• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತೇಜಸ್ವಿ ವಿಭಿನ್ನ ಯೋಚನಾಶೈಲಿಯೇ ಅವರ ಹೆಗ್ಗುರುತು: ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 08: ''ನಾನು ವಿದ್ಯಾರ್ಥಿಯಾಗಿದ್ದಾಗ ತೇಜಸ್ವಿಯವರ ಪರಿಚಯವಿರಲಿಲ್ಲ. ಅವರು ವಾರಕ್ಕೊಮ್ಮೆ ಮೈಸೂರಿನ ತಮ್ಮ ಆಪ್ತಸ್ನೇಹಿತ ಕೆ. ರಾಮದಾಸ್ ಎನ್ನುವವರ ಮನೆಗೆ ಬರುತ್ತಿದ್ದರು. ಹಲವು ಬಾರಿ ನಾನು ಕೂಡ ರಾಮದಾಸ್ ಮನೆಗೆ ಹೋಗಿದ್ದೆ, ಅಲ್ಲಿ ನನಗೆ ತೇಜಸ್ವಿಯವರು ಪರಿಚಯವಾಗಿ ನಮ್ಮ‌ ನಡುವೆ ಆತ್ಮೀಯತೆ ಬೆಳೆಯಿತು'' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಹಿತಿ ತೇಜಸ್ವಿ ಅವರನ್ನು ಸ್ಮರಿಸಿದರು.

ಸಾಹಿತಿ ಪೂರ್ಣಚಂದ್ರ ತೇಜಸ್ವಿರವರ ಜನ್ಮದಿನದ ಪ್ರಯುಕ್ತ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ತೇಜಸ್ವಿ ಜೀವಲೋಕ ಹಾಗೂ ಕುರಿಂಜಿ ಲೋಕ ಸಾಕ್ಷ್ಯಚಿತ್ರ, ಛಾಯಾಚಿತ್ರ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಪಾಲ್ಗೊಂಡಿದ್ದರು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ , ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಮತ್ತಿತ್ತರ ಗಣ್ಯರು ಉಪಸ್ಥಿತರಿದ್ದರು.

ತೇಜಸ್ವಿ ಕೃತಿಗಳಲ್ಲಿ ಪ್ರಕೃತಿಯ ಮಹತ್ವದ ಅನಾವರಣ: ಡಾ.ಕೆ.ಸುಧಾಕರ್ ತೇಜಸ್ವಿ ಕೃತಿಗಳಲ್ಲಿ ಪ್ರಕೃತಿಯ ಮಹತ್ವದ ಅನಾವರಣ: ಡಾ.ಕೆ.ಸುಧಾಕರ್

ಪಶ್ಚಿಮಘಟ್ಟಗಳ ಗಿರಿಕಂದರಗಳಲ್ಲಿ ಪ್ರತಿ 2, 4, 7, 12 ಹಾಗೂ 16 ವರ್ಷಗಳಿಗೊಮ್ಮೆ ಅರಳುವ ಕುರಿಂಜಿ ಹೂಗಳ ಕುರಿತ ಛಾಯಾಚಿತ್ರ-ಸಾಕ್ಷ್ಯಚಿತ್ರಗಳ ಪ್ರದರ್ಶನ ಸೆಪ್ಟೆಂಬರ್ 8 ರಿಂದ 19ರವರೆಗೆ ಬೆಳಗ್ಗೆ 11ರಿಂದ ಸಂಜೆ 7ರವರೆಗೆ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗುತ್ತಿದೆ. ಸಾಹಿತಿ ತೇಜಸ್ವಿ ಅವರ ಜೊತೆಗಿನ ಒಡನಾಟದ ಬಗ್ಗೆ ಸಿದ್ದರಾಮಯ್ಯ ಅವರು ಏನು ಹೇಳಿದರು ತಿಳಿಯಲು ಮುಂದೆ ಓದಿ...

