ಈಜಿಪುರ ಮೇಲ್ಸೇತುವೆ ನಿರ್ಮಾಣ ವಿಳಂಬ; ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸಿ: HC
ಬೆಂಗಳೂರು, ಫೆಬ್ರವರಿ 17: ಕೋರಮಂಗಲದ ಕೇಂದ್ರೀಯ ಸದನ ಮತ್ತು ಈಜಿಪುರ ನಡುವೆ ಸಂಪರ್ಕ ಕಲ್ಪಿಸುವ ಈಜೀಪುರ ಮೇಲುಸೇತುವೆ ನಿರ್ಮಾಣ ಕಾರ್ಯ ವಿಳಂಬದ ಹಿನ್ನೆಲೆಯಲ್ಲಿ ಹೈಕೋರ್ಟ್ ಯೋಜನೆಯ ಗುತ್ತಿಗೆದಾರ ಸಂಸ್ಥೆ ಮೆಸರ್ಸ್ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ವಿರುದ್ಧ ಎಫ್ ಐಆರ್ ಹೂಡುವಂತೆ ಬಿಬಿಎಂಪಿ ಆದೇಶಿಸಿದೆ.
ಅಲ್ಲದೆ, ಯೋಜನೆಯ ಟೆಂಡರ್ ರದ್ದು ಮಾಡಲು ಅನುಮತಿ ಕೋರಿ ಬೆಂಗಳೂರು ಮಹಾನಗರ ಪಾಲಿಕೆ ಸಲ್ಲಿಸಿರುವ ಮನವಿಯನ್ನು ಸರ್ಕಾರ ಒಂದು ವಾರದಲ್ಲಿ ಪರಿಗಣಿಸಿ ಗುತ್ತಿಗೆ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದೆ.
ಕೋರಮಂಗಲದ ವಾಸಿ ಆದಿನಾರಾಯಣಶೆಟ್ಟಿ ಸಲ್ಲಿಸಿದ್ದ ಪಿಐಎಲ್ ಕುರಿತು ಸಿಜೆ ರಿತುರಾಜ್ ಅವಸ್ಥಿ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯಪೀಠ ವಿಚಾರಣೆ ನಡೆಸಿತು.

ಆಗ ಪಾಲಿಕೆ ಪರ ವಕೀಲರು, ಕಾಮಗಾರಿ ಪೂರ್ಣಗೊಳಿಸಲು ವಿಳಂಬ ಮಾಡಿದ ಗುತ್ತಿಗೆದಾರ ಸಂಸ್ಥೆಗೆ 2 ಬಾರಿ ನೋಟಿಸ್ ನೀಡಲಾಗಿತ್ತು. ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸದಿದ್ದರೆ ಗುತ್ತಿಗೆ ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಆದರೆ ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಗುತ್ತಿಗೆ ರದ್ದುಪಡಿಸಲು ಸರ್ಕಾರದ ಅನುಮತಿ ಕೋರಿ ಪತ್ರ ಬರೆಯಲಾಗಿದೆ ಎಂದರು.
ಆಗ ನ್ಯಾಯಪೀಠ, ಪಾಲಿಕೆಗೆ ಗುತ್ತಿಗೆ ರದ್ದುಪಡಿಸುವ ಅಧಿಕಾರವಿಲ್ಲವೇ ಎಂದು ಪ್ರಶ್ನಿಸಿತು. ಅದಕ್ಕೆ ಪಾಲಿಕೆ ವಕೀಲರು, ಇಲ್ಲ ಸರ್ಕಾರದ ಅನುಮತಿ ಬೇಕೆಂದರು.
ಪಾಲಿಕೆ ಆಯುಕ್ತರಿಗೆ ತರಾಟೆ: ಕಳೆದ ವಿಚಾರಣೆ ವೇಳೆ ನ್ಯಾಯಪೀಠ, ಕಾಮಗಾರಿ ವಿಳಂಬಕ್ಕೆ ಪಾಲಿಕೆ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೆ, ಯಾವ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದೆಂಬ ಬಗ್ಗೆ ಒಂದು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು, ಇಲ್ಲವೇ ಆಯುಕ್ತರೇ ಖುದ್ದು ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.

