ಚಿನ್ನದ ದರೋಡೆಯಲ್ಲಿ ಬೆಂಗ್ಳೂರಿನ ನೈಜೀರಿಯಾ ಪ್ರಜೆಗಳ ಷಾಮೀಲು
ಹೈದರಾಬಾದ್ ನಲ್ಲಿ ಏಪ್ರಿಲ್ 16ರಂದು ನಡೆದಿದ್ದ ಚಿನ್ನದ ದರೋಡೆಯಲ್ಲಿ ಬೆಂಗಳೂರಿನಲ್ಲಿರುವ ನಾಲ್ವರು ನೈಜೀರಿಯಾ ಪ್ರಜೆಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಹೈದರಾಬಾದ್, ಜೂನ್ 4: ಇದೇ ವರ್ಷ ಏಪ್ರಿಲ್ 16ರಂದು ಹೈದರಾಬಾದ್ ನಲ್ಲಿ ನಡೆದಿದ್ದ 1.5 ಕೋಟಿ ರು. ಮೌಲ್ಯದ ಚಿನ್ನಾಭರಣ ಲೂಟಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ನಾಲ್ವರು ನೈಜೀರಿಯಾ ಪ್ರಜೆಗಳನ್ನು ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಈ ಬಂಧನದ ಮೂಲಕ, ಈ ಲೂಟಿ ಪ್ರಕರಣದ ಹಿಂದಿನ ಕೆಲವಾರು ಆಘಾತಕಾರಿ ಅಂಶಗಳು ಬಯಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದ ಹಿಂದೆ ಪೆರು ದೇಶದಲ್ಲಿನ ಕುಖ್ಯಾತ ಗ್ಯಾಂಗ್ ಒಂದರ ತಂತ್ರಗಾರಿಕೆ ಅಡಗಿರುವುದು ತಿಳಿದುಬಂದಿದೆ ಎಂದು ಹೇಳಿರುವ ಪೊಲೀಸರು, ಇಡೀ ಲೂಟಿ ಪ್ರಕರಣದ ಸ್ಕೆಚ್ ಪೆರುವಿಲ್ಲೇ ತಯಾರಾಗಿತ್ತೆಂಬ ಆಘಾತಕಾರಿ ಸತ್ಯವನ್ನೂ ಹೊರಗೆಡವಿದ್ದಾರೆ.
ಏನಿದು ಪ್ರಕರಣ?
ಹೈದರಾಬಾದ್ ನ ಚಿನ್ನದ ವ್ಯಾಪಾರಿಯಾಗಿರುವ ಅಭಿಷೇಕ್ ಅಗರ್ವಾಲ್ ಅವರು, ಏಪ್ರಿಲ್ 16ರಂದು ತಮ್ಮೊಂದಿಗೆ ಒಂದೂವರೆ ಕೋಟಿ ಮೌಲ್ಯದ ಬಂಗಾರವನ್ನು ಕೊಂಡೊಯ್ಯುತ್ತಿರುವಾಗ ಮಾರ್ಗ ಮಧ್ಯೆ ಮೊಳೆಗಳನ್ನು ರಸ್ತೆಯಲ್ಲಿ ಚೆಲ್ಲುವ ಮೂಲಕ ಅವರು ಪ್ರಯಾಣಿಸುತ್ತಿದ್ದ ಕಾರು ಪಂಕ್ಚರ್ ಆಗುವಂತೆ ಮಾಡಿತ್ತು ಈ ಗ್ಯಾಂಗ್.
ಆಗ, ಅಭಿಷೇಕ್ ಅಗರ್ವಾಲ್ ಅವರ ಡ್ರೈವರ್ ಕಾರಿನ ಚಕ್ರವನ್ನು ಬದಲಾಯಿಸುವ ಸಲುವಾಗಿ ಕಾರನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಟೈರು ಬದಲಾಯಿಸವಲ್ಲಿ ನಿರತರಾಗಿದ್ದರು. ಆಗ, ಪೆರು ಮೂಲದ ಇಬ್ಬರು ಮಹಿಳೆಯರು ಕಾರಿನ ಬಾಗಿಲನ್ನು ತೆರೆದು ಸುಮಾರು 3.5 ಕೆ.ಜಿ. ಚಿನ್ನ ಇಟ್ಟಿದ್ದ ಪೆಟ್ಟಿಗೆಯನ್ನು ನೋಡನೋಡುತ್ತಿದ್ದಂತೆಯೇ ಎತ್ತಿಕೊಂಡು ಪರಾರಿಯಾಗಿದ್ದರು.
ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ ಅಗರ್ವಾಲ್ ಪ್ರಯಾಣಿಸುತ್ತಿದ್ದ ಕಾರನ್ನು ಮತ್ತೊಂದು ಕಾರೊಂದು ಬೆಂಗಳೂರಿನಿಂದ ಹಿಂಬಾಲಿಸುತ್ತಿದ್ದನ್ನು ಪತ್ತೆ ಹಚ್ಚಿದ್ದರು. ಆಗ ಕಾರಿನ ಜಾಡನ್ನು ಹಿಡಿದು ಸಾಗಿದ ಪೊಲೀಸರಿಗೆ, ದರೋಡೆ ಮುಗಿನ ನಂತರ ಆ ಕಾರು ಬೆಂಗಳೂರಿನ ದೇವನ ಹಳ್ಳಿ ಚೆಕ್ ಪೋಸ್ಟ್ ಕಡೆಯಿಂದ ಹಾದು ಹೋಗಿರುವುದು ಖಾತ್ರಿಯಾಯಿತು.
ಆ ಕಾರಿನ ಸಂಖ್ಯೆನ್ನು ಜಾಲಾಡಿದಾಗ ಆ ಕಾರಿನ ಮಾಲೀಕ ಪಂಕಜ್ ಸತ್ಯನಾರಾಯಣ ಸರಾಫ್ ಎಂಬಾತನ್ನು ಪೊಲೀಸರು ವಿಚಾರಣೆಗೊಳಪಡಿಸಿದರು.
ಆದರೆ, 2015ರಲ್ಲೇ ಆ ಕಾರನ್ನು ಸರಾಫ್ ಮಾರಾಟ ಮಾಡಿದ್ದಾಗಿ ಹೇಳಿದ್ದ. ಮೈಕಲ್ ಹಾಗೂ ಬಾಲ್ಕಿನ್ಸ್ ಎಂಬ ಇಬ್ಬರು ನೈಜೀರಿಯಾ ಪ್ರಜೆಗಳಿಗೆ ಕಾರನ್ನು ಮಾರಾಟ ಮಾಡಿದ್ದಾಗಿ ಹೇಳಿದ್ದ ಸರಾಜ್.
ಈ ಮಾಹಿತಿ ಆಧಾರಿಸಿ ಜಾಲಾಡಿದ ಪೊಲೀಸರಿಗೆ ಬೆಂಗಳೂರಿನಲ್ಲಿ ಅಡಗಿದ್ದ ಈ ಮೈಕಲ್, ಬಾಲ್ಕಿನ್ಸ್ ಸಿಕ್ಕಿಹಾಕಿಕೊಂಡಿದ್ದಾರೆ. ಅವರ ಮೂಲಕ, ಇಡೀ ಜಾಲವೇ ಬಹಿರಂಗಗೊಂಡಿದೆ.












Click it and Unblock the Notifications