ಅಕೌಂಟ್‌ನಲ್ಲಿ 20-30 ಲಕ್ಷ ರೂ. ಇದ್ದರೆ ಟೆನ್ಷನ್ ಇರಲ್ಲ, ನೆಮ್ಮದಿ ಸಿಗುತ್ತೆ: ಬೆಂಗಳೂರು ಮಹಿಳಾ ಉದ್ಯಮಿ ಮಾತು ವೈರಲ್
ಮನುಷ್ಯನ ಬಳಿ ಹಣವಿದ್ದರೆ ಎಲ್ಲವನ್ನೂ ಕೊಂಡುಕೊಳ್ಳಲು ಸಾಧ್ಯವಿಲ್ಲ ಎನ್ನುವ ಒಂದು ಮಾತು ನಾವು ನೀವೆಲ್ಲ ಸಾಮಾನ್ಯವಾಗಿ ಕೇಳಿರುತ್ತೇವೆ ಅಲ್ಲವೇ?. ಆದರೆ, ಅದೇ ರೀತಿ ಇಂದಿನ ದುಬಾರಿ ದುನಿಯಾದಲ್ಲಿ ಹಣವಿಲ್ಲದೆ ನೆಮ್ಮದಿಯಾಗಿ ಬದುಕುವುದೂ ಕೂಡ ಅಸಾಧ್ಯ. ಪ್ರಸ್ತುತ ದಿನಗಳಲ್ಲಿ ಯುವಜನತೆ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ಎಂದರೆ ಅದು ಮಾನಸಿಕ ಒತ್ತಡ. ಈ ಒತ್ತಡವನ್ನು ನಿವಾರಿಸಲು ಆರ್ಥಿಕ ಭದ್ರತೆಯೊಂದೇ ಅತ್ಯುತ್ತಮ ಮದ್ದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಬ್ಯಾಂಕ್ ಖಾತೆಯಲ್ಲಿ ಕನಿಷ್ಠ 20-30 ಲಕ್ಷ ರೂಪಾಯಿ ಉಳಿತಾಯವಿದ್ದರೆ ನಿಮ್ಮ ನರಮಂಡಲಗಳೆಲ್ಲ ಶಾಂತವಾಗಿರುತ್ತದೆ ಮತ್ತು ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಬೆಂಗಳೂರು ಮೂಲದ ಉದ್ಯಮಿಯೊಬ್ಬರು ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ದಿ ಸ್ಪೀಕ್ ಫೆಸ್ಟ್ ಸಂಸ್ಥಾಪಕಿ ಸಿಮೃದ್ಧಿ ಮಖಿಜಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತು ವಿಡಿಯೋ ಹಂಚಿಕೊಂಡಿದ್ದು, ಆರ್ಥಿಕ ಭದ್ರತೆ, ಕ್ಯಾಶ್ ಫ್ಲೋ ಮತ್ತು ದೊಡ್ಡ ಪ್ರಮಾಣದ ಹಣದ ಉಳಿತಾಯ ನಮ್ಮ ಮಾನಸಿಕ ಶಾಂತಿಯ ಅಡಿಪಾಯವಾಗಿದೆ ಎಂದು ಹೇಳಿದ್ದಾರೆ.
20-30 ಲಕ್ಷ ರೂ. ಉಳಿತಾಯದ ಮಹತ್ವ
ಹಣ ಕೇವಲ ಆಡಂಬರದ ಖರ್ಚುಗಳಿಗಾಗಿ ಅಲ್ಲ ಎಂಬುದನ್ನ ಸಿಮೃದ್ಧಿ ಸ್ಪಷ್ಟಪಡಿಸಿದ್ದಾರೆ. "ನಿಮ್ಮ ಬಳಿ ಹಣವಿರಬೇಕು ಎಂದರೆ, ಪ್ರತಿ ವಾರಾಂತ್ಯದಲ್ಲಿ ದುಬಾರಿ ರೆಸ್ಟೋರೆಂಟ್‌ಗಳಿಗೆ ಹೋಗಲು, ಬೇಕಾದದ್ದನ್ನ ಶಾಪಿಂಗ್ ಮಾಡಲೋ ಅಥವಾ ಪಬ್‌ಗಳಿಗೆ ಹೋಗಲು ಅಲ್ಲ. ಬದಲಾಗಿ, ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ 20 ರಿಂದ 30 ಲಕ್ಷ ರೂಪಾಯಿ ಉಳಿತಾಯವಿದ್ದರೆ, ನಾಳೆ ಏನಾಗುತ್ತದೆಯೋ ಎಂಬ ಆತಂಕ ನಿಮ್ಮಲ್ಲಿ ಇರುವುದಿಲ್ಲ. ಇದ್ದಕ್ಕಿದ್ದಂತೆ ಕೆಲಸ ಹೋದರೂ, ಪೋಷಕರಿಗೆ ಹಣದ ಅಗತ್ಯವಿದ್ದರೂ ಅಥವಾ ಯಾವುದೇ ಆರೋಗ್ಯದ ತುರ್ತು ಪರಿಸ್ಥಿತಿ ಎದುರಾದರೂ ನಿಮ್ಮ ಬಳಿ ಇರುವ 20-30 ಲಕ್ಷ ರೂಪಾಯಿ ನಿಮ್ಮನ್ನು ರಕ್ಷಿಸುತ್ತದೆ. ಆ ಭದ್ರತೆಯೇ ನಿಮಗೆ ನೆಮ್ಮದಿ ನೀಡುತ್ತದೆ" ಎಂದು ಅವರು ವಿವರಿಸಿದ್ದಾರೆ.
