ಬೆಂಗಳೂರು: ತಿಂಗಳಿಗೆ 2 ಲಕ್ಷ ಸಂಬಳ, ಒಂದು ಚೂರು ಸಾಲ ಇಲ್ಲ! ಆದರೂ ಈ ಯುವಕನಿಗೆ ತಾನು ಬಡವ ಎಂಬ ಕೊರಗಂತೆ

ಬೆಂಗಳೂರು: ತಿಂಗಳಿಗೆ ಬರೋಬ್ಬರಿ 2 ಲಕ್ಷ ರೂಪಾಯಿ ಸಂಬಳ, ತಲೆಮೇಲೆ ಬಿಡಿಗಾಸಿನ ಸಾಲವೂ ಇಲ್ಲ, ಆದರೆ ಉತ್ತಮ ಭವಿಷ್ಯದ ಕನಸುಗಳಿವೆ ಅಷ್ಟೇ ನೋಡಿ. ಆದರೂ ಈ ಯುವಕನಿಗೆ ತಾನು 'ಬಡವ' ಎಂಬ ಭಾವನೆ ಕಾಡುತ್ತಿದೆಯಂತೆ. ಹೌದು, ಬೆಂಗಳೂರಿನ 26 ವರ್ಷದ ಯುವಕನೊಬ್ಬ ರೆಡ್ಡಿಟ್ ಜಾಲತಾಣದಲ್ಲಿ ಹಂಚಿಕೊಂಡಿರುವ ತನ್ನ ಆರ್ಥಿಕ ಸ್ಥಿತಿ ಕುರಿತ ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.

ಇತ್ತೀಚಿನ ದಿನಗಳಲ್ಲಿ ಜನರಿಗೆ ತಾವೂ ಎಷ್ಟೇ ಹಣ ಸಂಪಾದಿಸಿದರೂ ಸಾಕಾಗುತ್ತಿಲ್ಲ. ಇದರ ಜೊತೆಗೆ ಅವರ ನೆಮ್ಮದಿ ಕೂಡ ಕಣ್ಮರೆಯಾಗಿ ಹೋಗುತ್ತಿದೆ ಎಂಬುದಕ್ಕೆ ಈ ಯುವಕನ ಕಥೆಯೇ ಒಂದು ಒಳ್ಳೆಯ ಉದಾಹರಣೆ. ಉತ್ತಮ ಸಂಬಳ, ಸಾಲದ ಹೊರೆಯಿಲ್ಲ ಆದ್ರೂ ಕೂಡ ಭವಿಷ್ಯದ ಆತಂಕ ಯುವಜನತೆಯನ್ನ ಹೇಗೆ ಕಾಡುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ.

Earning

ತನ್ನ ಹಿನ್ನೆಲೆ ಬಗ್ಗೆ ಎಳೆಎಳೆಯಾಗಿ ಬರೆದುಕೊಂಡಿರುವ ಈ ಯುವಕ, " 21ನೇ ವಯಸ್ಸಿಗೆ ನಾನು ನನ್ನ ಮೊದಲ ಉದ್ಯೋಗ ಗಿಟ್ಟಿಸಿಕೊಳ್ಳುವವರೆಗೂ ನಮ್ಮ ಕುಟುಂಬದ ಮಾಸಿಕ ಆದಾಯ ಕೇವಲ 6 ರಿಂದ 7 ಸಾವಿರ ರೂಪಾಯಿ ಮಾತ್ರ ಇತ್ತು. 10x10 ಅಳತೆಯ ಸಣ್ಣ ಕೋಣೆಯಲ್ಲಿ ಇಡೀ ಕುಟುಂಬ ವಾಸವಿದ್ದೆವು. ಈ ಬಡತನದಿಂದ ಹೊರಬರುವುದೇ ನನ್ನ ಪ್ರಮುಖ ಗುರಿಯಾಗಿತ್ತು. 2021ರಲ್ಲಿ ಕೆಲಸ ಸಿಕ್ಕ ಬಳಿಕ ಪೋಷಕರು ದುಡಿಯುವುದನ್ನ ತಪ್ಪಿಸಿ, ಅವರಿಗೆ ವಿಶ್ರಾಂತಿ ನೀಡಿದ್ದೇನೆ. ಊರಿನಲ್ಲಿ ಅವರಿಗೆ 2 ಬಿಎಚ್‌ಕೆ ಮನೆ ಮಾಡಿಕೊಟ್ಟಿದ್ದು, ನಾನು ಬೆಂಗಳೂರಿನ 2 ಬಿಎಚ್‌ಕೆ ಮನೆಯಲ್ಲಿ ವಾಸವಿದ್ದೇನೆ" ಎಂದು ತಿಳಿಸಿದ್ದಾನೆ.

