Foxconn: ಬೆಂಗಳೂರಿನ ದೇವನಹಳ್ಳಿಯಲ್ಲಿ ಐಫೋನ್ ಉತ್ಪಾದನೆ ಆರಂಭಕ್ಕೆ ದಿನಾಂಕ ಫೀಕ್ಸ್: ಎಂಬಿಪಾ
ಬೆಂಗಳೂರು, ಮೇ 31: ಮುಂಚೂಣಿ ಐಫೋನ್ ತಯಾರಿಕಾ ಕಂಪನಿ ಫಾಕ್ಸ್‌ಕಾನ್ 2024ರ ಏಪ್ರಿಲ್ 1ರ ವೇಳೆಗೆ ದೇವನಹಳ್ಳಿ ಘಟಕದಲ್ಲಿ ಉತ್ಪಾದನೆ ಆರಂಭಿಸಲಿದೆ. ಇದಕ್ಕೆ ಪೂರಕವಾಗಿ ಜುಲೈ 1ರ ಹೊತ್ತಿಗೆ ಪೂರ್ತಿಯಾಗಿ ಭೂಮಿ ಹಸ್ತಾಂತರಿಸುವುದಾಗಿ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಗುರುವಾರ ಮಾಹಿತಿ ನೀಡಿದರು.
ಕಂಪನಿಯ ಜಾರ್ಜ್ ಚು ಅವರ ನೇತೃತ್ವದಲ್ಲಿ ಫಾಕ್ಸ್ ಕಾನ್ ಕಂಪನಿಯ ಉನ್ನತ ಅಧಿಕಾರಿಗಳ ತಂಡವು ಸೌಜನ್ಯದ ಭೇಟಿ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಹೊಸ ಸರ್ಕಾರವು 50,000 ಜನರಿಗೆ ಉದ್ಯೋಗ ಒದಗಿಸುವ 13,600 ಕೋಟಿ ರೂಪಾಯಿಯ ಮೊತ್ತದ ಈ ಯೋಜನೆ ಜಾರಿಗೆ ವೇಗ ನೀಡಿದಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ದೇವನಹಳ್ಳಿ ಸಾಮಾನ್ಯ ಕೈಗಾರಿಕಾ ಪ್ರದೇಶದಲ್ಲಿ (ITIR) ಕಾರ್ಯಯೋಜನೆಗಾಗಿ 300 ಎಕರೆ ಗುರುತಿಸಲಾಗಿದೆ. 2024ರ ಏಪ್ರಿಲ್ 1ರ ವೇಳೆಗೆ ಇಲ್ಲಿ ಕಂಪನಿಯು ತಯಾರಿಕೆ ಶುರು ಮಾಡುವ ಗುರಿ ಹಾಕಿಕೊಂಡಿದೆ. ಇದನ್ನು ಗಮನದಲ್ಲಿರಿಸಿಕೊಂಡು ಜುಲೈ 1ಕ್ಕೆ ಮೊದಲೇ ಮುಂಚೆ ಕಂಪನಿಗೆ ಭೂಮಿ ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದರು.
ಕಂಪನಿಯು ದಿನಕ್ಕೆ 50ಲಕ್ಷ ಲೀಟರ್ ನೀರು ಬೇಕಾಗುವುದಾಗಿ ತಿಳಿಸಿದೆ. ಇದನ್ನು ಪೂರೈಸುವ ಜೊತೆಗೆ ಗುಣಮಟ್ಟದ ವಿದ್ಯುತ್, ರಸ್ತೆ ಸಂಪರ್ಕ ಇತ್ಯಾದಿ ಮೂಲಸೌಕರ್ಯಗಳನ್ನು ಸರ್ಕಾರ ಒದಗಿಸಲಿದೆ.
ಕೌಶಲ್ಯಗಳ ತರಬೇತಿಗೆ ಕಂಪನಿ ಆದ್ಯತೆ
ಕಂಪನಿಯ ಸಿಬ್ಬಂದಿಗೆ ಬೇಕಾಗುವ ಕೌಶಲ್ಯದ ವಿವರಗಳನ್ನು ಕೂಡ ಕೇಳಲಾಗಿದೆ. ಅದಕ್ಕೆ ತಕ್ಕಂತೆ ಸರ್ಕಾರದ ವತಿಯಿಂದ ಅರ್ಹರಿಗೆ ಕೌಶಲಗಳ ತರಬೇತಿ ಕೊಟ್ಟು ಮಾನವ ಸಂಪನ್ಮೂಲ ದೊರಕುವಂತೆ ಮಾಡಲು ಕಂಪನಿ ಆದ್ಯತೆ ಕೊಡುವುದಾಗಿ ತಿಳಿಸಿದ್ದಾರೆ ಎಂದು ಸಚಿವರು ಹೇಳಿದರು.

ತೈವಾನ್ ಮೂಲದ ಮುಂಚೂಣಿ ಕಂಪನಿಯು ಮೂರು ಹಂತಗಳಲ್ಲಿ ಘಟಕ ನಿರ್ಮಾಣ ಪೂರೈಸಿ ಅಂತಿಮವಾಗಿ ಇಲ್ಲಿ ವರ್ಷಕ್ಕೆ 2 ಕೋಟಿ ಮೊಬೈಲ್‌ಗಳನ್ನು ತಯಾರಿಸುವ ಯೋಜನೆ ಹಾಕಿಕೊಂಡಿದೆ. ಈಗಾಗಲೇ ಭೂಮಿಗಾಗಿ ನಿಗದಿಗೊಳಿಸಿರುವ ಮೊತ್ತದಲ್ಲಿ ಶೇಕಡ 30ರಷ್ಟನ್ನು (90 ಕೋಟಿ ರೂಪಾಯಿ) ಕಂಪನಿಯು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಪಾವತಿ ಮಾಡಿದೆ.
ಇದಕ್ಕೂ ಮುನ್ನ ಜುಬಿಲಿಯಂಟ್ ಫುಡ್ ವರ್ಕ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅಮರದೀಪಸಿಂಗ್ ಅಹ್ಲುವಾಲಿಯಾ, ಎಫ್ಐಸಿಸಿಐ ಕರ್ನಾಟಕ ಮಂಡಳದ ಅಧ್ಯಕ್ಷ ಕೆ. ಉಲ್ಲಾಸ್ ಕಾಮತ್, ಕರ್ನಾಟಕ ಮಂಡಳದ ಅಧ್ಯಕ್ಷ ಶಜು ಮಂಗಳಂ, ಸಿಐಐ ಕರ್ನಾಟಕ ಮಂಡಲ ಅಧ್ಯಕ್ಷ ವಿಜಯಕೃಷ್ಣನ್ ವೆಂಕಟೇಶನ್ ಮತ್ತಿತರರು ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಕೈಗಾರಿಕಾ ಸಚಿವರೊಂದಿಗೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಐಟಿ ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಹಾಗೂ ಕಂಪನಿಯ ಪೌಲ್ ಲಿಯು, ಟಾನ್ನಿ ಲಿಯು, ಸೈಮನ್ ಸಾಂಗ್, ಭಾರತ್ ದಂಡಿ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications