ಬೆಂಗಳೂರು ಹೊರವಲಯದ ರೈಲ್ವೆ ಬೈಪಾಸ್ ನಿರ್ಮಾಣಕ್ಕೆ ವಿರೋಧ
ಬೆಂಗಳೂರು, ಫೆಬ್ರವರಿ 12: ಕೆಎಸ್ಆರ್ ಬೆಂಗಳೂರು-ಯಲಹಂಕ ನಡುವಿನ ರೈಲು ಮಾರ್ಗದ ಮೇಲಿನ ಒತ್ತಡ ಕಡಿಮೆ ಮಾಡಲು ಹೊಸ ಮಾರ್ಗವೊಂದನ್ನು ನಿರ್ಮಾಣ ಮಾಡಲು ರೈಲ್ವೆ ಇಲಾಖೆ ಮುಂದಾಗಿದೆ. ಆದರೆ ಈ ಪ್ರಸ್ತಾವಿತ ಯೋಜನೆಗೆ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದು, ಚಿಕ್ಕಪುಟ್ಟ ರೈತರ ಕೃಷಿ ಜಮೀನು ಪಡೆದುಕೊಂಡು ಅವರನ್ನು ಬೀದಿಗೆ ತಳ್ಳಬೇಡಿ ಎಂದು ಒತ್ತಾಯಿಸಿದ್ದಾರೆ. ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಬೆಟ್ಟಹಲಸೂರು ರೈಲು ನಿಲ್ದಾಣದ ಸಮೀಪ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ರಾಜಾನುಕುಂಟೆ-ಬೆಟ್ಟಹಲಸೂರು ನಿಲ್ದಾಣದ ನಡುವೆ ನೂತನ ರೈಲು ಮಾರ್ಗ ಅಳವಡಿಕೆ ಯೋಜನೆ ಕೈ ಬಿಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಬೆಟ್ಟಹಲಸೂರು ಮತ್ತು ಸುತ್ತಮುತ್ತಲಿನ ಗ್ರಾಮಗಳ ರೈತರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಗ್ರಾಮಗಳಲ್ಲಿ ಸಣ್ಣ ಹಿಡುವಳಿದಾರರು ಹೆಚ್ಚಾಗಿದ್ದಾರೆ. ಅವರ ಭೂಮಿಯನ್ನು ಪಡೆದುಕೊಂಡರೆ, ಕೇವಲ ಕೃಷಿ ನೆಚ್ಚಿಕೊಂಡಿರುವ ರೈತರಿಗೆ ಅನ್ಯಾಯವಾಗಲಿದೆ ಎಂದು ಸರ್ಕಾರದ ಗಮನ ಸೆಳೆಯಲಾಯಿತು.
ರಾಜಾನುಕುಂಟೆ-ಬೆಟ್ಟಹಲಸೂರು ರೈಲು ನಿಲ್ದಾಣಗಳ ನಡುವೆ 6.14 ಕಿ. ಮೀ. ನೂತನ ಮಾರ್ಗ ನಿರ್ಮಾಣ ಮಾಡುವುದು ಪ್ರಸ್ತಾವಿತ ಯೋಜನೆಯಾಗಿದೆ. ಇದರಿಂದಾಗಿ ಕೆಎಸ್ಆರ್ ಬೆಂಗಳೂರು ಮತ್ತು ಯಲಹಂಕ ರೈಲು ಮಾರ್ಗದ ಮೇಲಿ ಒತ್ತಡ ಕಡಿಮೆಯಾಗಲಿದೆ ಎಂದು ಇಲಾಖೆ ಅಂದಾಜಿಸಿದೆ.
ರೈತರ ವಿರೋಧ: ಪ್ರತಿಭಟನೆಯಲ್ಲಿ ಮಾತನಾಡಿದ ಅರಳಾಪುರ ಮಂಜುನಾಥ್, "ಉದ್ದೇಶಿತ ಯೋಜನೆಗಾಗಿ ಸಣ್ಣ ಹಿಡುವಳಿದಾರರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಈ ಜಮೀನುಗಳನ್ನು ಮಾತ್ರ ಅವಲಂಬಿಸಿರುವ ರೈತರು ಆತಂಕಗೊಂಡಿದ್ದಾರೆ" ಎಂದರು.
ಚಿಕ್ಕ ಪುಟ್ಟ ರೈತರು ಕೃಷಿ, ಹೈನುಗಾರಿಕೆ ಮಾಡಿಕೊಂಡು ಇಲ್ಲಿ ಜೀವನ ಕಟ್ಟಿಕೊಂಡಿದ್ದಾರೆ. ಆದರೆ ಸರ್ಕಾರ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಇಲ್ಲಿನ ಜಮೀನುಗಳಿಗೆ ಕಡಿಮೆ ಪರಿಹಾರವನ್ನು ನೀಡಿ, ಅದನ್ನು ರೈಲು ಯೋಜನೆಗೆ ತೆಗೆದುಕೊಳ್ಳಲು ಹೊರಟಿದೆ ಎಂದು ರೈತರು ಆರೋಪಿಸಿದರು.
ಕೇಂದ್ರ ರೈಲ್ವೆ ಸಚಿವಾಲಯ ರಾಜಾನುಕುಂಟೆ-ಬೆಟ್ಟಹಲಸೂರು ನಡುವಿನ ರೈಲು ಮಾರ್ಗವನ್ನು ವಿಶೇಷ ಯೋಜನೆ ಎಂದು ಪರಿಗಣಿಸಿದೆ. 2025ರ ಜನವರಿ 7ರಂದು ಯೋಜನೆ ಕುರಿತು ಗೆಜೆಟ್ ಅಧಿಸೂಚನೆ ಪ್ರಕಟಿಸಲಾಗಿದೆ. 248 ಕೋಟಿ ರೂ. ವೆಚ್ಚದಲ್ಲಿ 6.14 ಕಿ. ಮೀ. ಬೈಪಾಸ್ ರೈಲು ಮಾರ್ಗ ನಿರ್ಮಾಣ ಮಾಡುವ ಯೋಜನೆ ಇದಾಗಿದೆ.
ಈ ಯೋಜನೆ ಕುರಿತು ಮಾತನಾಡಿರುವ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, "ರೈಲ್ವೆ ಬೈಪಾಸ್ ಮಾರ್ಗ (ಕಾರ್ಡ್ ಲೈನ್) ನಿರ್ಮಾಣ ಮಾಡುವುದರಿಂದ ಪ್ರಯಾಣಿಕ ರೈಲುಗಳು ಬೈಪಾಸ್ ಮೂಲಕ ಸಂಚಾರ ನಡೆಸಬಹುದು. ಆದ್ದರಿಂದ ಇತರ ರೈಲುಗಳ ಓಡಾಟಕ್ಕೆ ಅನುಕೂಲವಾಗಲಿದೆ" ಎಂದರು.
2022ರಲ್ಲಿ ಈ ಮಾರ್ಗದಲ್ಲಿ ಜೋಡಿ ಹಳಿ ನಿರ್ಮಾಣ ಮಾಡಬೇಕು ಎಂದು ನೈಋತ್ಯ ರೈಲ್ವೆ ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಸಮೀಕ್ಷೆ ಮತ್ತು ಕಾರ್ಯ ಸಾಧ್ಯತಾ ವರದಿಯ್ನು ನೀಡಿತ್ತು. 248 ಕೋಟಿ ರೂ. ವೆಚ್ಚದ ಈ ಯೋಜನೆಗೆ ರೈಲ್ವೆ ಇಲಾಖೆ ಒಪ್ಪಿಗೆಯನ್ನು ನೀಡಿದೆ.
ರಾಜಾನುಕುಂಟೆ-ಬೆಟ್ಟಹಲಸೂರು ನಡುವೆ ಸರಕು ಸಾಗಣೆ ರೈಲು, ಪ್ರಯಾಣಿಕರ ರೈಲುಗಳ ಸಂಚಾರದ ಕಾರಣ ಭಾರೀ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಆದ್ದರಿಂದ ಬೈಪಾಸ್ ನಿರ್ಮಾಣ ಮಾಡಿ ಪ್ರಯಾಣಿಕ ರೈಲುಗಳು ಸುಲಭವಾಗಿ ಸಾಗುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಈ ಯೋಜನೆಯಿಂದ ಕೆಎಸ್ಆರ್ ಬೆಂಗಳೂರು-ಯಲಹಂಕ ನಡುವೆ ರೈಲುಗಳ ಸಂಚಾರದ ಅವಧಿ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications