ಉಕ್ರೇನ್‌ನಲ್ಲಿ ಮೃತ ಪಟ್ಟಿರುವ ನವೀನ್ ಕುಟುಂಬಕ್ಕೆ ಪರಿಹಾರ: ಸಿಎಂ
ಬೆಂಗಳೂರು, ಮಾರ್ಚ್ 02: ಉಕ್ರೇನ್‌ನಲ್ಲಿ ರಷ್ಯಾ ದಾಳಿಗೆ ಸಾವನ್ನಪ್ಪಿದ ಕರ್ನಾಟಕದ ಹಾವೇರಿ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರಲು ಸರ್ಕಾರ ತುರ್ತು ಕಾರ್ಯಗಳನ್ನು ನಡೆಸುತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು. ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನವೀನ್ ಕುಟುಂಬಕ್ಕೆ ಬೇಕಾದ ಸಹಾಯ ಮತ್ತು ಸಹಕಾರ ನಾವು ನೀಡಲಿದ್ದೇವೆ ಎಂದಿದ್ದಾರೆ.
ಇಂದು ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೀನ್ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರುವುದು ಮೊದಲ ಆಧ್ಯತೆಯಾಗಿದೆ ಎಂದರು. ಉಕ್ರೇನ್‌ನಲ್ಲಿ ಶೆಲ್ ದಾಳಿಯಿಂದಾಗಿ ನವೀನ್ ಮೃತಪಟ್ಟಿರುವುದು ಖಾತ್ರಿಯಾಗಿದೆ. ಜೊತೆಗೆ ನವೀನ್ ಅವರೊಂದಿಗಿದ್ದ ಸ್ನೇಹಿತರು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನವೀನ್ ಬಟ್ಟೆಗೆ ಹೋಲುವ ಕೆಲವು ಚಿತ್ರಗಳು ಕಂಡುಬಂದಿವೆ. ಈ ಬಗ್ಗೆ ವಿದೇಶಾಂಗ ಸಚಿವರೊಂದಿಗೆ ಹಾಗೂ ಉಕ್ರೇನಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೂ ಮಾತನಾಡಿ ನವೀನ್ ಪಾರ್ಥಿವ ಶರೀರವನ್ನು ಪಡೆಯಲು ಗಂಭೀರ ಪ್ರಯತ್ನ ಮಾಡಲಾಗುವುದು ಎಂದರು.
ಈ ವೇಳೆ ಉಕ್ರೇನ್‍ನ ಕರ್ಕೀವ್ ಪಟ್ಟಣದಲ್ಲಿ ರಕ್ಷಾ ಕ್ಷಿಪಣಿಗೆ ಸಾವನ್ನಪ್ಪಿರುವ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನವೀನ್ ಗ್ಯಾನಗೌಡರ್ ಕುಟುಂಬಕ್ಕೆ ಖಂಡಿತವಾಗಿಯೂ ಸರ್ಕಾರ ಪರಿಹಾರವನ್ನು ನೀಡಲಿದೆ. ಇದರ ಬಗ್ಗೆ ಯಾರಿಗೂ ಕೂಡ ಅನುಮಾನ ಬೇಡ ಎಂದು ತಿಳಿಸಿದರು.

ಪರಿಹಾರ ಕೊಡುವುದು ಸರ್ಕಾರದ ಕೈಯಲ್ಲಿದೆ. ಅದು ಕೂಡ ನನ್ನ ಗಮನದಲ್ಲೇ ಇದೆ. ಕುಟುಂಬಸ್ಥರ ಒತ್ತಾಸೆಯಂತೆ ಮೃತದೇಹವನ್ನು ತರಲು ನಮ್ಮ ಪ್ರಯತ್ನಗಳು ಮುಂದುವರೆದಿದೆ ಎಂದರು. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್, ವಿದೇಶಾಂಗ ವ್ಯವಹಾಗಳ ಇಲಾಖೆ ಕಾರ್ಯದರ್ಶಿ, ಉಕ್ರೇನ್ ಮತ್ತು ರಷ್ಯಾದಲ್ಲಿರುವ ರಾಯಭಾರ ಕಚೇರಿ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಮೃತದೇಹವನ್ನು ಭಾರತಕ್ಕೆ ತರಲು ನಾವು ಶಕ್ತಿಮೀರಿ ಪ್ರಯತ್ನವನ್ನು ಮಾಡುತ್ತಿದ್ದೇವೆ. ಉಕ್ರೇನ್‍ನಲ್ಲಿ ಪರಿಸ್ಥಿತಿ ಕೈ ಮೀರುತ್ತಿರುವುದರಿಂದ ವಿಳಂಬವಾಗಿದೆ. ಆದರೂ ನಮ್ಮ ಪ್ರಯತ್ನ ನಿಂತಿಲ್ಲ ಎಂದು ಸ್ಪಷ್ಟಪಡಿಸಿದರು.
ಭಾರತ ಸರ್ಕಾರ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ತೆರವು ಮಾಡಲು ತೀವ್ರ ಪ್ರಯತ್ನ ಮಾಡುತ್ತಿದೆ. ಸುಮಾರು 26 ವಿಮಾನಗಳು ಮುಂದಿನ 2-3 ದಿನಗಳಲ್ಲಿ ಕರೆತರುತ್ತಿದ್ದು, ಈ ಪೈಕಿ ಕನ್ನಡಿಗರನ್ನು ಕರೆತರಲು ಗರಿಷ್ಠ ಪ್ರಯತ್ನ ಮಾಡಲಾಗುವುದು. ಬೇರೆ ಬೇರೆ ನಗರಗಳಲ್ಲಿ ಇರುವವರನ್ನು ಬೇರೆ ಬೇರೆ ದಿಕ್ಕಿನಲ್ಲಿ ಬರಲು ತಿಳಿಸಲಾಗಿದೆ.
