ಬೆಂಗಳೂರಿಗರಿಗೆ ಸಿಹಿ ಸುದ್ದಿ: ನಗರದ ಮೊದಲ 'ಸ್ಮಾರ್ಟ್' ಬಸ್ ನಿಲ್ದಾಣ: ಏನಿದರ ವಿಶೇಷತೆ?, ಪೂರ್ತಿ ತಿಳಿಯಿರಿ
ಬೆಂಗಳೂರಲ್ಲಿ 'ಎಲ್ಸಿಟಾ ಬಸ್ ನಿಲ್ದಾಣ'ವು ಮೊದಲ ಸ್ಮಾರ್ಟ್ ಬಸ್ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಎಲ್ಲಿದೆ, ಏನಿದರ ವಿಶೇಷತೆ?, ಪ್ರಯಾನಿಕರಿಗೆ ಇದರಿಂದಾಗುವ ಅನುಕೂಲಗಳೇನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು, ಫೆಬ್ರವರಿ 28: ಲಕ್ಷಾಂತರ ಜನರು ಬೆಂಗಳೂರಿನಲ್ಲಿ ಓಡಾಟಕ್ಕಾಗಿ ನಿತ್ಯ ಸರ್ಕಾರಿ ಸ್ವಾಮ್ಯದ ಸಾರಿಗೆ ವ್ಯವಸ್ಥೆಯನ್ನೆ ಅವಲಂಬಿಸಿದ್ದಾರೆ. ಆದರೆ ಎಲ್ಲಿ ನೋಡಿದರೂ ಬಸ್ ನಿಲ್ದಾಣ, ರಸ್ತೆಯಂತಹ ಮೂಲಸೌಕರ್ಯಗಳದ್ದೆ ಸಮಸ್ಯೆ. ಹೀಗಿರುವ ವಾತಾವರಣದ ಮಧ್ಯೆ ನಗರದಲ್ಲಿ ಮೊದಲ ಸ್ಮಾರ್ಟ್ ಬಸ್ ನಿಲ್ದಾಣವೊಂದು ತಲೆ ಎತ್ತಿದೆ.
ಹೌದು, ನಿಮ್ಮ ಮುಂದಿನ ನಿಲ್ದಾಣ ಯಾವುದು, ನೀವು ತಲುಪುವ ಸ್ಥಳಗಳ ಮಾರ್ಗದ, ಸ್ನ್ಯಾಕ್ಸ್, ನೀರು, ಚಾರ್ಜಿಂಗ್ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳನ್ನು ಈ ನಿಲ್ದಾಣ ಹೊಂದಿದೆ. ಇದು ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಇದೆ.

ಬೆಂಗಳೂರಿನ ಮೊದಲ ಸ್ಮಾರ್ಟ್ ಬಸ್ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಬಸ್ ನಿಲ್ದಾಣದ ಹೆಸರು 'ಎಲ್ಸಿಟಾ ಬಸ್ ನಿಲ್ದಾಣ'. ಈ ಸ್ಮಾರ್ಟ್ ಬಸ್ ನಿಲ್ದಾಣವು ತಿಂಡಿಗಳು ಮತ್ತು ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗಾಗಿ ವಿತರಣಾ ಯಂತ್ರವನ್ನು ಹೊಂದಿದೆ. ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿಗೆ ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು ಚಾರ್ಜ್ ಶೇ. 70ರಷ್ಟು ಆದಾಗ ಎಚ್ಚರಿಕೆಗಳನ್ನು ಸಹ ನೀಡುತ್ತದೆ. ಸ್ಮಾರ್ಟ್ ಡಸ್ಟ್‌ಬಿನ್‌ಗಳನ್ನು ಹೊಂದಿದೆ.
ನಿಲ್ದಾಣದಲ್ಲಿ ಬಸ್‌ಗಳ ಸಮಯಗಳ ಬಗ್ಗೆ ನೈಜ-ಸಮಯದ ಮಾಹಿತಿಗಾಗಿ ಪ್ರದರ್ಶನ ಪರದೆ ಹೊಂದಿದೆ. ಜೊತೆಗೆ ಬಸ್‌ಗಳ ಮಾರ್ಗ ನಕ್ಷೆಯನ್ನು ಸಹ ಇಲ್ಲಿ ನೋಡಬಹುದಾಗಿದೆ.
ನಾಲ್ಕು ಕಡೆ ನಿರ್ಮಾಣಕ್ಕೆ ಟೆಂಡರ್
ಎಲ್ಲರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಬಸ್ ನಿಲ್ದಾಣದಲ್ಲಿ ಎರಡು ಸಿಸಿಟಿವಿ ಕ್ಯಾಮೆರಾಗಳು ಮತ್ತು ದ್ವಿಮುಖ ಎಸ್ಒಎಸ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. "ಸ್ಮಾರ್ಟ್" ಜೊತೆಗೆ, ಬಸ್ ನಿಲ್ದಾಣವು "ಹಸಿರು" ಆಗಿದೆ. ಪಕ್ಕದಲ್ಲೇ ಸ್ಮಾರ್ಟ್ ಉದ್ಯಾನವನ್ನು ಸ್ಥಾಪಿಸಲಾಗಿದೆ.

ELCITA ಕಂಪನಿ ನಗರದಲ್ಲಿ ನಾಲ್ಕು ಸ್ಮಾರ್ಟ್ ಬಸ್ ನಿಲ್ದಾಣಗಳನ್ನು ವಿನ್ಯಾಸಗೊಳಿಸಲಿದೆ. ಇದರು ಒಂದನೇ ಸ್ಮಾರ್ಟ್ ಬಸ್ ನಿಲ್ದಾಣವಾಗಿದೆ. ಇವುಗಳ ಸ್ಥಾಪನೆಗಾಗಿ ಈ ಹಿಂದೆಯೆ ಟೆಂಡರ್ ಆಹ್ವಾನಿಸಲಾಗಿದೆ. ಉದ್ದೇಶದಂತೆ ಸ್ಮಾರ್ಟ್ ಬಸ್ ನಿಲ್ದಾಣಗಳು 3M ಇಂಡಿಯಾ ಎದುರು, Infosys (ವಿಮಾನ ನಿಲ್ದಾಣದ ಬಸ್ ನಿಲ್ದಾಣದ ಹತ್ತಿರ), Otium ಎದುರು, ಮತ್ತು ಹಂತ 2 (XIME ಕಾಲೇಜು) ಬಳಿ ನಿರ್ಮಾಣವಾಗಲಿವೆ ಎಂದು ಹೇಳಲಾಗಿತ್ತು. ಈ ಪೈಕಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಒಂದು ತಲೆ ಎತ್ತಿದೆ.












Click it and Unblock the Notifications