APK Fraud Alert: ನಕಲಿ ಇ-ಚಲನ್ ಹೆಸರಿನಲ್ಲಿ ಎಪಿಕೆ ಸಂದೇಶ: ವಾಹನ ಮಾಲೀಕರೇ ಟಾರ್ಗೆಟ್
ಬೆಂಗಳೂರು: ಇಂದಿನ ದಿನಮಾನಗಳಲ್ಲಿ ತಂತ್ರಜ್ಞಾನವು ನಕಾರಾತ್ಮಕವಾಗಿಯೂ ಹೆಚ್ಚು ಬಳಕೆ ಆಗುತ್ತಿದೆ. ಅದಕ್ಕೀಗಾಗಲೇ ಸಾಕಷ್ಟು ಪುರಾವೆಗಳು ನಮ್ಮ ಮುಂದಿವೆ. ಸೈಬರ್ ವಂಚಕರ ಹಾವಳಿ ಹೆಚ್ಚುತ್ತಿದ್ದು, ಇವರು ಹೊಸ ಹೊಸ ವಿಧಾನಗಳ ಮೂಲಕ ಎಪಿಕೆ ಫೈಲ್ ಲಿಂಕ್ ಕಳುಹಿಸಿ ಜನರನ್ನು ವಂಚಿಸುವ ಯತ್ನ ಮುಂದುವರಿಸಿದ್ದಾರೆ. ಹೊಸ ವರ್ಷದ ಗಿಫ್ಟ್ ಕೂಪನ್, ವಿಷ್ ಹಾಗೂ ಇತರ ಹೆಸರಿನಲ್ಲಿ ಎಪಿಕೆ ಲಿಂಕ್ ಕಳಹಿಸಿ ವಂಚಿಸುತ್ತಿದ್ದಾರೆ. ಇದೀಗ ವಾಹನಗಳ ನಿಯಮ ಉಲ್ಲಂಘನೆ ಕಾರಣವೊಡ್ಡಿ ಟ್ರಾಫಿಕ್ ಪೊಲೀಸರು ಕಳುಹಿಸಿದಂತೆ ಟೆಕ್ಸ್ಟ್ ಮೆಸೆಜ್‌ನಲ್ಲಿ ಎಪಿಕೆ ಲಿಂಕ್ ಕಳುಹಿಸಿ ವಾಹನ ಮಾಲೀಕರಿಂದ ಸುಲಿಗೆಗೆ ಮುಂದಾಗಿದ್ದಾರೆ.
ಹೌದು, ವಾಹನಗಳ ಮಾಲೀಕರಿಗೆ ಇ-ಚಲನ್ ರೀತಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಸಂದೇಶಗಳನ್ನು ಕಳುಹಿಸುತ್ತಿದ್ದಾರ.ಎ ಅಲ್ಲಿನ ಲಿಂಕ್ ಕ್ಲಿಕ್ ಮಾಡಿ ನೋಡಿದರೆ ಅಥವಾ ಬಿಟಿಪಿ ಅಧಿಕೃತ ಆಪ್, ಜಾಲತಾಣದಲ್ಲಿ ಪರಿಶೀಲಿಸಿದರೆ ನಿಯಮ ಉಲ್ಲಂಘನೆಯೇ ಆಗಿರುವುದಿಲ್ಲ. ಹೀಗಿದ್ದರು ಮಾಹಿತಿ ಕದ್ದು ಮೊಬೈಲ್ ಸಂಖ್ಯೆಗಳಿಗೆ ಎಪಿಕೆ ಲಿಂಕ್ ಕಳುಹಿಸುವ ಸ್ಕ್ಯಾಮ್ ಶುರುವಾಗಿದೆ. ಈ ಬಗ್ಗೆ ಲೇಖಕ ಮಧು ವೈ.ಎನ್. ಅವರು ತಮಗಾದ ಅನುಭವ ಬಗ್ಗೆ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡು ಜಾಗೃತಿ ಮೂಡಿಸಿದ್ದಾರೆ. ಅವರ ಪೋಸ್ಟ್‌ನಲ್ಲಿನ ಮಾಹಿತಿ ಹೀಗಿದೆ.

ಸಂಚಾರ ನಿಯಮ ಉಲ್ಲಂಘನೆಯ ಎಪಿಕೆ ಸಂದೇಶ
'ಮೊನ್ನೆ ರಾತ್ರಿ ಮನೆಗೆ ಬಂದ ಕೂಡಲೇ ನನಗೆ ಹೀಗೊಂದು ಮೆಸೇಜು ಬಂದಿತ್ತು. Greetings, Your vehicle KA04NDxxyy has an outstanding E-challan. Please settle it here: https://tinyurl.com/43xyvv9s UID: TN5604375601.'
ನಾನು ಅಗಷ್ಟೇ ಕುಟುಂಬ ಸಮೇತ ಕಾರಿನಲ್ಲಿ ಹೊರಗೆ ಸುತ್ತಾಡಿಕೊಂಡು ಬಂದಿದ್ದೆ. ಹಾಗಾಗಿ ಎಲ್ಲಿಯಾದರೂ ಸಿಗ್ನಲ್ ಬ್ರೇಕ್ ಮಾಡಿದ್ದೆನಾ ಗೊತ್ತಾಗಲಿಲ್ಲ. ನಿಜವಾಗಿಯೂ ಮಾಡಿರಬಹುದು ಅನ್ನಿಸಿತು. ಯಾಕೆಂದರೆ ರಾತ್ರಿ ಹನ್ನೊಂದು ಗಂಟೆಯಾಗಿದ್ದರಿಂದ ಖಾಲಿ ರಸ್ತೆಗಳು ಇದ್ದದರಿಂದ ಸಿಗ್ನಲ್ ಲೆಕ್ಕಿಸಿದೆ ಆರಾಮಾಗಿ ಬಂದಿದ್ದೆ ಎಂದರು.
ಇನ್ನೂ ಬಂದಿದ್ದ ಲಿಂಕ್ ಕ್ಲಿಕ್ ಮಾಡಿದೆ. ಈ ರೀತಿ ತೋರಿಸಿತು.
File Name: mParivahanV6.91.apk
• File Size: 6.4 MB
• Download Source: aeres.ru
• Action Buttons: Save... | X (Cancel)
ಅರರೆ ಎಂಥ ಬದ್ಮಾಶ್ ಅನ್ನಿಸಿಬಿಟ್ಟಿತು. ಆಪ್ ಸ್ಟೋರಿಗೆ ಹೋಗಿ ಪರಿವಾಹನ್ ಆಪ್ ಹಾಕ್ಕೊಂಡು ನೋಡಿದೆ. ಅದರಿಂದಲೂ ಗೊತ್ತಾಗದೆ acko ಎಂಬ ಥರ್ಡ್ ಪಾರ್ಟಿ ಆಪ್ ಹಾಕ್ಕೊಂಡು ಕಾರ್ ನಂಬರ್ ಕೊಟ್ಟು ಹುಡುಕಿದೆ. ಅಲ್ಲಿ ಸಹ ನಿಮಗೆ ಹೆಸರಿನಲ್ಲಿ ಯಾವುದೇ ಚಲನ್‌ಗಳು ಇಲ್ಲ (you have zero challans) ಎಂದು ತೋರಿಸಿತು. ಇದೆಲ್ಲ ಡ್ರಿಲ್ ದೃಷ್ಟಿಯಿಂದ ಹೇಳಿದೆ. ಮೊದಲಿಗೆ ಈ ರೀತಿಯ ಟೈನಿ ಎಂದಿರುವ ಲಿಂಕು ಒತ್ತುವುದು ತಪ್ಪು. ಎಪಿಕೆ ಡೌನ್‌ಲೋಡ್ ಮಾಡುವುದು ತಪ್ಪು. ಅದೂ ರಶಿಯಾ ವೆಬ್‌ಸೈಟ್‌ನಿಂದ ಅಂತೆ! (aeres.ru). ಚಲನ್ ಇದ್ದರೆ ಅಫಿಶಿಯಲ್ ವೆಬ್‌ಸೈಟ್ ಮೂಲಕ ಮೂಲಕ ಕಟ್ಟಬೇಕು.
ನಮ್ಮ ಮಾಹಿತಿಗಳು ಲೀಕ್ ಆಗುತ್ತಿರುವುದೆಲ್ಲಿ?
ಪ್ರಶ್ನೆ ಅದಲ್ಲ. ವಿಷಯ ಇನ್ನೂ ಗಂಭೀರವಾಗಿದೆ, ಅದೇನೆಂದರೆ 'ನಾನು ಹೊರಗೆ ಹೋಗಿದ್ದೆ ಎಂದು ಅವರಿಗೆ ಹೇಗೆ ಗೊತ್ತಾಯಿತು?. ಮನೆಗೆ ಬಂದೆ ಎಂದು ಹೇಗೆ ಗೊತ್ತಾಯಿತು? ಗಮನಿಸಿ, ಮನೆಗೆ ಬಂದ ನಂತರವಷ್ಟೆ ನನಗೆ ಆ ಮೆಸೇಜು ಬಂದಿದೆ.
ನಾನು ಕಾರಲ್ಲೆ ಹೋಗಿದ್ದೆ ಎಂದು ಹೇಗೆ ಗೊತ್ತಾಯಿತು? ಬೈಕಲ್ಲೂ ಹೋಗಿರಲು ಸಾಧ್ಯ. ನನ್ನ ಕಾರ್ ನಂಬರ್ ಹೇಗೆ ಗೊತ್ತಾಯಿತು? ನನ್ನದು ಆಂಡ್ರಾಯ್ಡ್ ಅಲ್ಲ ಐಫೊನ್, ಇಲ್ಲಿ ಎಪಿಕೆ ಕೆಲಸ ಮಾಡಲ್ಲ ಎಂದು ಮಾತ್ರ ಯಾಕೆ ಗೊತ್ತಾಗಲಿಲ್ಲ? ಎಂದು ಅವರು ಪ್ರಶ್ನಿಸಿಕೊಂಡಿದ್ದಾರೆ.
ಈ ಸಂಜೆ ಎರಡು ಕಡೆ ಕಾರ್ ಪಾರ್ಕಿಂಗ್ ಮಾಡಿದ್ದೆ. ಎರಡೂ ಕಡೆ ಫೋನ್ ನಂಬರ್ ಕೊಟ್ಟಿದ್ದೆ. ಅವರೇ ಅನಧಿಕೃತವಾಗಿ ನನ್ನ ಡೇಟಾ ಹಂಚಿಕೊಂಡರಾ.. ಗೊತ್ತಿಲ್ಲ. ಹೋಗಿ ಅವರನ್ನು ಕೇಳುವ ವ್ಯವಧಾನ ನನಗಿಲ್ಲ. ಇಲ್ಲವಾದರೆ ನನ್ನಲ್ಲಿರುವ ಅಧಿಕೃತ ಆಪ್ ಗಳಲ್ಲೆ ಯಾರೋ ನನ್ನ ಲೊಕೇಶನ್ ಲೀಕ್ ಮಾಡುತ್ತಿದ್ದಾರೆ. ಅದಷ್ಟೇ ಆಗಿದ್ದರೆ ನನ್ನ ಐಫೊನ್ ಬಳಕೆಯ ಬಗ್ಗೆಯೂ ಅವರಿಗೆ ಗೊತ್ತಿರಬೇಕಿತ್ತು' ಎಂದು ಅವರು ಈ ಎಪಿಕೆ ಸೈಬರ್ ವಂಚಕರ ಕುರಿತು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ಅಲ್ಲಿ ಹಲವರು ತಮಗಾದ ಎಪಿಕೆ ವಂಚನೆ ಯತ್ನ, ಲಿಂಕ್ ಸಂದೇಶಗಳ ಬಗ್ಗೆ ಇರಬೇಕಾದ ಜಾಗೃತಿ ಕುರಿತು ಮಾತನಾಡಿದ್ದಾರೆ.
