ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ: ಮಾಜಿ ಸಚಿವ ನಾಗೇಂದ್ರ ಪತ್ನಿ ಇಡಿ ವಶಕ್ಕೆ
ಬೆಂಗಳೂರು ಜುಲೈ 17: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಅವರನ್ನು ಈಗಾಗಲೇ ಬಂಧಿಸಲಾಗಿದ್ದು ಈಗ ಅವರ ಪತ್ನಿಯನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮಾಜಿ ಸಚಿವ ನಾಗೇಂದ್ರ ಅವರ ಪತ್ನಿ ಮಂಜುಳಾರನ್ನು ಇಡಿ ಅಧಿಕಾರಿಗಳು ಇಂದು ವಶಕ್ಕೆ ಪಡೆದಿದ್ದಾರೆ. ಶಾಂತಿ ನಗರದ ಇಡಿ ಕಚೇರಿಗೆ ಮಂಜುಳಾ ಅವರನ್ನು ಕರೆದೊಯ್ದು ವಿಚಾರಣೆ ಮಾಡಲಾಗುತ್ತಿದೆ.

ಕಳೆದ ಕೆಲ ದಿನಗಳ ಹಿಂದೆ ಇಡಿ ಅಧಿಕಾರಿಗಳು ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಅವರ ಮನೆ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸಿದ್ದರು. ನಾಗೇಂದ್ರ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ನಂತರ ಅವರನ್ನು ಬಂಧಿಸಲಾಗಿತ್ತು. ಇದೇ ವಿಚಾರದಲ್ಲೀಗ ನಾಗೇಂದ್ರ ಅವರ ಪತ್ನಿಯನ್ನೂ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ವಾಲ್ಮೀಕಿ ನಿಗಮದ 94 ಕೋಟಿ ರೂಪಾಯಿ ಹಣವನ್ನು ಅಕ್ರಮವಾಗಿ ಬಳಿಸಿಕೊಳ್ಳಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ಏಕಕಾಲದಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿತ್ತು. ಬಿ ನಾಗೇಂದ್ರ ಅವರ ಮೇಲೆ ಆಪ್ತನೋರ್ವನಿಂದ 25 ಲಕ್ಷ ಲಂಚ ಸ್ವೀಕರಿಸಿದ ಆರೋಪ ಇದೆ.
94 ಕೋಟಿ ಹಣವನ್ನು ವಾಲ್ಮಿಕಿ ನಿಗಮದ ಖಾತೆಯಿಂದ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ಸಚಿವ ಸೂಚನೆಯ ಮೇರೆಗೆ ಹಣ ವರ್ಗಾವಣೆ ಆಗಿದೆ ಎಂಬ ಆರೋಪ ಇದಾಗಿದೆ. ಈ ಹಿನ್ನೆಯಲ್ಲಿ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆಗೆ ರಾಜ್ಯ ಸರ್ಕಾರ ನೀಡಿತ್ತು.
ಎಸ್‌ಐಟಿ ತನಿಖೆ ನಡೆಯುತ್ತಿದ್ದ ಸಂದರ್ಭದಲ್ಲೇ ಇಡಿ ದಾಳಿ ನಡೆಸಿತ್ತು. ಬಳ್ಳಾರಿ ಹಾಗೂ ಬೆಂಗಳೂರಿನ ನಿವಾಸ ಮತ್ತು ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ ಇಡಿ ಅಧಿಕಾರಿಗಳು ಹಲವಾರು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ನಾಗೇಂದ್ರ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಇಡಿ ಕಚೇರಿಗೆ ಪಡೆದುಕೊಂಡು ಹೋಗಲಾಗಿತ್ತು. ನಾಗೇಂದ್ರ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಾಗ ಅವರನ್ನು ಬಂಧಿಸಲಾಗಿದೆ. ಇದೀಗ ಇದೇ ಪ್ರಕರಣದಲ್ಲಿ ನಾಗೇಂದ್ರ ಅವರ ಪತ್ನಿ ಮಂಜುಳಾ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.












Click it and Unblock the Notifications