ಬಡಮಕ್ಕಳ ಬಾಳಲ್ಲಿ ಬೆಳಕಾದ ಇಸ್ರೋ ಮಾಜಿ ವಿಜ್ಞಾನಿ: 8000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಹರೀಶ್
ಬೆಂಗಳೂರು: "ಮಕ್ಕಳ ಭವಿಷ್ಯವನ್ನ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ನಿರ್ಧರಿಸಬಾರದು. ಬದಲಿಗೆ, ಅವರ ಪ್ರತಿಭೆ, ಆಸಕ್ತಿ ಹಾಗೂ ಪರಿಶ್ರಮ ನಿರ್ಧರಿಸಬೇಕು" ಎಂಬುದು ಕೇವಲ ಮಾತಲ್ಲ, ಅದನ್ನೇ ತಮ್ಮ ಜೀವನದ ಧ್ಯೇಯವಾಗಿಸಿಕೊಂಡಿದ್ದಾರೆ ಇಸ್ರೋದ ಮಾಜಿ ವಿಜ್ಞಾನಿ ಕೆ. ಹರೀಶ್.
ಹೌದು, ಬಡತನದ ಕಾರಣದಿಂದಾಗಿ ಯಾವ ಒಬ್ಬ ವಿದ್ಯಾರ್ಥಿಯೂ ಗುಣಮಟ್ಟದ ಶಿಕ್ಷಣದಿಂದ ವಂಚಿತನಾಗಬಾರದು ಎಂಬ ಉದ್ದೇಶದಿಂದ ಅವರು, ಬೆಂಗಳೂರಿನ ಮಾರತಹಳ್ಳಿ ಮತ್ತು ವರ್ತೂರಿನಲ್ಲಿರುವ ತಮ್ಮ ಶಿಕ್ಷಣ ಸಂಸ್ಥೆಯ ಮೂಲಕ ಸಾವಿರಾರು ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ.

ಕಳೆದ 11 ವರ್ಷಗಳಿಂದ ವಾಗ್ದೇವಿ ವಿಲಾಸ ಶಾಲೆ ಉಚಿತ ಶಿಕ್ಷಣ ನೀಡುವ ಮೂಲಕ ಬಡ ಮಕ್ಕಳ ಪಾಲಿನ ವಿದ್ಯಾ ದೇಗುಲವಾಗಿ ರೂಪುಗೊಂಡಿದೆ.
ಇಸ್ರೋ ಮಾಜಿ ವಿಜ್ಞಾನಿ ಕೆ.ಹರೀಶ್ ಅವರಿಂದ ಬಡ ಮಕ್ಕಳಿಗೆ ಶಿಕ್ಷಣ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೋ) ವಿಜ್ಞಾನಿಯಾಗಿ ಸೇವೆ ಸಲ್ಲಿಸಿರುವ ಕೆ. ಹರೀಶ್ ಅವರು, ತಮ್ಮ ಬಾಲ್ಯದಲ್ಲಿ ಶಿಕ್ಷಣಕ್ಕಾಗಿ ಪಟ್ಟ ಕಷ್ಟ ಹಾಗೂ ಎದುರಿಸಿದ ಆರ್ಥಿಕ ಸವಾಲುಗಳನ್ನ ಇಂದಿಗೂ ಮರೆತಿಲ್ಲ. ತಮಗೆ ಎದುರಾದ ಕಷ್ಟ ಇಂದಿನ ಪ್ರತಿಭಾವಂತ ಮಕ್ಕಳಿಗೆ ಎದುರಾಗಬಾರದು ಎಂಬ ಕಾರಣಕ್ಕಾಗಿಯೇ ಅವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ನಿರ್ಧರಿಸಿದರು.
ಕೇವಲ ಹಣವಿಲ್ಲ ಎಂಬ ಒಂದೇ ಕಾರಣಕ್ಕೆ ಮಕ್ಕಳ ಕನಸುಗಳು ಕಮರಿಹೋಗಬಾರದು. ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹ ದೊರೆತರೆ, ಆ ಮಕ್ಕಳು ಕೇವಲ ತಮ್ಮ ಭವಿಷ್ಯವನ್ನು ಮಾತ್ರವಲ್ಲದೆ, ಇಡೀ ಸಮಾಜವನ್ನೇ ಬದಲಾಯಿಸುವ ಶಕ್ತಿಯಾಗಿ ಹೊರಹೊಮ್ಮುತ್ತಾರೆ ಎಂಬುದು ಹರೀಶ್ ಅವರ ನಂಬಿಕೆ.
ಈ ವರ್ಷವೂ 800ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಶಿಕ್ಷಣ
ಬೆಂಗಳೂರಿನ ಪ್ರತಿಷ್ಠಿತ ಸಿಬಿಎಸ್‌ಇ ಶಾಲೆಗಳ ಪೈಕಿ ಒಂದಾಗಿರುವ ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆಯಲ್ಲಿ ಕೇವಲ ಶ್ರೀಮಂತರ ಮಕ್ಕಳಷ್ಟೇ ಅಲ್ಲ, ಆರ್ಥಿಕವಾಗಿ ಹಿಂದುಳಿದ ವರ್ಗದ ಬಡ ಕುಟುಂಬದ ಮಕ್ಕಳೂ ಸಹ ಉನ್ನತ ದರ್ಜೆಯ ಶಿಕ್ಷಣ ಪಡೆಯುತ್ತಿದ್ದಾರೆ.