 ನಾನೂ ಮೀನು ಹಿಡಿಯಲು ಹೋಗಿದ್ದೆ

ನಾನೂ ಮೀನು ಹಿಡಿಯಲು ಹೋಗಿದ್ದೆ

''ತೇಜಸ್ವಿಯವರು ಹಲವು ಬಾರಿ ತಮ್ಮ ಫಾರ್ಮ್ ಹೌಸ್‌ಗೆ ಬರುವಂತೆ ನನಗೆ ಆಹ್ವಾನ ನೀಡಿದ್ದರು. ಆದರೆ ಒಮ್ಮೆ ಮಾತ್ರ ಹೋಗಲು ಸಾಧ್ಯವಾಯಿತು. ಒಂದು ಇಡೀ ದಿನ ಅವರ ತೋಟದ ಮನೆಯಲ್ಲಿಯೇ ಮಾತನಾಡುತ್ತಾ ಕಳೆದಿದ್ದೆ,'' ಎಂದು ಸಿದ್ದರಾಮಯ್ಯ ನೆನಪು ಮಾಡಿಕೊಂಡರು.

ತೇಜಸ್ವಿಯವರು ಒಬ್ಬ ಸಾಹಿತಿಯಷ್ಟೇ ಅಲ್ಲ, ಮಹಾನ್ ಪರಿಸರ ಪ್ರೇಮಿ ಜೊತೆಗೆ ಉತ್ತಮ ಛಾಯಾಗ್ರಾಹಕರಾಗಿದ್ದರು. ಅವರಿಗೆ ಮೀನು ಹಿಡಿಯುವ ಹವ್ಯಾಸವಿತ್ತು. ಮೀನು ಸಿಕ್ಕಲಿ, ಸಿಗದಿರಲಿ ಗಂಟೆಗಟ್ಟಲೆ ಕೂತಲ್ಲೇ ಕೂತಿರುತ್ತಿದ್ದರು. ಅವರ ಜೊತೆ ಒಂದೆರಡು ಬಾರಿ ನಾನೂ ಮೀನು ಹಿಡಿಯಲು ಹೋಗಿದ್ದೆ.

 ನಾನು ರಾಜಕಾರಣಕ್ಕೂ ಬರುತ್ತಾ ಇರಲಿಲ್ಲ

ನಾನು ರಾಜಕಾರಣಕ್ಕೂ ಬರುತ್ತಾ ಇರಲಿಲ್ಲ

ಪ್ರಕೃತಿಯನ್ನು ತೇಜಸ್ವಿಯವರಷ್ಟು ಪ್ರೀತಿಸಿದವರನ್ನು ನಾನು ನೋಡಿಯೇ ಇಲ್ಲ. ನಾನೂ ಒಬ್ಬ ಸಸ್ಯಶಾಸ್ತ್ರದ ವಿದ್ಯಾರ್ಥಿ. ಬಾಟನಿ ಯಲ್ಲಿ ಎಂ.ಎಸ್ಸಿ ಸೀಟ್ ಸಿಗದ ಕಾರಣ ಮುಂದೆ ನಾನು ಕಾನೂನು ಪದವಿ ಓದಿ, ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದೆ.

ನನಗೆ ಪ್ರ್ರೊ. ನಂಜುಂಡಸ್ವಾಮಿ ಅವರ ಪರಿಚಯವಾಗದೆ ಇದ್ದಿದ್ದರೆ ಬಹುಶಃ ನಾನು ರಾಜಕಾರಣಕ್ಕೂ ಬರುತ್ತಾ ಇರಲಿಲ್ಲ. ತೇಜಸ್ವಿಯವರು ಕನ್ನಡ ಎಂ.ಎ ಓದಿ ಬರವಣಿಗೆ, ಛಾಯಾಗ್ರಹಣ, ಪರಿಸರದ ಬಗ್ಗೆ ಅರಿಯುವ ಕೆಲಸ ಮಾಡಿದರು.