ಅಲ್ಲದೆ, ಪಾಲಿಕೆ ಕಾಮಗಾರಿ ವಿಳಂಬಕ್ಕೆ ಹಲವು ಕಾರಣಗಳನ್ನು, ನೆಪಗಳನ್ನು ಹೇಳುತ್ತಾ ತನ್ನ ಕಾರ್ಯವೈಖರಿಯನ್ನು ಸಮರ್ಥಿಸಿಕೊಳ್ಳುತ್ತಿದೆ. ಪಾಲಿಕೆಯ ಉತ್ತರದಿಂದ ಕಿಂಚಿತ್ತೂ ತೃಪ್ತಿಯಾಗಿಲ್ಲ ಎಂದು ಹೇಳಿತು.
ಪಾಲಿಕೆ ಆಯುಕ್ತರ ವಿರುದ್ಧ ಕಿಡಿಕಾರಿದ್ದ ನ್ಯಾಯಪೀಠ ''ಅವರಿಗೆ ಕೆಲಸ ಮಾಡಲು ಆಗದಿದ್ದರೆ ಆಯುಕ್ತರ ಹುದ್ದೆಯನ್ನು ತ್ಯಜಿಸಲು ಹೇಳಿ ಬೇರೆ ಸಮರ್ಥ ಅಧಿಕಾರಿಗಳು ಬರುತ್ತಾರೆ. ಇಷ್ಟು ದಿನ ಯೋಜನೆ ವಿಳಂಬವಾದರೂ ಪಾಲಿಕೆ ಆಯುಕ್ತರು ಏನು ಮಾಡುತ್ತಿದ್ದಾರೆ,'' ಎಂದು ಖಾರವಾಗಿ ಪ್ರಶ್ನಿಸಿತು.
2019ರ ನವೆಂಬರ್‌ನಲ್ಲಿ ಮುಗಿಯಬೇಕಿದ್ದ ಕಾಮಗಾರಿ:
ನಿಗದಿಯಂತೆ 2019ರ ನವೆಂಬರ್ ತಿಂಗಳಲ್ಲಿ ಮೇಲು ಸೇತುವೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಆ ಅವಧಿ ಮುಗಿದು ಇಷ್ಟು ವರ್ಷವಾದರೂ ಪೂರ್ಣಗೊಂಡಿಲ್ಲ. ಬಿಬಿಎಂಪಿ ಇಲ್ಲ ಸಲ್ಲದ ಕಾರಣಗಳನ್ನು ಹೇಳುತ್ತಿವೆ, ಆ ಅಡ್ಡಿಗಳ ಬಗ್ಗೆ ಮೊದಲೇ ಅದಕ್ಕೆ ತಿಳಿದಿರಲಿಲ್ಲವೇ? ಹಾಗಿದ್ದಾರೆ ಸಾರ್ವಜನಿಕ ಕೋಟ್ಯಂತರ ರೂ. ಹಣ ವ್ಯಯ ಮಾಡಿ ಏಕೆ ಕಾಮಗಾರಿ ಆರಂಭಿಸಬೇಕಿತ್ತು ಎಂದು ನ್ಯಾಯಪೀಠ ಪ್ರಶ್ನಿಸಿತು.
ಕಾಮಗಾರಿ ವಿಳಂಬ ಮಾಡಿರುವುದಕ್ಕೆ ಮೇಲುಸೇತುವೆ ನಿರ್ಮಾಣ ಗುತ್ತಿಗೆ ಪಡೆದಿರುವ ಮೆಸರ್ಸ್ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ಗೆ ದಂಡ ವಿಧಿಸಲಾಗಿದೆ. ಸದ್ಯ ಶೇ.44ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇದರಿಂದಾಗಿ ಆ ಭಾಗದಲ್ಲಿ ಸಾರ್ವಜನಿಕರಿಗೆ ಭಾರಿ ತೊಂದರೆಯಾಗುತ್ತಿದೆ.
2.5 ಕಿ.ಮೀ. ಉದ್ದದ ಮೇಲು ಸೇತುವೆಯು ಒಟ್ಟು 81 ಕಂಬಗಳನ್ನು ಒಳಗೊಂಡಿದೆ. 7 ಜಂಕ್ಷನ್‌ಗಳು ಬರಲಿವೆ. ಸೋನಿ ವಲ್ಡ್ ಜಂಕ್ಷನ್ ಮೂಲಕ ಇಂದಿರಾನಗರ, ಕೇಂದ್ರೀಯ ಸದನ, ವಿವೇಕನಗರ, ಜಕ್ಕಸಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಇದರ ಮೂಲಕ ಹಾದು ಹೋಗುತ್ತವೆ. ಕೇಂದ್ರೀಯ ಸದನ ಜಂಕ್ಷನ್ ಮೂಲಕ ತಾವರೆಕರೆ, ಎಂ.ಜಿ.ರಸ್ತೆ, ಹೊಸೂರು ರಸ್ತೆ, ಅಗರ, ಬಿಟಿಎಂ ಲೇಔಟ್, ಕೋರಮಂಗಲ, ಬಿಡಿಎ ಕಾಂಪ್ಲೆಕ್ಸ್, ಸರ್ಜಾಪುರ ಮುಖ್ಯರಸ್ತೆ ಹಾಗೂ ವಿವೇಕನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾದು ಹೋಗುತ್ತವೆ.












Click it and Unblock the Notifications