ಸಚಿವರಿಗಾಗಿ ದೇವರು ಕಾಯಬೇಕಿಲ್ಲ; VIP ದರ್ಶನ ಪದ್ಧತಿಗೆ ಮುದ್ರಾಸ್ ಹೈಕೋರ್ಟ್ ಗರಂ, ತಮಿಳುನಾಡು ಸರ್ಕಾರಕ್ಕೆ ಪ್ರಶ್ನೆ
ಚೆನ್ನೈ: ದೇವರು ಎಲ್ಲರಿಗೋ ಒಂದೇ, ದೇವರಿಗೂ ಎಲ್ಲ ಭಕ್ತರು ಸಮಾನರೇ..ಎಂಬ ಮಾತನ್ನು ನಾವೆಲ್ಲರೂ ಒಪ್ಪಿದರೂ ಸಹಿತ ಪ್ರಮುಖ ದೇವಾಲಯಗಳಿಗೆ ಹೋದಾಗ ವಿಐಪಿ ದರ್ಶನ, ವಿಶೇಷ ವಿಐಪಿ ದರ್ಶನದ ಮತ್ತೊಂದು ಸಾಲು ಇರುತ್ತದೆ. ವಿಐಪಿಗಳ ದರ್ಶನ ಮುಗಿಯುವವರೆಗೆ ಜನಸಾಮಾನ್ಯರು ಸಾಕಷ್ಟು ಸಮಯ ಕಾಯಬೇಕಾಗುತ್ತದೆ. ಇದೀಗ ಈ ಪದ್ಧತಿಗೆ ಮದ್ರಾಸ್ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. 'ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರೇ' ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಪೀಠ ಅರ್ಜಿಯೊಂದರ ವಿಚಾರಣೆ ವೇಳೆ ಮಹತ್ವದ ಪ್ರಶ್ನೆಗಳನ್ನು ಎತ್ತಿದೆ.
ತಮಿಳುನಾಡು ರಾಜ್ಯದ ದೇವಸ್ಥಾನಗಳಲ್ಲಿ ವಿಐಪಿ ದರ್ಶನಕ್ಕೆ ಕುರಿತಂತೆ ಹಾಲಿ ಇರುವ ಪದ್ಧತಿಗೆ ಕೋರ್ಟ್ ಆಕ್ಷೇಪಿಸಿದೆ. ಸಚಿವರು ಮತ್ತು ಗಣ್ಯರಿಗಾಗಿ ದೇವರನ್ನು ಕಾಯಿಸಬಾರದು. ದೇವಾಲಯದ ಆಚರಣೆಗಳಲ್ಲಿ ವಿಐಪಿಗಳ ದರ್ಶನಕ್ಕಾಗಿ ಪ್ರತ್ಯೇಕ ಸಮಯವನ್ನು ನಿಗದಿ ಮಾಡಕೂಡದು. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ನ್ಯಾಯಾಲಯ ಒತ್ತಿ ಹೇಳಿದೆ. ಸಾಮಾನ್ಯ ಭಕ್ತರನ್ನು ನಿರ್ಲಕ್ಷಿಸಿ ವಿಐಪಿಗಳಿಗೆ ಮಾತ್ರ ವಿಶೇಷ ಸೌಲಭ್ಯಗಳನ್ನು ನೀಡುವುದು ಸ್ವೀಕಾರಾರ್ಹವಲ್ಲ.

ವಿಐಪಿಗಳ ಆಗಮನದಿಂದ ದೇವಾಲಯದಲ್ಲಿ ನಡೆಯುವ ಪೂಜೆಗಳು ಮತ್ತು ಬಾಗಿಲು ಮುಚ್ಚುವ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ವಿಐಪಿಗಳಿಗೆ ಪ್ರತ್ಯೇಕ ಸಮಯ ನಿಗದಿಪಡಿಸುವ ಮೂಲಕ ಸಾರ್ವಜನಿಕರಿಗೆ ಅನನುಕೂಲ ಮಾಡುವುದು, ಅವರ ದರ್ಶನ ಮುಗಿಯುವವರೆಗೂ ಜನಸಾಮಾನ್ಯರು ದರ್ಶನಕ್ಕಾಗಿ ಕಾಯುವುದು ಸರಿಯಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ವಿಶೇಷ ದರ್ಶನ ಪದ್ಧತಿ ರದ್ದತಿಗೆ ಮನವಿ
ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ (ಎಚ್‌ಆರ್ ಮತ್ತು ಸಿಇ) ನಿಯಂತ್ರಣದಲ್ಲಿರುವ ದೇವಾಲಯಗಳಲ್ಲಿನ ವಿಶೇಷ ಶುಲ್ಕ ದರ್ಶನ ಪದ್ಧತಿ ರದ್ದುಗೊಳಿಸುವಂತೆ ಕೋರಿ ವಿಶ್ವ ಹಿಂದೂ ಪರಿಷತ್‌ನ ಉತ್ತರ ತಮಿಳುನಾಡು ವಿಭಾಗದ ಅಧ್ಯಕ್ಷರಾದ ಪಿ. ಸೊಕ್ಕಲಿಂಗಂ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು. ವೃದ್ಧರು, ಅಂಗವಿಕರು ಮತ್ತು ಗರ್ಭಿಣಿಯರನ್ನು ಹೊರತುಪಡಿಸಿ ಉಳಿದ ವಿಶೇಷ ದರ್ಶನ ಪದ್ಧತಿ ರದ್ದತಿಗೆ ಕೋರಲಾಗಿತ್ತು. ಈ ಅರ್ಜಿರ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ವಿ. ಲಕ್ಷ್ಮೀ ನಾರಾಯಣನ್ ಅವರಿದ್ದ ವಿಭಾಗೀಯ ನ್ಯಾಯಪೀಠವು, "ದೇವರ ಮುಂದೆ ಎಲ್ಲರೂ ಸಮಾನರು ಎಂದ ಮೇಲೆ ವಿಐಪಿ ದರ್ಶನ ಏಕೆ?" ಎಂದು ಕಟುವಾಗಿ ಪ್ರಶ್ನಿಸಿತು. ಹೆಚ್ಚಿನ ಹಣಕ್ಕೆ ವಿಶೇಷ ದರ್ಶನ ಒದಗಿಸುವುದು ಆರ್ಟಿಕಲ್ 14ರಡಿ ಸಮಾನತೆ ಹಕ್ಕಿನ ಉಲ್ಲಂಘನೆ ಆಗುತ್ತದೆ ಎಂದು ತಿಳಿಸಿತು.
