ED Raid; 960 ಕೋಟಿ ರೂ. ಅಕ್ರಮ ಆರೋಪ, ಬಿಬಿಎಂಪಿ ಕೇಂದ್ರ ಕಛೇರಿ ಮೇಲೆ ಇಡಿ ದಾಳಿ
ಬೆಂಗಳೂರು, ಜನವರಿ 07: ಬೆಂಗಳೂರು ನಗರದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೇಂದ್ರ ಕಛೇರಿ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. 7 ಅಧಿಕಾರಿಗಳ ತಂಡ ಅಕ್ರಮ ಆರೋಪವೊಂದರ ಸಂಬಂಧ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ.
ಕೊಳವೆ ಬಾವಿ ಕೊರೆಯುವ ಸಂಬಂಧ ಕೇಳಿ ಬಂದಿರುವ 960 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿರುವ ಮುಖ್ಯ ಇಂಜಿನಿಯರ್ ಕಛೇರಿ ಮೇಲೆ ದಾಳಿಯನ್ನು ಮಾಡಲಾಗಿದೆ. 2016ರಲ್ಲಿ ನಡೆದ ಅಕ್ರಮ ಇದು ಎಂಬ ಮಾಹಿತಿ ಸದ್ಯಕ್ಕೆ ಸಿಕ್ಕಿದೆ.

2016 ರಿಂದ 2019ರ ತನಕ ನಡೆದಿರುವ ವೈಟ್ ಟಾಪಿಂಗ್ ಅಕ್ರಮ, ಕೊಳವೆ ಬಾವಿ ಕೊರೆಯುವ ಸಂಬಂಧ ನಡೆದಿದೆ ಎನ್ನಲಾಗಿರುವ ಅಕ್ರಮ ಸಂಬಂಧ ಇಡಿ ತನಿಖೆಯನ್ನು ನಡೆಸುತ್ತಿದೆ. ಆದ್ದರಿಂದ ಮಂಗಳವಾರ 7 ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ತನಿಖೆಗೆ ಸಹಕಾರ: ಇಡಿ ದಾಳಿ ಕುರಿತು ಬಿಬಿಎಂಪಿ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ಪ್ರತಿಕ್ರಿಯೆ ನೀಡಿದ್ದು,"ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಅವರಿಗೆ ಅಗತ್ಯ ಮಾಹಿತಿ ನೀಡಿ, ತನಿಖೆಗೆ ಸಹಕಾರ ನೀಡಲಾಗುತ್ತಿದೆ" ಎಂದು ಹೇಳಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಇಡಿಯ 7 ಅಧಿಕಾರಿಗಳ ತಂಡ ಬೆಳಗ್ಗೆ 11 ಗಂಟೆಯಿಂದ ಬಿಬಿಎಂಪಿ ಕೇಂದ್ರ ಕಚೇರಿಯ ಮುಖ್ಯ ಇಂಜಿನಿಯರ್ ಕಛೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದೆ. ವೈಟ್ ಟಾಪಿಂಗ್ ಅಕ್ರಮ, ಕೊಳವೆ ಬಾವಿ ಕೊರೆಯುವ ಸಂಬಂಧ ನಡೆದಿದೆ ಎನ್ನಲಾಗಿರುವ ಅಕ್ರಮ ಸಂಬಂಧ 2021ರಲ್ಲಿ ಇಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳಿಲ್ಲ. 2020ರ ಸೆಪ್ಟೆಂಬರ್‌ನಿಂದ ಬಿಬಿಎಂಪಿಯಲ್ಲಿ ಅಧಿಕಾರಿಗಳ ಆಡಳಿತ ನಡೆಯುತ್ತಿದೆ. ಆಡಳಿತಾಧಿಕಾರಿ, ಮುಖ್ಯ ಆಯುಕ್ತರು ಆಡಳಿತವನ್ನು ನಡೆಸುತ್ತಿದ್ದಾರೆ. 2022ರಲ್ಲಿ ಇಡಿ ಬಿಬಿಎಂಪಿ ಅಧಿಕಾರಿಗಳಿಗೆ ಈ ಅಕ್ರಮ ಆರೋಪದ ಕುರಿತು ವಿಚಾರಣೆಗೆ ನೋಟಿಸ್ ನೀಡಿತ್ತು. ಈಗ ಮುಂದುವರೆದ ಭಾಗವಾಗಿ ದಾಳಿಯನ್ನು ಮಾಡಲಾಗಿದೆ.
ಮಾಹಿತಿಗಳ ಪ್ರಕಾರ ಬಿಬಿಬಿಎಂಪಿ 1147 ಕೋಟಿ ರೂ. ವೆಚ್ಚದಲ್ಲಿ 93.37 ಕಿ. ಮೀ., 758.56 ಕೋಟಿ ರೂ. ವೆಚ್ಚದಲ್ಲಿ 62.80 ಕಿ. ಮೀ. ಹಾಗೂ 1139 ಕೋಟಿ ರೂ. ವೆಚ್ಚದಲ್ಲಿ 123 ಕಿ. ಮೀ. ರಸ್ತೆಯನ್ನು ವೈಟ್ ಟಾಪಿಂಗ್ ಮಾಡಲಾಗಿದೆ.
ನಗರದಲ್ಲಿ 9,588 ಕೊಳವೆ ಬಾವಿ, 976 ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದರು. ಆದರೆ ಇದರಲ್ಲಿ ಅಕ್ರಮ ನಡೆದಿದೆ ಎಂಬುದು ಆರೋಪವಾಗಿದೆ.
ಆರ್‌ಟಿಐ ಕಾರ್ಯಕರ್ತ, ಬಿಜೆಪಿ ಮುಖಂಡ ಎನ್. ಆರ್. ರಮೇಶ್ 2019ರಲ್ಲಿ ಈ ಕುರಿತು ದಾಖಲೆ ಸಹಿತ ಲೋಕಾಯುಕ್ತಕ್ಕೆ ದೂರು ನೀಡಿದ್ದರು. 2016 ರಿಂದ 2018ರ ತನಕ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಆಯುಕ್ತರು, 5 ಜಂಟಿ ಆಯುಕ್ತರು, 5 ಮುಖ್ಯ ಇಂಜಿನಿಯರ್, 40ಕ್ಕೂ ಅಧಿಕ ಅಧಿಕಾರಿಗಳನ್ನು ದೂರಿನಲ್ಲಿ ಉಲ್ಲೇಖಿಸಿದ್ದರು. ಈಗ ಈ ಕುರಿತು ಇಡಿ ತನಿಖೆ ಕೈಗೊಂಡಿದ್ದು, ಬಿಬಿಎಂಪಿ ಕೇಂದ್ರ ಕಛೇರಿ ಮೇಲೆ ದಾಳಿ ಮಾಡಲಾಗಿದೆ.












Click it and Unblock the Notifications