ಗೌರಿ-ಕಲ್ಬುರ್ಗಿ ಹತ್ಯೆಗೆ ಒಂದೇ ಪಿಸ್ತೂಲು ಬಳಕೆ, ಎಸ್ ಐಟಿಯಿಂದ ಖಾತ್ರಿ
ಬೆಂಗಳೂರು, ಜೂನ್ 8 : ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಚಿಂತಕ ಎಂ.ಎಂ.ಕಲ್ಬುರ್ಗಿ ಇಬ್ಬರೂ ಹತ್ಯೆಯಾಗಿದ್ದು ಒಂದೇ ಪಿಸ್ತೂಲಿನಿಂದ ಎಂಬುದನ್ನು ಕರ್ನಾಟಕ ವಿಧಿವಿಜ್ಞಾನ ಪ್ರಯೋಗಾಲಯ ಖಾತ್ರಿ ಪಡಿಸಿದೆ ಎಂದು ವಿಶೇಷ ತನಿಖಾ ದಳದ ಮೂಲಗಳು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿವೆ. ಎರಡೂ ಕೊಲೆಗಳ ಮಧ್ಯೆ ನಂಟಿದೆ ಎಂದು ಮೊದಲ ಬಾರಿಗೆ ಅಧಿಕೃತವಾಗಿ ಖಾತ್ರಿ ಪಟ್ಟಿದೆ.
ಎಪ್ಪತ್ತೇಳು ವರ್ಷದ ಕಲ್ಬುರ್ಗಿ ಧಾರವಾಡದ ಅವರ ಮನೆಯ ಬಳಿಯೇ ಮೂರು ವರ್ಷದ ಹಿಂದೆ ಹತ್ಯೆಯಾಗಿದ್ದರು. ಗೌರಿ ಲಂಕೇಶ್ ರ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯ ಬಳಿ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಕೊಲೆ ಮಾಡಲಾಗಿತ್ತು.
ಎರಡೂ ಪ್ರಕರಣದಲ್ಲಿ ಗುಂಡು ಹಾರಿಸಿರುವುದು ಒಂದೇ ಮಾದರಿ ನಾಡ ಪಿಸ್ತೂಲಿನಿಂದ ಎಂದು ವರದಿಗಳು ಹೇಳಿವೆ. ಈ ಬಗ್ಗೆ ಹಿಂದೆಯೇ ಚರ್ಚೆ ಆಗಿತ್ತು. ಆದರೆ ಮೊದಲ ಬಾರಿಗೆ ವಿಶೇಷ ತನಿಖಾ ದಳದ ಅಧಿಕಾರಿಗಳು ಅಧಿಕೃತವಾಗಿ ಖಾತ್ರಿ ಪಡಿಸಿದ್ದಾರೆ.

ಮದ್ದೂರಿನ ಕೆ.ಟಿ.ನವೀನ್ ಕುಮಾರ್ ನನ್ನು ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಮಾಡಲಾಗಿದೆ. ಚಿಂತಕ ಪ್ರೊ.ಕೆ.ಎಸ್.ಭಗವಾನ್ ಹತ್ಯೆಗೆ ಕೂಡ ಸಂಚು ಮಾಡಲಾಗಿತ್ತು ಎಂಬುದನ್ನು ಆತ ಒಪ್ಪಿಕೊಂಡಿದ್ದಾನೆ.
ಇನ್ನು ಇದೀಗ ಸೆರೆ ಹಿಡಿದಿರುವ ಇತರ ಆರೋಪಿಗಳು ಹಾಗೂ ಸನಾತನ ಸಂಸ್ಥೆ ಜತೆಗೆ ನಂಟು ಇರುವ ಬಗ್ಗೆ ಚರ್ಚೆ ಆಗುತ್ತಿದೆ. ಆ ಸಂಸ್ಥೆಯನ್ನು ನಿಷೇಧಿಸಬೇಕು ಹಾಗೂ ಸನಾತನ ಸಂಸ್ಥೆಯ ಕಾರ್ಯಕ್ರಮಗಳನ್ನು ನಡೆಸಲು ಸ್ಥಳಾವಕಾಶ ನೀಡುತ್ತಿರುವ ಪ್ರಮುಖ ಸಮುದಾಯದ ಮಠಗಳು ಇನ್ನಾದರೂ ಅಂಥದ್ದಕ್ಕೆ ಅವಕಾಶ ನೀಡಬಾರದು ಎಂದು ಪ್ರಗತಿಪರ ಚಿಂತಕರು ಆಗ್ರಹಿಸಿದ್ದಾರೆ.












Click it and Unblock the Notifications