ಸಚಿವರಿಗಾಗಿ ಸಮಯ ಮೀರಿದರೂ ದೇವಸ್ಥಾನ ಓಪನ್
ತಿರುಪ್ಪರಂಕುಂದ್ರಂ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ನಡೆದ ಘಟನೆ ಉಲ್ಲೇಖಿಸಿದ ನ್ಯಾಯಾಲಯ, ಮೇ 15 ರಂದು ತಮಿಳುನಾಡಿನ ಸಚಿವ ಸಿಟಿಆರ್ ನಿರ್ಮಲ್ ಕುಮಾರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಸಾಮಾನ್ಯವಾಗಿ ದೇಗುಲದ ಬಾಗಿಲು ಮಧ್ಯಾಹ್ನ 12:45ಕ್ಕೆ ಮುಚ್ಚಲಾಗುತ್ತಿತ್ತು. ಸಚಿವರ ದರ್ಶನಕ್ಕಾಗಿ ಅದನ್ನು ತೆರೆದಿಡಲಾಗಿತ್ತು. ಸಚಿವರ ದರ್ಶನಾನಂತರವೇ ದೇಗುಲವನ್ನು ಮುಚ್ಚಲಾಯಿತು. ಅಲ್ಲದೆ, ಸಚಿವರು ಗರ್ಭಗುಡಿಯಲ್ಲಿ ದರ್ಶನ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು.
ಶಾಸಕರು, ಸಚಿವರಿಗೆ ದೇವರು ಕಾಯಬೇಕಿಲ್ಲ
ದೇವಾಲಯಗಳಲ್ಲಿನ ವಿಶೇಷ ಶುಲ್ಕ ದರ್ಶನ ಪದ್ಧತಿಯನ್ನು ಈ ಹಿಂದೆ ಪ್ರಶ್ನಿಸಲಾಗಿತ್ತು. ಈ ಬಗ್ಗೆ ವರದಿ ಸಲ್ಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಕೋರ್ಟ್ ಆದೇಶಿಸಿತ್ತು. ಮುಂದೆ ಪ್ರಕರಣ ವಿಚಾರಣೆ ವೇಳೆ ಸರ್ಕಾರಿ ವಕೀಲರು ಎಚ್‌ಆರ್ ಆಂಡ್ ಸಿಇ ಕಾರ್ಯದರ್ಶಿಗಳ ವರದಿ ಸಲ್ಲಿಸುವಂತೆ ತಿಳಿಸಲಾಗಿತ್ತು. ಅದರಂತೆ ವಕೀಲರು ವರದಿ ಸಲ್ಲಿಸಿದರು. ವರದಿ ಸ್ವೀಕರಿಸಿದ ನ್ಯಾಯಾಧೀಶರು, ಯಾರನ್ನೂ ಇರಿಸುಮುರಿಸಿಗೆ ಒಳಪಡಿಸುವುದಿಲ್ಲ ಎಂದು ಹೇಳಿ, ಶಾಸಕರು ಹಾಗೂ ಸಚಿವರಿಗಾಗಿ ದೇವರು ಕಾಯಬೇಕಾಗಿಲ್ಲ ಎಂದು ಸಲಹೆ ನೀಡಿದರು.
ಪಿಐಎಲ್ ವಿಚಾರಣೆ ಮುಂದುವರಿಸಿ ಮಾತನಾಡಿದ ನ್ಯಾಯಾಧೀಶರು, ಹಣ ನೀಡಿದರೆ ದೇವರನ್ನು ತಬ್ಬಿಕೊಳ್ಳಲು ಸಾಧ್ಯವೇ? ಎಂದು ಕೇಳಿದರು. ತಮಿಳುನಾಡಿನ ದೇವಾಲಯಗಳಲ್ಲಿ ವಿಐಪಿ ದರ್ಶನಕ್ಕಾಗಿ ಏಕೆ ಪ್ರತ್ಯೇಕ ಸಮಯವನ್ನು ನಿಗದಿಪಡಿಸಬಾರದು ಎಂದು ತಮಿಳುನಾಡು ಸರ್ಕಾರಕ್ಕೆ ಉತ್ತರಿಸಲು ಸೂಚಿಸಿತು. ಆರು ವಾರಗಳ ಬಳಿಕ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿ ಮುಂದೂಡಿತು.













Click it and Unblock the Notifications