Ration Card: 'ರಾಗಾ-ಡಿಕೆಶಿ' ಭೇಟಿ, ಬಿಪಿಎಲ್ ಕಾರ್ಡು ರದ್ದು!: ಗೃಹ ಸಚಿವರ ರಿಯಾಕ್ಷನ್
ಬೆಂಗಳೂರು, ಸೆಪ್ಟಂಬರ್ 11: ಅಮೆರಿಕಾದಲ್ಲಿ ಡಿಸೆಎಂಇ ಡಿ.ಕೆ.ಶಿವಕುಮಾರ್ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿಯಾಗಿರುವುದು ನನಗೆ ಗೊತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಬಂದಿರುವ ಫೋಟೊಗಳನ್ನು ಗಮನಿಸಿದ್ದೇನೆ. ಅವರು ಕುಟುಂಬ ಸಮೇತ ಅಮೇರಿಕಾ ಪ್ರವಾಸ ಹೋಗಿದ್ದಾರೆ. ಆಕಸ್ಮಿಕವಾಗಿ ಅದೇ ಹೋಟೆಲ್‌ನಲ್ಲಿ ಸಿಕ್ಕಿದ್ದಾರೆ ಎಂದರೆ, ಓಡಿ ಹೋಗಲು ಆಗುತ್ತಾ? ಹೀಗಾಗಿ ಅವರಿಗೆ ಸತ್ಕರಿಸಿರುತ್ತಾರೆ ಎಂದು ಗೃಹ ಸಚಿವ ಜಿ,ಪರಮೇಶ್ವರ ತಿಳಿಸಿದರು.
ಬುಧವಾರ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪಡಿತರ ಬಿಪಿಎಲ್ ಕಾರ್ಡ್ ರದ್ದು ಬಗ್ಗೆ ಸ್ಪಷ್ಟನೆ ನೀಡಿದರು. ಯಾವುದೇ ಬಿಪಿಎಲ್ ಕಾರ್ಡ್‌ಗಳನ್ನು ಕಡಿತ ಮಾಡುವುದಿಲ್ಲ. ತೆರಿಗೆ ಪಾವತಿ ಮಾಡುತ್ತಿರುವ ಕುಟುಂಬಸ್ಥರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ ಎಂಬುದು ನಿಯಮದಲ್ಲಿದೆ.

ಸುಳ್ಳು ದಾಖಲೆ ಸಲ್ಲಿಸಿ, ಅಧಿಕಾರಿಗಳ ಮನವೊಲಿಸಿ ಕಾರ್ಡ್ ಪಡೆದಿರುವುದು ತಪ್ಪಲ್ಲವೇ? ಯಾರ ಕಾರ್ಡ್‌ನ್ನು ಪಟ್ಟಿಯಿಂದ ತೆಗೆಯುವುದಿಲ್ಲ ಎಂದರು.
ಸರ್ಕಾರ ಬಡವರ ಅನ್ನ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಏನೋ ಹೇಳುತ್ತಾರೇ ಪಾಪ. ಹೆಚ್.ಡಿ.ಕುಮಾರಸ್ವಾಮಿ ಅವರು ದೊಡ್ಡ ಜವಾಬ್ದಾರಿಯಲ್ಲಿದ್ದಾರೆ. ರಾಜ್ಯಕ್ಕೆ ದೊಡ್ಡ ಕೈಗಾರಿಕೆ, ಸ್ಟೀಲ್ ಇಂಡಸ್ಟ್ರೀಸ್ ನೀಡಿದರೆ ಚೆಂದ ಎಂದು ತಿರುಗೇಟು ನೀಡಿದರು.
ಸಿಎಂ ಬದಲಾವಣೆ ಚರ್ಚೆ: ಕಡಿವಾಣ ಶೀಘ್ರ
ಮುಖ್ಯಮಂತ್ರಿ ಸ್ಥಾನದ ಚರ್ಚೆಯ ಬಗ್ಗೆ ಶಿಸ್ತಿನ ಕ್ರಮದ ಕುರಿತು ಪಕ್ಷದ ಅಧ್ಯಕ್ಷರು ಕಡಿವಾಣ ಹಾಕುತ್ತಾರೆ. ಸದ್ಯ ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿಕೆ ಶಿವಕುಮಾರ್ ಅವರು ಅಮೆರಿಕಾ ಪ್ರವಾಸದಲ್ಲಿದ್ದಾರೆ. ಅವರ ಮರಳಿ ಬಂದನಂತರ ಈ ಬಗ್ಗೆ ಗಮನ ಹರಿಸುತ್ತಾರೆ ಎಂದು ವಿವರಿಸಿದರು.