ತಿಂಗಳ ಉಳಿತಾಯದ ಲೆಕ್ಕಾಚಾರ

ತನ್ನ ಹಣಕಾಸು ನಿರ್ವಹಣೆಯ ಲೆಕ್ಕಾಚಾರವನ್ನ ಬಿಚ್ಚಿಟ್ಟಿರುವ ಈ ಯುವಕ, ಪ್ರತಿ ತಿಂಗಳು 30,000 ರೂ. ಮ್ಯೂಚುವಲ್ ಫಂಡ್‌, 10,000 ರೂ. ಎಫ್‌ಡಿ (FD) ಮತ್ತು ಆರ್‌ಡಿ (RD), 10,000 ರೂ. ಚಿನ್ನದ ಉಳಿತಾಯ ಯೋಜನೆಗೆ ಹೂಡಿಕೆ ಮಾಡುತ್ತಿದ್ದಾನೆ. ಇದಲ್ಲದೆ 15-20 ಸಾವಿರ ರೂ. ಹಣವನ್ನು ಪೋಷಕರಿಗೆ ಕಳುಹಿಸುತ್ತಾನೆ. ಮನೆ ಬಾಡಿಗೆ ಸೇರಿ ಆತನ ಜೀವನ ನಿರ್ವಹಣೆಗೆ 25,000 ರೂ. ಖರ್ಚಾಗುತ್ತಿದೆ.

ಪ್ರಸ್ತುತ 4 ಲಕ್ಷ ರೂ. ಷೇರು, 2 ಲಕ್ಷ ರೂ. ಎಫ್‌ಡಿ, 2.5 ಲಕ್ಷ ರೂ. ಚಿನ್ನ ಹಾಗೂ ಬ್ಯಾಂಕ್ ಖಾತೆಯಲ್ಲಿ 6 ಲಕ್ಷ ರೂ. ಉಳಿತಾಯ ಮಾಡಿದ್ದಾನೆ. ಪೋಷಕರಿಗೆ ಆರೋಗ್ಯ ವಿಮೆ, ಮನೆಗೆ ಅಗತ್ಯ ವಸ್ತುಗಳು, ಸ್ಕೂಟರ್, ಮ್ಯಾಕ್‌ಬುಕ್ ಖರೀದಿಸಿದ್ದರೂ ಆತನಿಗೆ ತಾನು ಶ್ರೀಮಂತ ಅಥವಾ ಆರ್ಥಿಕವಾಗಿ ಸದೃಢ ಎಂಬ ಭಾವನೆಯೇ ಬರುತ್ತಿಲ್ಲವಂತೆ.