 ತೇಜಸ್ವಿಯವರು ಸ್ಪೂರ್ತಿಯ ಸೆಲೆ

ತೇಜಸ್ವಿಯವರು ಸ್ಪೂರ್ತಿಯ ಸೆಲೆ

ತೇಜಸ್ವಿಯವರು ಎಂದಿಗೂ ತಾನು ಕುವೆಂಪು ಮಗ ಎಂದು ಹೇಳಿ ಅದರಿಂದ ಲಾಭ ಪಡೆಯುವ ಪ್ರಯತ್ನ ಮಾಡಲೇ ಇಲ್ಲ. ಅವರ ವಿಭಿನ್ನ ಯೋಚನಾಶೈಲಿಯೇ ಅವರ ಹೆಗ್ಗುರುತಾಗಿತ್ತು. ಪ್ರಕೃತಿ, ಪರಿಸರದ ಬಗ್ಗೆ ಹಲವು ಲೇಖನ ಬರೆದಿದ್ದಾರೆ. ಪರಿಸರ ಪ್ರೇಮಿಗಳಿಗೆ ಇಂದಿಗೂ ತೇಜಸ್ವಿಯವರು ಸ್ಪೂರ್ತಿಯ ಸೆಲೆ.

ರಾಜಕಾರಣದ ಬಗ್ಗೆ ತೇಜಸ್ವಿಯವರು ಹೆಚ್ಚು ಚರ್ಚೆ ಮಾಡುತ್ತಿರಲಿಲ್ಲ. ರಾಜಕಾರಣಿಗಳ ಬಗ್ಗೆ ಅವರಿಗೆ ಒಳ್ಳೆಯ ಅಭಿಪ್ರಾಯವೂ ಇರಲಿಲ್ಲ. ಆದರೆ ಅವರಿಗೆ ನನ್ನ ಬಗ್ಗೆ ವೈಯಕ್ತಿಕವಾಗಿ ಪ್ರೀತಿ, ಅಭಿಮಾನವಿತ್ತು.

 ನಾನು ಹಲವು ವಿಚಾರಗಳನ್ನು ಕಲಿತಿದ್ದೇನೆ

ನಾನು ಹಲವು ವಿಚಾರಗಳನ್ನು ಕಲಿತಿದ್ದೇನೆ

ತೇಜಸ್ವಿಯವರಿಂದ ನಾನು ಹಲವು ವಿಚಾರಗಳನ್ನು ಕಲಿತಿದ್ದೇನೆ. ನನ್ನ ಬದುಕು ರೂಪುಗೊಳ್ಳಲು ಅವರ ಒಡನಾಟ ಸಾಕಷ್ಟು ಸಹಕಾರಿಯಾಗಿದೆ. ಹಾಗಾಗಿ ಅವರನ್ನು ಈ ಒಂದು ದಿನ ಮಾತ್ರವಲ್ಲ ನಿತ್ಯವೂ ನೆನೆಯುತ್ತೇನೆ.

ಪ್ರತೀ ಸೋಮವಾರ ಸಂಜೆ 5 ರಿಂದ 8 ಗಂಟೆ ವರೆಗೆ ತೇಜಸ್ವಿಯವರು, ರಾಮದಾಸ್ ಸೇರಿದಂತೆ ನಾವೆಲ್ಲ ಮೈಸೂರಿನ ಹೊಟೇಲ್ ಒಂದರಲ್ಲಿ ಸೇರುತ್ತಿದ್ದೆವು. ಆಗ ಬರೀ ರಾಜಕೀಯ ವಿಚಾರಗಳಷ್ಟೇ ಅಲ್ಲ ಬದುಕಿಗೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು.