ವಾಲ್ಮೀಕಿ ನಿಗಮ ಹಗರಣದ ಇ.ಡಿ. ಚಾರ್ಜ್‌ಶೀಟ್ ಕುರಿತು ಪ್ರತಿಕ್ರಿಯಿಸಿ, ನಮ್ಮೆಲ್ಲರ ಹೇಳಿಕೆಗಳು ಮುಖ್ಯವಲ್ಲ. ತನಿಖಾ ಸಂಸ್ಥೆಗಳಿಗೆ ದೊರೆತ ಸಾಕ್ಷ್ಯಾಧಾರಗಳ ಆಧಾರದ ಮೇಲೆ ತೀರ್ಮಾನ ಮಾಡುತ್ತಾರೆ. ನಾವು ನೀಡುವ ಹೇಳಿಕೆಗಳು ಮೇಲ್ನೋಟಕ್ಕೆ ಮಾತ್ರ. ತನಿಖೆ ಕೈಗೊಂಡ ಬಳಿಕ ಸತ್ಯಾಸತ್ಯತೆ ಗೊತ್ತಾಗುತ್ತದೆ.
ಮಾಜಿ ಸಚಿವ ನಾಗೇಂದ್ರ ಅವರ ಪಾತ್ರ ಇದೆ ಎಂದು ಇ.ಡಿ.ಯವರು ಹೇಳುತ್ತಿದ್ದಾರೆ. ಬೇಕಾದಷ್ಟು ಸಲ ಹಾಗೇ ಆಗುತ್ತದೆ. ಅವರು ಹೇಳಿರುವುದಕ್ಕೆ ನಮಗೆ ಸಾಕ್ಷ್ಯ ಸಿಕ್ಕಿರುವುದಿಲ್ಲ. ನಾವು ಹೇಳಿರುವುದಕ್ಕೆ ಅವರಿಗೆ ಸಾಕ್ಷ್ಯ ಸಿಕ್ಕಿರುವುದಿಲ್ಲ. ಬೇಕಾದಷ್ಟು ಸಲ ಹೀಗಾಗಿದೆ. ವಿವಿಧ ತನಿಖಾ ಸಂಸ್ಥೆಗಳ ತನಿಖಾ ವಿಧಾನವೇ ಬೇರೆ ಇರುತ್ತದೆ. ಆ ದೃಷ್ಟಿಯಿಂದ ಮಾಡುತ್ತಾರೆ. ಇ.ಡಿ.ಯವರು ಮತ್ತು ಎಸ್‌ಐಟಿಯವರು ಇಬ್ಬರು ಚಾರ್ಜ್‌ಶೀಟ್ ಸಲ್ಲಿಸುತ್ತಾರೆ ಎಂದು ಹೇಳಿದರು.
ತನಿಖೆ ಬಾಕಿ ಪ್ರಕರಣಗಳ ವರದಿ ಕ್ಯಾಬಿನೆಟ್‌ಗೆ ಸಲ್ಲಿಕೆ ಶೀಘ್ರ
ಪೊಲೀಸ್ ಇಲಾಖೆಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಪ್ರಗತಿ ಪರಿಶೀಲನೆ ಮಾಡಲಾಗಿದೆ. ಒಂದಷ್ಟು ಅಂಶಗಳನ್ನು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಪ್ರಕರಣಗಳು ಸಂಬಂಧ ವಾರದೊಳಗೆ ಸಭೆ ಮಾಡಿ ಆ ವರದಿಯನ್ನು ಸಚಿವ ಸಂಪುಟಕ್ಕೆ ಸಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ತನಿಖಾ ಸಂಸ್ಥೆಗಳ ಹಂತದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಅವರು ಪರಿಶೀಲಿಸಿದ್ದಾರೆ. ಅಗತ್ಯ ಸೂಚನೆ ನೀಡಿದ್ದಾರೆ. ತ್ವರಿತಗತಿಯಲ್ಲಿ ತನಿಖೆ ಮಾಡಲು ಸಮಿತಿ ರಚಿಸಲಾಗಿದೆ. ಅದರಂತೆ ಒಂದು ವಾರದಲ್ಲಿ ಸಭೆ ಮಾಡಿ ಕ್ಯಾಬಿನೆಟ್‌ಗೆ ಸಲ್ಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಲ್ಲ ಹಗರಣಗಳ ಪ್ರಕರಣಗಳನ್ನು ಗುರುತಿಸಿದ್ದೇವೆ. ಅವುಗಳ ತನಿಖೆ ಯಾವ ಹಂತದಲ್ಲಿವೆ ಎಂಬುದನ್ನು ಪರಿಶೀಲಿಸಿ, ವರದಿ ಸಿದ್ದಪಡಿಸಲಾಗುತ್ತದೆ. ತ್ವರಿತಗತಿಯಲ್ಲಿ ತನಿಖೆ ನಡೆಯಬೇಕು ಎಂಬ ಉದ್ದೇಶದಿಂದ ಸಮಿತಿ ರಚನೆ ಮಾಡಲಾಗಿದೆ.
ಬಿಜೆಪಿಯಿಂದ ದ್ವೇಷ ರಾಜಕಾರಣ
ಇನ್ನೂ ದ್ವೇಷದ ರಾಜಕಾರಣ ಆರೋಪಕ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಏನಾದರು ಹೇಳಿಕೊಳ್ಳಲಿ. ನಮ್ಮನ್ನು ಟೀಕೆ ಮಾಡುವುದಕ್ಕೆ, ಸಲಹೆ ನೀಡಲು, ತಪ್ಪು ಮಾಡಿದಾಗ ಹೇಳುವುದಕ್ಕೆ ಅವರಿಗೆ ಜವಾಬ್ದಾರಿ ಇದೆ. ಆಡಳಿತ ನಡೆಸುವರಿಗೂ ಅವರಿಗೆ ಆದಂತಹ ಜವಾಬ್ದಾರಿಗಳಿರುತ್ತವೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚೆ ಅನಗತ್ಯ. ನಾವು ಜನರಿಗೆ ಕೊಟ್ಟ ಭರವಸೆಗಳನ್ನು, ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಆಡಳಿತ ಮಾಡಬೇಕು. ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಸರ್ಕಾರವನ್ನು ಅಸ್ಥಿರಗೊಳಿಸಲು, ಸರ್ಕಾರದ ಕಾರ್ಯಕ್ರಮಗಳು ಅನುಷ್ಟಾನ ಆಗಬಾರದು ಎಂಬ ಉದ್ದೇಶದಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ಬದಿಗೊತ್ತಿ ನಾವು ಕೆಲಸ ಮಾಡಬೇಕಿದೆ ಎಂದರು.












Click it and Unblock the Notifications