ಬೆಂಗಳೂರಿನಲ್ಲಿ ಈ ಬಾರಿ ಪರಿಸರ ಸ್ನೇಹಿ ದೀಪಾವಳಿ
ಬೆಂಗಳೂರು, ನ.7 : ಬೆಂಗಳೂರಿನಲ್ಲಿ ಈ ಬಾರಿ ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸಲಾಗಿದೆ. ಪಟಾಕಿಯಿಂದಾಗುವ ಅಪಾಯಗಳ ಬಗ್ಗೆ ಉಂಟಾಗಿರುವ ಜಾಗೃತಿ ಮತ್ತು ಹೆಚ್ಚಾಗುತ್ತಿರುವ ಪರಿಸರ ಕಾಳಜಿಯ ಪರಿಣಾಮ ಈ ಬಾರಿ ದೀಪಾವಳಿಯಲ್ಲಿ ನಗರದ ವಾಯುಮಾಲಿನ್ಯ ಪ್ರಮಾಣ ಶೇ 31.6 ರಷ್ಟು ಕಡಿಮೆಯಾಗಿದೆ.
ದೀಪಾವಳಿ ನಂತರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೈಗೊಂಡ ಸಮೀಕ್ಷೆಯಲ್ಲಿ ಇದು ತಿಳಿದು ಬಂದಿದೆ. ಪಟಾಕಿ ಕುರಿತು ಜನರಿಗೆ ಉಂಟಾಗಿರುವ ಅರಿವು ಮತ್ತು ಪರಿಸರ ಕಾಳಜಿಯಿಂದಾಗಿ ಜನರು ಈ ಬಾರಿ ಕಡಿಮೆ ಪಟಾಕಿ ಸಿಡಿಸಿದ್ದಾರೆ. ಆದ್ದರಿಂದ ದೀಪಾವಳಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ ಎಂದ ಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ವಾಮನ ಆಚಾರ್ಯ, ಅನೇಕ ಜಾಗೃತಿ ಕಾರ್ಯಕ್ರಮಗಳಿಂದ ಈ ಬಾರಿ ಪಟಾಕಿ ಸಿಡಿಸುವುದು ಕಡಿಮೆಯಾಗಿದೆ. ಮಂಡಳಿಯ ಮನವಿಯನ್ನು ಜನರಿಗೆ ತಲುಪಿಸಲು ಮಾಧ್ಯಮಗಳು ಕೈಜೋಡಿಸಿವೆ. ಆದ್ದರಿಂದ ನಗರದ ಮಾಲಿನ್ಯ ಪ್ರಮಾಣ ಶೇ 31.6ರಷ್ಟು ಕಡಿಮೆಯಾಗಿದೆ ಎಂದು ಹೇಳಿದರು.
ಮಾಲಿನ್ಯ ನಿಯಂತ್ರಂಣ ಮಂಡಳಿಯು ನಗರದ ಸುಮಾರು 600 ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿ ಮಕ್ಕಳಿಂದ ಪ್ರಮಾಣ ವಚನ ಸ್ವೀಕಾರ ಮಾಡಿಸಿ, ಪಟಾಕಿಯಿಂದಾಗುವ ಹಾನಿಯ ಕುರಿತು ತಿಳಿವಳಿಕೆ ನೀಡಿದ್ದು, ಇದಕ್ಕೆ ಮಕಳು ಸಕರಾತ್ಮಕವಾಗಿ ಸ್ಪಂದಿಸಿದ್ದು, ಪಟಾಕಿ ಕಡಿಮೆ ಹೊಡೆಯುವ ಮೂಲಕ ದೀಪಾವಳಿ ಆಚರಣೆ ಮಾಡಿದ್ದಾರೆ ಎಂದರು. ಮಕ್ಕಳು ಪಟಾಕಿಯ ಪರಿಣಾಮಗಳ ಬಗ್ಗೆ ಅರಿತಿದ್ದರಿಂದಲೇ ಗಾಯಗೊಂಡವರ ಸಂಖ್ಯೆಯೂ ಕಡಿಮೆಯಾಗಿದೆ ಎಂದು ತಿಳಿಸಿದರು.
ಪಟಾಕಿಯಿಂದಾಗುವ ಹಾನಿಯ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಮಾಡಿದೆ. ದೀಪಾವಳಿಯಲ್ಲಿ ಪಟಾಕಿಗಳನ್ನು ಸಿಡಿಸಲು ನಗರದಲ್ಲಿ ಮೈದಾನಗಳನ್ನು ಸರ್ಕಾರ ನಿಗದಿಗೊಳಿಸಿ, ಅಲ್ಲಿಯೇ ಪಟಾಕಿ ಹೊಡೆಯುವಂತೆ ಆದೇಶಿಸಬೇಕು. ಆಗ ಕಸ ವಿಲೇವಾರಿ ಮಾಡಲು ಅನುಕೂಲವಾಗುತ್ತದೆ ಎಂದು ವಾಮನ ಆಚಾರ್ಯ ಹೇಳಿದರು. (ಬೆಂಗಳೂರಿನ 6 ಲಕ್ಷ ಮಕ್ಕಳು ಪಟಾಕಿ ಹೊಡೆಯೋಲ್ಲ)












Click it and Unblock the Notifications