Adidas ಟೆಕ್ ಹಬ್‌ನಲ್ಲಿ ಉದ್ಯೋಗ ಕಡಿತ: 'ಅವರು ಕೇವಲ ಉದ್ಯೋಗಿಗಳಲ್ಲ, ಮನುಷ್ಯರು' ಎಂದ ಮಾಜಿ ಉದ್ಯೋಗಿ
ಸ್ಪೋಟ್ಸ್ ಡ್ರೆಸ್ ಮತ್ತು ಪರಿಕರಗಳ ದೈತ್ಯ ಕಂಪನಿಯಾಗಿರುವ ಅಡಿಡಾಸ್, ತನ್ನ ಗುರ್‌ಗಾಂವ್ ಟೆಕ್ ಹಬ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡಿದೆ ಎಂಬ ವರದಿಗಳು ಹೊರಬಿದ್ದಿವೆ. ಈ ಪ್ರಕ್ರಿಯೆಯಲ್ಲಿ ಸುಮಾರು 300 ರಿಂದ 350 ಉದ್ಯೋಗಿಗಳು ತಮ್ಮ ಕೆಲಸವನ್ನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ಬೆಳವಣಿಗೆಯ ಬಗ್ಗೆ ಕಂಪನಿಯ ಮಾಜಿ ಉದ್ಯೋಗಿಯೊಬ್ಬರು ತೀವ್ರ ಕಳವಳ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ.
ಅಡಿಡಾಸ್ ಸಂಸ್ಥೆಯಲ್ಲಿ ಈ ಹಿಂದೆ ಸೊಲ್ಯೂಷನ್ ಆರ್ಕಿಟೆಕ್ಟ್ ಆಗಿ ಕೆಲಸ ಮಾಡಿದ್ದ ರಿಷಬ್ ಗುಪ್ತಾ ಅವರು ವೃತ್ತಿಪರ ಜಾಲತಾಣ ಲಿಂಕ್ಡ್‌ಇನ್‌ನಲ್ಲಿ ಸುದೀರ್ಘ ಪೋಸ್ಟ್ ಒಂದನ್ನ ಹಂಚಿಕೊಂಡಿದ್ದಾರೆ. ಸುಮಾರು ಎರಡು ವರ್ಷಗಳ ಹಿಂದೆ ಅಡಿಡಾಸ್ ಕಂಪನಿಯನ್ನ ತೊರೆದಿದ್ದ ಅವರು, ಅಲ್ಲಿನ ಕೆಲಸದ ವಾತಾವರಣ ಮತ್ತು ತಮ್ಮ ಹಳೆಯ ನೆನಪುಗಳನ್ನ ಮೆಲುಕು ಹಾಕುತ್ತಾ, ಪ್ರಸ್ತುತ ನಡೆಯುತ್ತಿರುವ ಉದ್ಯೋಗ ಕಡಿತದ ಬಗ್ಗೆ ಮಾತನಾಡಿದ್ದಾರೆ.

ಗ್ಲೋಬಲ್ ಬ್ರಾಂಡ್ ಒಂದಕ್ಕೆ ಸಿಸ್ಟಮ್‌ಗಳನ್ನ ನಿರ್ಮಿಸಿದ, ಆರ್ಕಿಟೆಕ್ಚರಲ್ ನಿರ್ಧಾರಗಳನ್ನ ತೆಗೆದುಕೊಂಡ ತಂಡಗಳೊಂದಿಗೆ ಕೆಲಸ ಮಾಡಿದ ದಿನಗಳನ್ನ ಅವರು ಸ್ಮರಿಸಿದ್ದಾರೆ.
ವರದಿಗಳ ಪ್ರಕಾರ 300 ರಿಂದ 350 ಜನರ ಉದ್ಯೋಗ ಕಡಿತವಾಗುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, "ಅವು 300 ರಿಂದ 350 ಕೇವಲ ಉದ್ಯೋಗದ ಪಾತ್ರಗಳಲ್ಲ (Roles), ಅವರೆಲ್ಲರೂ ಮನುಷ್ಯರು," ಎಂದು ಹೇಳಿದ್ದಾರೆ.
ಕಾರ್ಪೊರೇಟ್ ವಲಯದಲ್ಲಿ ಉದ್ಯೋಗ ಕಡಿತವನ್ನ ಕೇವಲ ಸಂಖ್ಯೆಗಳ ಲೆಕ್ಕದಲ್ಲಿ ನೋಡಲಾಗುತ್ತದೆ, ಆದರೆ ಅದರ ಹಿಂದಿನ ಕಷ್ಟಗಳು ಯಾರಿಗೂ ಅರ್ಥವಾಗುವುದಿಲ್ಲ ಎಂಬುದನ್ನು ಅವರು ಎತ್ತಿ ತೋರಿಸಿದ್ದಾರೆ.
ಐಟಿ ವಲಯದ ಉದ್ಯೋಗ ಕಡಿತದ ಪರಿಣಾಮಗಳೇನು?
