್ತರು ಪರಿಶೀಲಿಸಿದರು. ರಸ್ತೆ ಕಾಮಗಾರಿಗಳನ್ನು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯಗೊಳಿಸಿ ಕೈಗೊಳ್ಳಬೇಕು. ನೀರು ಸರಬರಾಜು ಮಾರ್ಗಗಳು, ಚರಂಡಿಗಳು ಹಾಗೂ ಇತರೆ ಉಪಯುಕ್ತತಾ ಕಾಮಗಾರಿಗಳಿಂದಾಗಿ ಮುಂದೆ ರಸ್ತೆ ಹಾನಿಗೊಳಗಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು. ರಸ್ತೆಗಳ ಸ್ಥಿತಿಗತಿ, ರಸ್ತೆ ಕಟಿಂಗ್ ಮತ್ತು ದುರಸ್ತಿ ಅಗತ್ಯವಿರುವ ಸ್ಥಳಗಳ ಕುರಿತು BSMILE ಕಾರ್ಯಪಾಲಕ ಅಭಿಯಂತರರು ಪತ್ರ ಹಾಗೂ ಛಾಯಾಚಿತ್ರಗಳ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿರುವುದನ್ನು ಆಯುಕ್ತರು ಪರಿಶೀಲಿಸಿದರು.
ಇದೇ ವೇಳೆ, ಬಿಲಾಲ್ ನಗರದಲ್ಲಿ ನೀರು ನಿಂತು ರಸ್ತೆಗುಂಡಿಗಳು ಉಂಟಾಗಿರುವ ಸ್ಥಳವನ್ನೂ ಪರಿಶೀಲಿಸಲಾಯಿತು. ನೀರು ನಿಲ್ಲುವ ಸಮಸ್ಯೆಯನ್ನು ಪರಿಹರಿಸಿ, ರಸ್ತೆಗುಂಡಿಗಳನ್ನು ಮುಚ್ಚಿ ರಸ್ತೆ ದುರಸ್ತಿ ಮಾಡುವಂತೆ BSMILE ಮುಖ್ಯ ಎಂಜಿನಿಯರರಿಗೆ ಸೂಚಿಸಲಾಯಿತು.


Click it and Unblock the Notifications