ಕಳೆದ ಹನ್ನೊಂದು ವರ್ಷಗಳಲ್ಲಿ ಸಿಬಿಎಸ್‌ಇ ಪಠ್ಯಕ್ರಮದಡಿ ಬರೋಬರಿ 8,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಉಚಿತವಾಗಿ ವಿದ್ಯಾರ್ಜನೆ ಮಾಡಿದ್ದಾರೆ. ವಿಶೇಷವೆಂದರೆ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿಯೂ 1ನೇ ತರಗತಿಯಿಂದ 10ನೇ ತರಗತಿಯವರೆಗಿನ ಸುಮಾರು 800ಕ್ಕೂ ಹೆಚ್ಚು ಬಡ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಲಾಗುತ್ತಿದೆ.
ಶಾಲೆಯಲ್ಲಿ ವಿಜ್ಞಾನ ಮತ್ತು ಪರಿಸರ ಜಾಗೃತಿ
ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆ ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ಚಿಕ್ಕ ವಯಸ್ಸಿನಿಂದಲೇ ವೈಜ್ಞಾನಿಕ ಮನೋಭಾವವನ್ನ ಬೆಳೆಸುವ ನಿಟ್ಟಿನಲ್ಲಿ ವಿಶೇಷ ಒತ್ತು ನೀಡಲಾಗಿದೆ. ಇದಕ್ಕಾಗಿ ಕ್ಯಾಂಪಸ್‌ನಲ್ಲಿ ಸೈನ್ಸ್ ಟೆಕ್ ಪಾರ್ಕ್ನಂತಹ ವಿನೂತನ ಉಪಕ್ರಮಗಳನ್ನು ಅಳವಡಿಸಲಾಗಿದೆ.
ಇದರ ಜೊತೆಗೆ ಪರಿಸರ ಸಂರಕ್ಷಣೆಯ ಮಹತ್ವವನ್ನ ಪ್ರಾಯೋಗಿಕವಾಗಿ ತಿಳಿಸಿಕೊಡಲು ಮಳೆನೀರು ಕೊಯ್ಲು, ಸೌರಶಕ್ತಿ ಬಳಕೆ, ತ್ಯಾಜ್ಯ ಕಾಗದಗಳ ಮರುಬಳಕೆ, ಜೈವಿಕ ಅನಿಲ (ಬಯೋಗ್ಯಾಸ್) ಉತ್ಪಾದನೆ ಮತ್ತು ಎರೆಹುಳು ಗೊಬ್ಬರ ತಯಾರಿಕೆಯಂತಹ ಪರಿಸರ ಸ್ನೇಹಿ ಯೋಜನೆಗಳನ್ನು ಶಾಲೆಯಲ್ಲಿಯೇ ಅನುಷ್ಠಾನಗೊಳಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆಯನ್ನು ದೈನಂದಿನ ಬದುಕಿನ ಭಾಗವಾಗಿಸಿಕೊಳ್ಳಲು ಪ್ರೇರೇಪಿಸುತ್ತಿದೆ.
ಶೈಕ್ಷಣಿಕ ಸಾಧನೆ ಜೊತೆಗೆ ಮೌಲ್ಯಾಧಾರಿತ ಶಿಕ್ಷಣ
ವಾಗ್ದೇವಿ ವಿಲಾಸ ಸಂಸ್ಥೆಯು ಕೇವಲ ಅಂಕಗಳಿಕೆಯ ಹಿಂದೆ ಬಿದ್ದಿಲ್ಲ. ವಿದ್ಯಾರ್ಥಿಗಳಲ್ಲಿ ಶಿಸ್ತು, ಪರಸ್ಪರ ಗೌರವ, ರಾಷ್ಟ್ರಪ್ರೇಮ, ಮಾನವೀಯತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ಮೌಲ್ಯಾಧಾರಿತ ಶಿಕ್ಷಣಕ್ಕೆ ಇಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತದೆ.
ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸುವ ಜೊತೆಗೆ, ಭವಿಷ್ಯದ ಸತ್ಪ್ರಜೆಗಳನ್ನ ನಿರ್ಮಿಸುವ ಮಹತ್ಕಾರ್ಯವನ್ನು ಹರೀಶ್ ಅವರು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಕನ್ನಡಿಗರೊಬ್ಬರ ಈ ನಿಸ್ವಾರ್ಥ ಸಮಾಜ ಸೇವೆ ನಿಜಕ್ಕೂ ಸಮಾಜಕ್ಕೆ ದೊಡ್ಡ ಮಾದರಿಯಾಗಿದೆ.


Click it and Unblock the Notifications
