ಗಣೇಶ ವಿಸರ್ಜನೆ: ಬೆಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ, ಮದ್ಯ ಮಾರಾಟ ನಿಷೇಧ
ಬೆಂಗಳೂರು, ಸೆಪ್ಟೆಂಬರ್, 15: ಬೆಂಗಳೂರಿನ ಸುಮಾರು ಕಡೆಗಳಲ್ಲಿ ಇಂದು (ಸೆಪ್ಟೆಂಬರ್ 15) ಗಣೇಶ ಮೆರವಣಿಗೆ ನಡೆಯುವ ಹಿನ್ನೆಲೆ ಹಲವು ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಅಲ್ಲದೆ, ಕಾನೂನು ಸುವ್ಯವಸ್ಥೆ ಕಾಪಾಡಲು ಹಲವೆಡೆ ಸೆಪ್ಟೆಂಬರ್ ಮದ್ಯ ಮಾರಾಟವನ್ನು ನಿಷೇಧಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನಲ್ಲಿ ಸಾವಿರಾರು ಗಣೇಶ ಮೂರ್ತಿ ನಿಮಜ್ಜನ ಮತ್ತು ಮೆರವಣಿಗೆ ಹಿನ್ನೆಲೆ ಸಂಚಾರಿ ಪೊಲೀಸರು ಇಂದು (ಸೆಪ್ಟೆಂಬರ್ 15) ಮಧ್ಯಾಹ್ನ 12 ರಿಂದ ರಾತ್ರಿ 12ರವರೆಗೆ ಹಲವು ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದಾರೆ. ಹಾಗಾದರೆ ಎಲ್ಲೆಲ್ಲಿ ನಿರ್ಬಂಧ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಎಲ್ಲೆಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ.?: ಸೇಂಟ್ ಜಾನ್ಸ್ ಚರ್ಚ್ ರಸ್ತೆ ಮೂಲಕ ಸೆಪಿಂಗ್ಸ್ ರಸ್ತೆ, ತಿಮ್ಮಯ್ಯ ರಸ್ತೆ, ನಾರಾಯಣ ಪಿಳ್ಳೈ ಸ್ಟ್ರೀಟ್, ಕಾಮರಾಜ್ ರಸ್ತೆ ಮತ್ತು ಶಿವಂಚೆಟ್ಟಿ ಗಾರ್ಡನ್ ರಸ್ತೆಯಲ್ಲಿ ಯಾವುದೇ ವಾಹನಗಳ ಸಂಚಾರಕ್ಕೆ ಅನುಮತಿ ಇರುವುದಿಲ್ಲ. ಕಾಮರಾಜ್ ರಸ್ತೆ ಡಿಕನ್ಸನ್ ಜಂಕ್ಷನ್‌ನಲ್ಲಿ ಭಾರತಿ ನಗರ ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸೇಂಟ್ ಜಾನ್ಸ್ ರಸ್ತೆ ಮತ್ತು ಶ್ರೀ ವೃತ್ತದಿಂದ ಬರುವ ವಾಹನಗಳ ಸಂಚಾರವನ್ನು ಕೂಡ ನಿರ್ಬಂಧಿಸಲಾಗಿದೆ.
ಎಲ್ಲೆಲ್ಲಿ ವಾಹನ ಸಂಚಾರಕ್ಕೆ ಅವಕಾಶ.?: ಹಲಸೂರು ಕೆರೆಯಿಂದ ತಿರುವಳ್ಳುವರ್ ಪ್ರತಿಮೆ ಜಂಕ್ಷನ್ ಕಡೆಗೆ, ಎಂಇಜಿ ಕಡೆಯಿಂದ ಕೆನ್ಸಿಂಗ್ಟನ್ ರಸ್ತೆ-ಮರ್ಫಿ ರಸ್ತೆ ಜಂಕ್ಷನ್ ಮತ್ತು ತಿರುವಳ್ಳುವರ್ ಪ್ರತಿಮೆ ಜಂಕ್ಷನ್‌ನಿಂದ ಆರ್‌ಬಿಐ ಜಂಕ್ಷನ್ ಮೂಲಕ ಅಣ್ಣಾಸ್ವಾಮಿ ಮುದಲಿಯಾರ್ ರಸ್ತೆಗೆ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ.