ಸಾಮಾನ್ಯವಾಗಿ ಮಾನಸಿಕವಾಗಿ ಕುಗ್ಗಿದಾಗ ಅಥವಾ ಒತ್ತಡ ಹೆಚ್ಚಾದಾಗ 'ನರಮಂಡಲವನ್ನು ಶಾಂತಗೊಳಿಸಿ'ಎಂದು ಹೇಳಲಾಗುತ್ತದೆ. ಇದು ವೈದ್ಯಕೀಯ ಪದಕ್ಕಿಂತ ಹೆಚ್ಚಾಗಿ ಸ್ವಾಸ್ಥ್ಯ ಅಂದರೆ ವೆಲ್‌ನೆಸ್ ಸೂಚಿಸುವ ಪದವಾಗಿದೆ. ಮನುಷ್ಯ ಅತಿಯಾದ ಒತ್ತಡಕ್ಕೆ ಒಳಗಾದಾಗ ಆತನ ನರಮಂಡಲ ಅಸ್ಥಿರವಾಗುತ್ತದೆ.
ಸಿಮೃದ್ಧಿ ಅವರ ಪ್ರಕಾರ, ಮಾನಸಿಕ ನೆಮ್ಮದಿ ಮತ್ತು ಹಣದ ನಡುವೆ ನೇರ ಸಂಬಂಧವಿದೆ. "ನಿರಂತರವಾಗಿ ಹಣದ ಹರಿವು ಇದ್ದರೆ ಮಾತ್ರ ನಿಮ್ಮ ನರಮಂಡಲ ಶಾಂತವಾಗುತ್ತದೆ. ಕೇವಲ ಥೆರಪಿ ಮಾಡಿಸಿಕೊಳ್ಳುವುದು, ಪುಸ್ತಕ ಓದುವುದು ಅಥವಾ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದರಿಂದ ನಿಮ್ಮನ್ನ ನೀವು ತಾತ್ಕಾಲಿಕವಾಗಿ ಶಾಂತಗೊಳಿಸಬಹುದು. ಆದರೆ, ನಿಮ್ಮ ಒತ್ತಡದ ಮೂಲ ಕಾರಣವನ್ನು ಹುಡುಕಿ ಬಗೆಹರಿಸದ ಹೊರತು ನಿಮಗೆ ಸಂಪೂರ್ಣ ನೆಮ್ಮದಿ ಸಿಗುವುದಿಲ್ಲ" ಎಂದು ಅವರು ಹೇಳಿದ್ದಾರೆ.
ಆರ್ಥಿಕ ಭದ್ರತೆಯೇ ಒತ್ತಡ ನಿವಾರಣೆಗೆ ಮೂಲ ಮದ್ದು
ಸ್ವಂತವಾಗಿ ಹಣ ಸಂಪಾದಿಸುವುದು ಮನುಷ್ಯನಿಗೆ ಸಮಾಜದಲ್ಲಿ ಒಂದು ರೀತಿಯ ಆತ್ಮವಿಶ್ವಾಸವನ್ನು ನೀಡುತ್ತದೆ. ಕಷ್ಟದ ಸಮಯದಲ್ಲಿ ಇದೇ ಹಣ ಬೆಂಗಾವಲಾಗಿ ನಿಲ್ಲುತ್ತದೆ. ಬೆಂಗಳೂರಿನ ಸ್ಟಾರ್ಟ್‌ಅಪ್ ಮತ್ತು ಉದ್ಯಮಿಗಳ ವಲಯವನ್ನ ಹತ್ತಿರದಿಂದ ನೋಡಿರುವ ಸಿಮೃದ್ಧಿ, ತಮ್ಮ ಸ್ವಂತ ಅನುಭವವನ್ನ ಹಂಚಿಕೊಂಡಿದ್ದಾರೆ.
"ನಾನು ಬೆಂಗಳೂರಿನಲ್ಲಿ ಹಲವು ಉದ್ಯಮಿಗಳನ್ನ ನೋಡಿದ್ದೇನೆ. ಸ್ಥಿರವಾದ ಆದಾಯ ಅಥವಾ ನಗದು ಹರಿವು ಇಲ್ಲದ ಫೌಂಡರ್‌ಗಳು ತಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಕಷ್ಟಪಡುತ್ತಾರೆ. ಅದೇ ಹಣಕಾಸಿನ ಭದ್ರತೆ ಇರುವವರು, ಒತ್ತಡ ನಿವಾರಣೆ ಮಾಡಿಕೊಂಡು ಜೀವನದ ಎಲ್ಲ ಕ್ಷೇತ್ರಗಳಲ್ಲೂ ಖುಷಿಯಾಗಿರುತ್ತಾರೆ. ಇದನ್ನು ನಾನು ಪ್ರತ್ಯಕ್ಷವಾಗಿ ನೋಡಿದ್ದೇನೆ. ಎಷ್ಟೇ ಟೀಕೆಗಳು ಬಂದರೂ ನಾನು ಈ ಸತ್ಯವನ್ನ ಗಟ್ಟಿಯಾಗಿ ಹೇಳುತ್ತೇನೆ" ಎಂದು ಅವರು ತಮ್ಮ ವಿಡಿಯೋದಲ್ಲಿ ಮುಕ್ತಾಯಗೊಳಿಸಿದ್ದಾರೆ.


Click it and Unblock the Notifications