ಸ್ನೇಹಿತರ ಜೀವನಶೈಲಿ

"ಈ ವರ್ಷ ನನ್ನ ಮದುವೆ ನಿಗದಿಯಾಗಿದ್ದು, ಕನಿಷ್ಠ 10 ಲಕ್ಷ ರೂ. ಖರ್ಚಾಗುವ ನಿರೀಕ್ಷೆಯಿದೆ. ಇದರ ಜೊತೆಗೆ ಸೆಕೆಂಡ್ ಹ್ಯಾಂಡ್ ಕಾರು, ಊರಲ್ಲಿ ನಿವೇಶನ ಹಾಗೂ ಬೈಕ್ ಖರೀದಿಸುವ ಕನಸಿದೆ. ಆದರೆ ಒಂದೇ ಬಾರಿಗೆ ಇವೆಲ್ಲವನ್ನೂ ಭರಿಸಲು ಸಾಧ್ಯವಿಲ್ಲ ಎಂಬ ಆತಂಕ ನನ್ನನ್ನು ಕಾಡುತ್ತಿದೆ. ಊರಿನಲ್ಲಿ ದಿನಗೂಲಿ ಮಾಡುವ, ಆಟೋ ಓಡಿಸುವ ನನ್ನ ಸ್ನೇಹಿತರು ನನಗಿಂತ ಹೆಚ್ಚು ಖುಷಿಯಾಗಿದ್ದಾರೆ. ಸಾಲ ಮಾಡಿಯಾದರೂ ಪಲ್ಸರ್, ಆರ್‌15 ಬೈಕ್ ಖರೀದಿಸಿ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಆದರೆ ನಾನು ಆರ್ಥಿಕ ಸಾಕ್ಷರತೆ ಹೊಂದಿರುವುದರಿಂದ ಸಾಲ ಮಾಡಲು ಇಷ್ಟಪಡಲಿಲ್ಲ. ಆದರೂ, ನನ್ನ ಬಳಿ ಹಣವಿದ್ದರೂ ಕೇವಲ 750 ರೂ. ಕೊಟ್ಟು ಒಂದು ಒಳ್ಳೆಯ ಶರ್ಟ್ ಖರೀದಿಸಲೂ ನನಗೆ ಭಯವಾಗುತ್ತದೆ" ಎಂದು ತನ್ನ ಅಳಲು ತೋಡಿಕೊಂಡಿದ್ದಾನೆ.

ರೆಡ್ಡಿಟ್ ಬಳಕೆದಾರರ ಪ್ರತಿಕ್ರಿಯೆ

ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. "ಬಾಲ್ಯದಲ್ಲಿ ಅನುಭವಿಸಿದ ಬಡತನದ ಪರಿಣಾಮ ಇದು. ಒಮ್ಮೆ ಬಡತನ ಕಂಡವರಿಗೆ ಆರ್ಥಿಕ ಭದ್ರತೆ ಸಿಕ್ಕರೂ, ಮತ್ತೆ ಆ ಪರಿಸ್ಥಿತಿಗೆ ಮತ್ತೆ ಎಲ್ಲಿ ಜಾರುತ್ತೇವೆಯೇನೋ ಎಂಬ ಭಯ ಕಾಡುತ್ತಲೇ ಇರುತ್ತದೆ. ನೀವು ಈಗಾಗಲೇ ಬಹಳಷ್ಟು ಸಾಧಿಸಿದ್ದೀರಿ. ಅತಿಯಾಗಿ ಯೋಚಿಸಿ ಇರುವ ಖುಷಿಯನ್ನು ಹಾಳುಮಾಡಿಕೊಳ್ಳಬೇಡಿ" ಎಂದು ಹಲವರು ಸಲಹೆ ನೀಡಿದ್ದಾರೆ. "ಇದೊಂದು ಸ್ಯಾಂಡ್‌ವಿಚ್ ತಲೆಮಾರಿನ ಸಮಸ್ಯೆ. ನೀವು ಉತ್ತಮ ಸಂಪಾದನೆ ಮಾಡುತ್ತಿದ್ದರೂ ಆಸ್ತಿ ಇಲ್ಲದಿರುವುದು ನಿಮ್ಮನ್ನ ಕಾಡುತ್ತಿದೆ. ಆಸ್ತಿ ಸಂಪಾದನೆಗೆ ಸಮಯ ಹಿಡಿಯುತ್ತದೆ, ತಾಳ್ಮೆ ಇರಲಿ" ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+