ರಮೇಶ್ ಕ್ಷಮೆಗೆ ವಿದ್ಯುತ್ ನೌಕರರ ಬಿಗಿ ಪಟ್ಟು
ಬೆಂಗಳೂರು, ಮೇ5 :ಕುಡಿಯುವ ನೀರು ಪಡೆಯಲು ಅಡ್ಡಿ ಪಡಿಸುವ ಬೆಸ್ಕಾಂ ಅಧಿಕಾರಿಗಳು ಊರಿಗೆ ಬಂದರೆ ಅವರನ್ನು ಕಟ್ಟಿಹಾಕಿ ಮೂರು ದಿನ ಊಟ ಕೊಡಬೇಡಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ ರಮೇಶ್ ಕುಮಾರ್ ವಿರುದ್ಧ ವಿರೋಧದ ಅಲೆ ಎಲ್ಲೆಡೆಯಿಂದ ಕೇಳಿ ಬರಲಾರಂಭಿಸಿದೆ.[ಬೆಸ್ಕಾಂ ಅಧಿಕಾರಿಗಳನ್ನು ಸಾಲಾಗಿ ನಿಲ್ಲಿಸಿ ಕಡಿಯಿರಿ]
ಶಾಸಕ ರಮೇಶ್ ಕುಮಾರ್ ಕೋಲಾರ ಜಿಲ್ಲಾ ಪಂಚಾಯತಿ ಸಭೆಯಲ್ಲಿ ಬೆಸ್ಕಾಂ ಅಧಿಕಾರಿಗಳ ಬಗ್ಗೆ ನೀಡಿದ ಹೇಳಿಕೆಯನ್ನು ವಿರೋಧಿಸಿ ಕರ್ನಾಟಕ ವಿದ್ಯುತ್ ನೌಕರರ ಒಕ್ಕೂಟದ ಸದಸ್ಯರು ಬೆಂಗಳೂರಿನಲ್ಲಿ ಮೇ5 ಸೋಮವಾರದಂದು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಕಾವೇರಿ ಭವನದ ಅವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ನೌಕರರ ಒಕ್ಕೂಟದ ನೂರಾರು ಸದಸ್ಯರು ಭಾಗವಹಿಸಿ,ಶಾಸಕ ರಮೇಶ್ ಕುಮಾರ್ ವಿರುದ್ದ ಪ್ರತಿಭಟಿಸಿ ಬೇಷರತ್ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿ ಪ್ರತಿಕೃತಿ ದಹಿಸಿದರು.
ಶಾಸಕ ರಮೇಶ್ ಕುಮಾರ್ ಹೇಳಿದ್ದು ಏನು?
ಕೋಲಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಏ. 29 ಮಂಗಳವಾರ ಅಧಿಕಾರಿಗಳ ಸಭೆ ನಡೆಯತ್ತಿತ್ತು. ಬೆಸ್ಕಾಂ ಅನುಮತಿ ಪಡೆಯದೆ ಪಿಡಿಒ ಅಧಿಕಾರಿಗಳು ಕಾಮಗಾರಿಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಕ್ಕೆ ಬೆಸ್ಕಾಂ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು. ಈ ಹೇಳಿಕೆಯಿಂದಾಗಿ ಬೆಸ್ಕಾಂ ಮತ್ತು ಪಿಡಿಓ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯುವ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ರಮೇಶ್ ಕುಮಾರ್, "ಕುಡಿಯುವ ನೀರು ಪಡೆಯಲು ಅಡ್ಡಿ ಪಡಿಸುತ್ತೀರಾ? ಬೆಸ್ಕಾಂ ಅಧಿಕಾರಿಗಳು ಊರಿಗೆ ಬಂದರೆ ಅವರನ್ನು ಕಟ್ಟಿಹಾಕಿ ಮೂರು ದಿನ ಊಟ ಕೊಡಬೇಡಿ. ಆಗ ಅವರಿಗೆ ಗೊತ್ತಾಗುತ್ತದೆ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಕಾನೂನು ಕ್ರಮವನ್ನು ಜರುಗಿಸಿ
'' ಶಾಸಕರಾದ ರಮೇಶ್ ಕುಮಾರ್ ಅವರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದು, ಇವರ ವಿರುದ್ದ ಸರ್ಕಾರ ಕಾನೂನು ಕ್ರಮ ಜರುಗಿಸಲಿ''
-ಎಂ ನಾಗರಾಜ್, ಅಧ್ಯಕ್ಷ, ಕವಿಮಂ ನೌಕರರ ಸಂಘ ಮತ್ತು ಅಧಿಕಾರಿಗಳ ಒಕ್ಕೂಟ

ಮನೋಸ್ಥೈರ್ಯವನ್ನು ಕಡಿಮೆಗೊಳಿಸಿದೆ
"ಈ ಹೇಳಿಕೆ ನಮ್ಮ ನೌಕರರು ಮತ್ತು ಅಧಿಕಾರಿಗಳ ಮನೋಸ್ಥೈರ್ಯವನ್ನು ಕಡಿಮೆಗೊಳಿಸಿದೆ. ನಮ್ಮ ನೌಕರರು ಮತ್ತು ಅಧಿಕಾರಿಗಳಿಗೆ ಸೂಕ್ತ ರಕ್ಷಣೆಯ ಅಗತ್ಯವಿದೆ "
-ವಿ ವೆಂಕಟಶಿವಾ ರೆಡ್ಡಿ , ಕಾರ್ಯದರ್ಶಿ, ಕವಿಮಂ ನೌಕರರ ಸಂಘ ಮತ್ತು ಅಧಿಕಾರಿಗಳ ಒಕ್ಕೂಟ

ಅಧಿಕಾರಿಗಳ ಸಭೆಯಲ್ಲಿ ವಿವಾದಾತ್ಮಕ ಹೇಳಿಕೆ
ಕೋಲಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಏ. 29 ರಂದು ಅಧಿಕಾರಿಗಳ ಸಭೆ ನಡೆದ ವೇಳೆ ಶಾಸಕ ರಮೇಶ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ರಾಜ್ಯಪಾಲರಿಗೆ ಮನವಿ
ನಗರದ ಕಾವೇರಿ ಭವನದ ಅವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ವಿದ್ಯುತ್ ನೌಕರರ ಒಕ್ಕೂಟದ ನೂರಾರು ಸದಸ್ಯರು ಭಾಗವಹಿಸಿದ್ದರು. ಇದೆ ವೇಳೆ ಕೆಪಿಟಿಸಿಎಲ್ ಎಂಡಿ, ಮುಖ್ಯ ಮಂತ್ರಿ ಮತ್ತು ರಾಜ್ಯಪಾಲರಿಗೆ ಶಾಸಕ ರಮೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ಮನವಿ ಸಲ್ಲಿಸಲಾಯಿತು.












Click it and Unblock the Notifications