ಅನೇಕರಿಗೆ ಎಪಿಕೆ ಸ್ಕ್ಯಾಮ್ ಸಂದೇಶ
ನೆಟ್ಟಿಗರೊಬ್ಬರು 'ಸ್ಯಾಮ್‌ಸಂಗ್ ಮೊಬೈಲ್ ಬಳಸುತ್ತೇನೆ, ನನಗೂ ಎಪಿಕೆ ಸಂದೇಶ ಬಂದಿತ್ತು, ನಾನೆಲ್ಲಾದರೂ ಸಿಗ್ನಲ್ ಜಂಪ್ ಮಾಡಿದ್ದೀನಾ? ಏನಾಯ್ತ ಎಂದುಕೊಂಡು ಲಿಂಕ್ ಕ್ಲಿಕ್ ಮಾಡಿದ್ದೇ ಆಮೇಲೆ ಆಪ್ ಡೌನ್ಲೋಡ್ ಮಾಡಿ ಅಂತ ಬಂತು. ಅನುಮಾನ ಬಂದು ಹಸ್ಬೆಂಡ್ ಗೆ ತೋರಿಸಿದೆ, ಅದು ಎಪಿಕೆ ಫೈಲ್ ಓಪನ್ ಮಾಡಬಾರದು ಎಂದು ಗೊತ್ತಾಗಲ್ವಾ ಎಂದು ಬೈದರು. ನಂತರ ಬ್ಲಾಕ್ ಮಾಡಿ ಡಿಲಿಟಿ ಮಾಡಿದೆ' ಎಂದು ಕಾಮೆಂಟ್ ಮಾಡಿದ್ದಾರೆ.
'ಕೆ.ಆರ್. ಸರ್ಕಲ್ ನಲ್ಲಿ ನೀವು ಸೀಟ್ ಬೆಲ್ಟ್ ಹಾಕಿಲ್ಲ ಎಂಬ ಸಂದೇಶ ನನಗೂ ಬಂದಿತ್ತು. ದಿನಾಂಕ ಸಮೇತ ನನಗೆ ಸಂದೇಶ ಬಂದಿತ್ತು. ಆವತ್ತು ನಾನು ಅಲ್ಲಿ ಹೋಗಿದ್ದು ನಿಜ, ಆದರೆ ಸೀಟ್ ಬೆಲ್ಟ್ ಹಾಕಿದ್ದೆ. ಆಮೇಲೆ ಪರಿಶೀಲಿಸಿದಾಗ ನೋ ಚಲನ್ ಎಂದು ಬಂದಿದ್ದು' ನೋಡಿದೆ ಎಂದು ಮತ್ತೊಬ್ಬರು ತಿಳಿಸಿದ್ದಾರೆ. 'ನಾವು ಸೃಷ್ಟಿಸಿದ ಟೆಕ್ನಾಲಜಿ ಮಾನ್ಸಟರುಗಳೇ ನಮ್ಮ ಬೆನ್ನತ್ತಿದ್ದಾರೆ!...ವಿಕ್ರಮಾದಿತ್ಯ ಬೇತಾಳದ ಕತೆಗಳು ಇದನ್ನೇ ಸೂಚಿಸಿದ್ದು' ಎಂದು ಇನ್ನೊಬ್ಬರು ಕಾಮೆಂಟ್ ಹಾಕಿದ್ದಾರೆ.
ಸೈಬರ್ ವಂಚಕರ ಬೆನ್ನು ಬೀಳುವ ಪೊಲೀಸರ ಹೆಸರಿನಲ್ಲಿ ಇಂತಹ ಸ್ಕ್ಯಾಮ್, ವಂಚನೆಗಳು ನಡೆಯುತ್ತವೆ. ಇದು ಕೇವಲ ವಾಹನ ಚಲನ್, ವಿಷ್, ಗಿಫ್ಟ್, ಬ್ಯಾಂಕ್ ಖಾತೆಗಳ ಕೆವೈಸಿ ಅಪ್ಡೇಟ್ ಹೆಸರಿನಲ್ಲಿ ಮಾತ್ರವಲ್ಲದೇ ಅನೇಕ ವಿಧಾನಗಳ ಮೂಲಕ ವಂಚನೆ ಯತ್ನ ನಡೆಯುತ್ತಲೇ ಇದ್ದು, ಸಾರ್ವಜನಿಕರು ಜಾಗೃತರಾಗಬೇಕಿದೆ.











Click it and Unblock the Notifications