 ಬದುಕು, ಬರಹ, ಜೀವನ ನಮಗೆ ಪ್ರೇರಣೆಯಾಗಲಿ

ಬದುಕು, ಬರಹ, ಜೀವನ ನಮಗೆ ಪ್ರೇರಣೆಯಾಗಲಿ

ಎಲ್ಲರೂ ತೇಜಸ್ವಿಯವರಾಗಲು ಸಾಧ್ಯವಿಲ್ಲದಿದ್ದರೂ ಕನಿಷ್ಟ ಪರಿಸರವನ್ನಾದರೂ ಪ್ರೀತಿಸಬಹುದು. ನಮ್ಮ ಸುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡುವ ಮೂಲಕ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು. ಪರಿಸರ ರಕ್ಷಣೆಗೆ ತೇಜಸ್ವಿಯವರ ಬದುಕು, ಬರಹ, ಜೀವನ ನಮಗೆ ಪ್ರೇರಣೆಯಾಗಲಿ.

ತೇಜಸ್ವಿಯವರ ಜನ್ಮದಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮುದ್ರಣವಾದ ನಂತರ ಅತಿಥಿಗಳ ಪಟ್ಟಿಯಲ್ಲಿ ನನ್ನ ಹೆಸರಿದೆ ಎಂಬ ವಿಚಾರ ನನಗೆ ಗೊತ್ತಾಗಿದ್ದು. ತೇಜಸ್ವಿಯವರನ್ನು ನೆನಪು ಮಾಡಿಕೊಳ್ಳುವ ಇಂಥದ್ದೊಂದು ಸುವರ್ಣಾವಕಾಶ ಕಲ್ಪಿಸಿಕೊಟ್ಟಿದ್ದಕ್ಕಾಗಿ ಬಿ.ಎಲ್ ಶಂಕರ್ ಅವರಿಗೆ ಹಾಗೂ ಕಾರ್ಯಕ್ರಮದ ಆಯೋಜಕರಿಗೆ ಧನ್ಯವಾದಗಳು ಎಂದರು.

 ತೇಜಸ್ವಿ ಜೀವಲೋಕ ಛಾಯಾಚಿತ್ರ-ಸಾಕ್ಷ್ಯಚಿತ್ರ ಪ್ರದರ್ಶನ

ತೇಜಸ್ವಿ ಜೀವಲೋಕ ಛಾಯಾಚಿತ್ರ-ಸಾಕ್ಷ್ಯಚಿತ್ರ ಪ್ರದರ್ಶನ

ಪರಿಸರ -ನಿಸರ್ಗ ಸಂರಕ್ಷಣಾ ಸಂಸ್ಥೆ, ಕರ್ನಾಟಕ ಚಿತ್ರಕಲಾ ಪರಿಷತ್, ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಸಹಯೋಗದೊಂದಿಗೆ ಸೆ.8ರಂದು ತೇಜಸ್ವಿ ಜೀವಲೋಕ ಹೆಸರಿನ ಛಾಯಾಚಿತ್ರ-ಸಾಕ್ಷ್ಯಚಿತ್ರ ಪ್ರದರ್ಶನಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮವನ್ನು 2013ರಿಂದ ನಡೆಸಲಾಗುತ್ತಿದೆ. ಈ ಹಿಂದೆ ಹಕ್ಕಿ ಲೋಕ, ಕೀಟ ಲೋಕ, ಪುಷ್ಪ ಲೋಕ, ಪರಾಗಸ್ಪರ್ಶಿಗಳು, ಜೇಡ ಲೋಕ, ಬಾವಲಿಗಳ ನಿಗೂಢಲೋಕ, ಗೂಬೆಗಳ ಮುಗ್ಧಲೋಕ ಹಾಗೂ 2020ರಲ್ಲಿ ಹದ್ದುಗಳ ಅದ್ಭುತ ಲೋಕಗಳನ್ನು ಆಯೋಜಿಸಲಾಗಿತ್ತು.

   Cricket ಲೋಕದಲ್ಲಿ ವಿಚ್ಚೇದನ ಪಡೆದ ತಾರೆಗಳು ಇವರೇ | Oneindia Kannada
   English summary
   Former CM Siddaramaiah attended Tejaswi Kurinji Loka Event at Chitrakala Parishat today and remembered his interaction with Writer KP Poornachandra Tejaswi.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X