ಯುದ್ಧ ನಡೆಯುತ್ತಿರುವುದರಿಂದ ಸ್ವಲ್ಪ ಕಷ್ಟವಾಗಿದೆ. ಭಾರತ ಸರ್ಕಾರ ಉಕ್ರೇನ್ ಸರ್ಕಾರದೊಂದಿಗೆ ಮಾತನಾಡಿ ಸುರಕ್ಷಿತ ವಲಯಗಳಿಗೆ ಹೇಗೆ ಹೋಗಬೇಕೆನ್ನುವುದನ್ನು ಯೋಜಿಸಿ ಗುಂಪಿನಲ್ಲಿ ತೆರಳಲು ನಿರ್ದೇಶನ ನೀಡಿದೆ. ಹತ್ತಿರದ ರೈಲ್ವೆ ನಿಲ್ದಾಣದಲ್ಲಿ ಪಶ್ಚಿಮ ದಿಕ್ಕಿನತ್ತ ಬರಲು ಯೋಜಿಸಿದೆ. ಯುದ್ಧ ಭೂಮಿಯಿಂದ ಕನ್ನಡಿಗರನ್ನು ಹೊರತರುವ ಪ್ರಯತ್ನ ನಡೆದಿದೆ. ನವೀನ್ ಜೊತೆಗಿದ್ದ ಗಾಯಾಳು ವಿದ್ಯಾರ್ಥಿಯ ಸ್ಥಿತಿಗತಿಯ ಬಗ್ಗೆ ವಿಚಾರಣೆ ನಡೆದಿದೆ. ಒಂದು ವರದಿಯ ಪ್ರಕಾರ ಜೊತೆಗಿದ್ದ ಎಂದು, ಮತ್ತೊಂದರ ಪ್ರಕಾರ ಇರಲಿಲ್ಲ. ಸುರಕ್ಷಿತವಾಗಿದ್ದಾನೆ ಎಂಬ ಮಾಹಿತಿಗಳಿವೆ. ಈ ಬಗ್ಗೆ ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದರು.
ಉಕ್ರೇನ್‍ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲು ಸರ್ಕಾರ ಎಲ್ಲ ಪ್ರಯತ್ನ ಮುಂದುವರೆಸಲಾಗಿದೆ. ಯಾವ ಭಾಗದಲ್ಲಿ ಕನ್ನಡಿಗರು ಹೆಚ್ಚಾಗಿದ್ದಾರೋ ಅಂತಹ ಕಡೆಯಿಂದ ಅವರೆಲ್ಲರನ್ನೂ ಸ್ಥಳಾಂತರ ಮಾಡಲು ಮನವಿ ಮಾಡಿರುವುದಾಗಿ ತಿಳಿಸಿದರು. ಕರ್ಕೀವ್ ಸೇರಿದಂತೆ ಬೇರೆ ಬೇರೆ ಭಾಗಗಳಲ್ಲಿ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ರೈಲು, ಬಸ್, ರಸ್ತೆ ಮೂಲಕವೂ ಸುರಕ್ಷಿತ ಸ್ಥಳಗಳಿಗೆ ಅವರೆಲ್ಲರನ್ನೂ ಕರೆತರುವ ಪ್ರಯತ್ನ ನಡೆಯುತ್ತಿದೆ.
ಕೇಂದ್ರ ಸರ್ಕಾರ ಉಕ್ರೇನ್ ಸರ್ಕಾರದ ಜೊತೆ ಮಾತುಕತೆ ನಡೆಸಿ ಸುರಕ್ಷಿತ ವಲಯಗಳಿಗೆ ಸ್ಥಳಾಂತರ ಮಾಡುತ್ತಿದೆ. ಯುದ್ದ ವಲಯವಾಗಿರುವುದರಿಂದ ಭಾರತೀಯರನ್ನು ಸ್ಥಳಾಂತರ ಮಾಡುವುದು ವಿಳಂಬವಾಗುತ್ತಿದೆ ಎಂದರು. ಇಂದು ನನಗೆ ಅಲ್ಲಿಂದ ಕೆಲವರು ನವೀನ್ ಅವರ ಪೋಟೊವನ್ನು ಕಳುಹಿಸಿಕೊಟ್ಟಿದ್ದರು. ಇದು ಅವನದೇ ಮೃತದೇಹ ಎಂಬುದು ದೃಢಪಟ್ಟಿದೆ. ನವೀನ್ ಜೊತೆಗಿದ್ದ ಸ್ನೇಹಿತರು ಕೂಡ ಇದನ್ನು ಖಚಿತಪಡಿಸಿದ್ದಾರೆ. ಸದ್ಯ ಮೃತದೇಹವನ್ನು ಸುರಕ್ಷಿತವಾಗಿಡುವ ಕಾರ್ಯ ಮುಂದುವರೆದಿದೆ ಎಂದರು.












Click it and Unblock the Notifications