ಮಹಿಳೆಯರು, ಮಂಗಳಮುಖಿಯರ 'ಉಚಿತ ಆಟೋ ಚಾಲನಾ ತರಬೇತಿ'ಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ
ಬೆಂಗಳೂರು: ಸಮಾಜದಲ್ಲಿ ಮಹಿಳೆಯರು ಹಾಗೂ ನಿರ್ಲಕ್ಷ್ಯಕ್ಕೊಳಗಾದ ಮಂಗಳಮುಖಿಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಅತ್ಯಂತ ಮಹತ್ವದ ಹಾಗೂ ಮಾದರಿ ಹೆಜ್ಜೆಯೊಂದನ್ನು ಇಡಲಾಗಿದೆ. ಮಹಿಳೆಯರು ಮತ್ತು ಮಂಗಳಮುಖಿಯರಿಗೆ ಬದುಕಿನ ದಾರಿ ತೋರಿಸುವ ಉದ್ದೇಶದಿಂದ 'ಉಚಿತ ಆಟೋ ಚಾಲನಾ ತರಬೇತಿ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ರಾಜ್ಯ ಸರ್ಕಾರದಿಂದ ಈ ಯೋಜನೆಗೆ ಸಂಪೂರ್ಣ ಬೆಂಬಲ ಹಾಗೂ ಪ್ರೋತ್ಸಾಹ ಸಿಗಲಿದೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಭರವಸೆ ನೀಡಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಬಿಟಿಎಂ ಲೇಔಟ್‌ನಲ್ಲಿ ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ (B.PAC) ಹಾಗೂ ಸಿಜಿಐ (CGI) ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಹಿಳೆಯರು ಮತ್ತು ಮಂಗಳಮುಖಿಯರ ಉಚಿತ ಆಟೋ ಚಾಲನಾ ಹಾಗೂ ಕೌಶಲ್ಯ ತರಬೇತಿ ಶಿಬಿರಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿ ಸಚಿವರು ಮಾತನಾಡಿದರು. ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿರುವ ಸಮುದಾಯಗಳನ್ನು ಗುರುತಿಸಿ, ಅವರಿಗೆ ಸ್ವಂತ ಕಾಲಿನ ಮೇಲೆ ನಿಲ್ಲಲು ಕೌಶಲ್ಯ ತರಬೇತಿ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಅವರು ಆಯೋಜಕರನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.

ಬೆಂಗಳೂರಿಗರ ಬೆನ್ನೆಲುಬು 'ಆಟೋ'
ತಮ್ಮ ಭಾಷಣದಲ್ಲಿ ಆಟೋ ಚಾಲಕರ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಸಚಿವ ರಾಮಲಿಂಗಾರೆಡ್ಡಿ, "ಸಿಲಿಕಾನ್ ಸಿಟಿ ಬೆಂಗಳೂರಿನಂತಹ ಬೃಹತ್ ಮಹಾನಗರದಲ್ಲಿ ದಿನನಿತ್ಯದ ಸಂಚಾರಕ್ಕೆ ಆಟೋರಿಕ್ಷಾಗಳ ಪಾತ್ರ ಬಹುಮುಖ್ಯವಾಗಿದೆ. ನೀವು ನಗರದ ಯಾವುದೇ ಮೂಲೆಗೆ, ಯಾವುದೇ ಜಾಗಕ್ಕೆ ತ್ವರಿತವಾಗಿ ತೆರಳಬೇಕಿದ್ದರೂ ಅಲ್ಲಿ ಆಟೋ ಅನಿವಾರ್ಯವಾಗಿದೆ. ಆಟೋರಿಕ್ಷಾಗಳು ಮತ್ತು ಅದರ ಚಾಲಕರು ಬೆಂಗಳೂರಿಗರ ಸಾರಿಗೆ ವ್ಯವಸ್ಥೆಯ ಬೆನ್ನೆಲುಬಾಗಿ ನಿಂತಿದ್ದಾರೆ. ಇದೀಗ ಈ ಕ್ಷೇತ್ರಕ್ಕೆ ಮಹಿಳೆಯರು ಮತ್ತು ಮಂಗಳಮುಖಿಯರು ಧೈರ್ಯವಾಗಿ ಪ್ರವೇಶಿಸುತ್ತಿರುವುದು ಬದಲಾವಣೆ ಸಂಕೇತವಾಗಿದೆ" ಎಂದರು.
ಇದೇ ವೇಳೆ ಆಟೋ ಚಾಲಕರ ಸಮುದಾಯಕ್ಕೆ ಗುಡ್‌ನ್ಯೂಸ್ ನೀಡಿದ ಸಚಿವರು, ಆಟೋ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಹೀಗಾಗಿ ಇಡೀ ಆಟೋ ಚಾಲಕರ ಸಮುದಾಯಕ್ಕೆ ಅನುಕೂಲವಾಗುವಂತೆ ಇನ್ನಷ್ಟು ಹೊಸ ಯೋಜನೆಗಳು ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ನಡೆಸಲಾಗುತ್ತಿದೆ. ಮುಂಬರುವ ರಾಜ್ಯ ಬಜೆಟ್ ಮಂಡನೆಯಾದ ನಂತರ ಈ ಬಗ್ಗೆ ಅಧಿಕೃತವಾಗಿ ಸೂಕ್ತ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಎಲ್ಲಾ ಕ್ಷೇತ್ರಗಳಿಗೂ ವಿಸ್ತರಣೆ ಗುರಿ
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಹಿತಿ ಹಂಚಿಕೊಂಡ ಬಿ.ಪ್ಯಾಕ್ ಹಾಗೂ ಸಿಜಿಐ ಆಯೋಜಕರು, ಈ ವಿನೂತನ ಯೋಜನೆಯ ಯಶಸ್ಸಿನ ಬಗ್ಗೆ ವಿವರಿಸಿದರು. "ಈಗಾಗಲೇ ಈ ಯೋಜನೆಯ ಅಡಿಯಲ್ಲಿ ಬೆಂಗಳೂರಿನ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ 500ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಂಗಳಮುಖಿಯರಿಗೆ ಅತ್ಯಂತ ವ್ಯವಸ್ಥಿತವಾಗಿ ಪ್ರಮಾಣಿತ ಆಟೋ ಚಾಲಕರಾಗಿ ತರಬೇತಿ ನೀಡಲಾಗಿದೆ. ತರಬೇತಿ ಪಡೆದವರು ಇಂದು ಯಶಸ್ವಿಯಾಗಿ ಆಟೋ ಚಾಲನೆ ಮಾಡುತ್ತಾ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಬೃಹತ್ ಕಾರ್ಯಕ್ರಮವನ್ನು ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ವಿಸ್ತರಿಸುವ ಮಹತ್ವಾಕಾಂಕ್ಷಿ ಯೋಜನೆ ನಮ್ಮ ಮುಂದಿದೆ" ಎಂದು ಸಂತಸ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ, ಪುರುಷ ಪಾರುಪತ್ಯದ ಕ್ಷೇತ್ರವಾಗಿದ್ದ ಆಟೋ ಚಾಲನಾ ವೃತ್ತಿಗೆ ಇದೀಗ ಮಹಿಳೆಯರು ಹಾಗೂ ಮಂಗಳಮುಖಿಯರು ಲಗ್ಗೆ ಇಡುತ್ತಿರುವುದು ಸ್ತ್ರೀ ಸಬಲೀಕರಣ ಹಾಗೂ ಸಮಾನತೆಯ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆಯಾಗಿದೆ.












Click it and Unblock the Notifications