ಎಲ್ಲೆಲ್ಲಿ ಪಾರ್ಕಿಂಗ್‌ಗೆ ನಿರ್ಬಂಧ.?: ಹಲಸೂರು ಕೆರೆ ಮತ್ತು ಕಲ್ಯಾಣಿಯ ಮುಖ್ಯ ದ್ವಾರ ಮತ್ತು ಸುತ್ತಮುತ್ತ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗಗಳ ವಿವರ: ಕೆನ್ಸಿಂಗ್ಟನ್ ರಸ್ತೆಯಿಂದ ಎಂಇಜಿ ಮಾರ್ಗವಾಗಿ ಹಲಸೂರು ಕೆರೆ ಕಡೆಗೆ ಹೋಗುವ ವಾಹನ ಸವಾರರು ಗುರುದ್ವಾರ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಶ್ರೀ ವೃತ್ತದ ಕಡೆಗೆ ಹೋಗಬೇಕು.
ನಿರ್ಬಂಧಿತ ರಸ್ತೆಗಳ ಮೂಲಕ ಭಾರತಿ ನಗರ ಮತ್ತು ಶಿವಾಜಿನಗರದ ಕಡೆಗೆ ಹೋಗುವವರು ಹೇನ್ಸ್ ಜಂಕ್ಷನ್ ಮತ್ತು ಬಂಬೂ ಬಜಾರ್ ಜಂಕ್ಷನ್ ಮೂಲಕ ಪರ್ಯಾಯ ಮಾರ್ಗವಾಗಿ ಪ್ರಯಾಣಿಸಬಹುದು. ಕಾಮರಾಜ್ ರಸ್ತೆಯಲ್ಲಿ ವಾಹನ ಸವಾರರು ಡಿಕನ್ಸನ್ ಜಂಕ್ಷನ್ ಬಳಿ ಬಲ ತಿರುವು ಪಡೆದು ತಿರುವಳ್ಳುವರ್ ಪ್ರತಿಮೆ ಜಂಕ್ಷನ್‌ಗೆ ಹೋಗಬೇಕು. ಸೇಂಟ್ ಜಾನ್ಸ್ ರಸ್ತೆಯಿಂದ ಬರುವ ಪ್ರಯಾಣಿಕರು ಶ್ರೀ ವೃತ್ತದಲ್ಲಿ ಎಡಕ್ಕೆ ತೆಗೆದುಕೊಂಡು ಅಜಂತಾ ಟಾಕೀಸ್ ಮೂಲಕ ತಿರುವಳ್ಳುವರ್ ಪ್ರತಿಮೆ ಜಂಕ್ಷನ್ ಕಡೆಗೆ ಹೋಗಬೇಕಾಗಿದೆ.
ಎಲ್ಲೆಲ್ಲಿ ಮದ್ಯ ಮಾರಾಟ ನಿಷೇಧ?: ಬಾರ್‌ಗಳು, ರೆಸ್ಟೋರೆಂಟ್‌ಗಳು, ವೈನ್ ಶಾಪ್‌ಗಳು, ಪಬ್‌ಗಳು ಮತ್ತು ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (MSIL) ಔಟ್‌ಲೆಟ್‌ಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದ್ದು, ಇದು ಕ್ಲಬ್‌ಗಳು (ಸಿಎಲ್-4) ಮತ್ತು ಸ್ಟಾರ್ ಹೋಟೆಲ್‌ಗಳು (ಸಿಎಲ್-6ಎ) ಪರವಾನಗಿ ಹೊಂದಿರುವ ಕಡೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಉತ್ತರ ಮತ್ತು ಪೂರ್ವ ಬೆಂಗಳೂರಿನ ಏಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಜೆಸಿ ನಗರ, ಆರ್‌ಟಿ ನಗರ, ಹೆಬ್ಬಾಳ, ಸಂಜಯ್ ನಗರ, ಡಿಜೆ ಹಳ್ಳಿ, ಭಾರತಿ ನಗರ ಮತ್ತು ಪುಲಕೇಶಿನಗರ ಪ್ರದೇಶಗಳಲ್ಲಿ ಶನಿವಾರ ಬೆಳಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಜೆಸಿ ನಗರ, ಪೂರ್ವ ಮತ್ತು ಈಶಾನ್ಯ ಬೆಂಗಳೂರಿನ ಎಂಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಮರ್ಷಿಯಲ್ ಸ್ಟ್ರೀಟ್, ಭಾರತಿ ನಗರ, ಶಿವಾಜಿನಗರ, ಪುಲಕೇಶಿನಗರ, ಹಲಸೂರು, ಯಲಹಂಕ, ಯಲಹಂಕ ನ್ಯೂ ಟೌನ್ ಮತ್ತು ವಿದ್ಯಾರಣ್ಯಪುರ ಪ್ರದೇಶಗಳಲ್ಲಿ ಭಾನುವಾರ ಬೆಳಗ್ಗೆ 6 ರಿಂದ ಸೋಮವಾರ ಬೆಳಗ್ಗೆ 6 ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.












Click it and Unblock the Notifications