ಉದ್ಯೋಗ ಕಳೆದುಕೊಳ್ಳುವುದು ಎಂದರೆ ಕೇವಲ ಒಂದು ಹುದ್ದೆಯನ್ನ ಕಳೆದುಕೊಳ್ಳುವುದಲ್ಲ, ಬದಲಿಗೆ ಇದು ಇಡೀ ಜೀವನದ ಮೇಲೆ ಬೀರುವ ದೊಡ್ಡ ಆರ್ಥಿಕ ಹೊಡೆತವಾಗಿದೆ. ರಿಷಬ್ ಗುಪ್ತಾ ಅವರು ತಮ್ಮ ಪೋಸ್ಟ್‌ನಲ್ಲಿ ಉದ್ಯೋಗಿಗಳ ಆರ್ಥಿಕ ಸಂಕಷ್ಟಗಳ ಬಗ್ಗೆಯೂ ಹೇಳಿದ್ದಾರೆ.
"ಕೆಲಸ ಕಳೆದುಕೊಂಡ ಪ್ರತಿಯೊಬ್ಬರಿಗೂ ತಮ್ಮದೇ ಆದ ಜವಾಬ್ದಾರಿಗಳಿರುತ್ತವೆ. ಮನೆ ಬಾಡಿಗೆ, ಇಎಂಐ, ಹಾಗೂ ಮುಂದಿನ ತಿಂಗಳುಗಳಿಗಾಗಿ ಮಾಡಿಕೊಂಡಿದ್ದ ಹಲವು ಯೋಜನೆಗಳಿರುತ್ತವೆ. ಇದ್ದಕ್ಕಿದ್ದಂತೆ ಕೆಲಸ ಹೋದಾಗ, 'ನಾನೀಗ ಮುಂದೇನು ಮಾಡಬೇಕು?' ಎಂಬ ಭವಿಷ್ಯದ ಅನಿಶ್ಚಿತತೆ ಅವರನ್ನು ಕಾಡತೊಡಗುತ್ತದೆ," ಎಂದು ಅವರು ವಿವರಿಸಿದ್ದಾರೆ.
ನಿಮ್ಮ ಸಾಮರ್ಥ್ಯವನ್ನು ಕಡೆಗಣಿಸಬೇಡಿ
ತಮ್ಮ ಮಾಜಿ ಸಹೋದ್ಯೋಗಿಗಳಿಗೆ ಹಾಗೂ ಉದ್ಯೋಗ ಕಳೆದುಕೊಂಡ ಎಲ್ಲರಿಗೂ ಧೈರ್ಯ ತುಂಬಿರುವ ರಿಷಬ್, ಕಷ್ಟದ ಸಮಯದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ. "ಒಂದು ಕಂಪನಿ ನಿಮ್ಮಿಂದ ನಿಮ್ಮ ಹುದ್ದೆಯನ್ನ ಮಾತ್ರ ಕಿತ್ತುಕೊಳ್ಳಬಹುದು. ಆದರೆ ಆ ಕೆಲಸವನ್ನ ಮಾಡುವಾಗ ನೀವು ಗಳಿಸಿದ ಅನುಭವ, ಕೌಶಲ್ಯ ಮತ್ತು ನಿಮ್ಮ ಮೌಲ್ಯವನ್ನ ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ," ಎಂದು ಅವರು ಸ್ಫೂರ್ತಿದಾಯಕ ಮಾತುಗಳನ್ನಾಡಿದ್ದಾರೆ.
ಮುಂದಿನ ಅವಕಾಶಗಳು ಹಿಂದಿನ ಕೆಲಸದಂತೆಯೇ ಇರಬೇಕೆಂದಿಲ್ಲ, ಹಾಗಾಗಿ ನಿಮ್ಮ ಸಾಮರ್ಥ್ಯವನ್ನ ಎಂದಿಗೂ ಕಡಿಮೆ ಅಂದಾಜು ಮಾಡಬೇಡಿ ಎಂದು ಅವರು ಹೇಳಿದ್ದಾರೆ.
ಕೇವಲ ಸಾಂತ್ವನ ಹೇಳುವುದಷ್ಟೇ ಅಲ್ಲದೆ, ಪ್ರಾಯೋಗಿಕವಾಗಿಯೂ ಸಹಾಯ ಮಾಡಲು ರಿಷಬ್ ಮುಂದಾಗಿದ್ದಾರೆ. ಕೆಲಸ ಕಳೆದುಕೊಂಡವರಿಗೆ ಹೊಸ ಕಂಪನಿಗಳಿಗೆ ಪರಿಚಯಿಸುವುದು, ರೆಫರಲ್‌ಗಳನ್ನು ನೀಡುವುದು, ಸಿವಿ ಪರಿಶೀಲನೆ ಮಾಡುವುದು ಅಥವಾ ಕೇವಲ ಮಾತನಾಡಲು ಒಂದು ಅವಕಾಶ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.
ಅವರ ಈ ಪೋಸ್ಟ್‌ಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ಮತ್ತು ಬೆಂಬಲ ವ್ಯಕ್ತವಾಗಿದೆ. ಕಷ್ಟದ ಸಮಯದಲ್ಲಿ ಸಹೋದ್ಯೋಗಿಗಳಿಗೆ ಬೆಂಬಲವಾಗಿ ನಿಂತ ರಿಷಬ್ ಅವರ ಈ ನಡೆಗೆ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದು, ಉದ್ಯೋಗ ಕಳೆದುಕೊಂಡ ಅಡಿಡಾಸ್ ಗುರ್‌ಗಾಂವ್‌ನ ಸಿಬ್ಬಂದಿಗೆ ಶೀಘ್ರದಲ್ಲೇ ಉತ್ತಮ ಅವಕಾಶಗಳು ಸಿಗಲಿ ಎಂದು ಹಾರೈಸಿದ್ದಾರೆ.


Click it and Unblock the Notifications
