E-Khata & Tax Pay: ಇ - ಖಾತಾ, ಆಸ್ತಿ ತೆರಿಗೆ ಪಾವತಿ ಗೊಂದಲಗಳಿಗೆ ಇನ್ಮುಂದೆ ಸುಲಭವಾಗಿ ಸಿಗಲಿದೆ ಪರಿಹಾರ!
ಬೆಂಗಳೂರಿನಲ್ಲಿ ಕಂದಾಯ (ರೆವಿನ್ಯೂ)ಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬಿಬಿಎಂಪಿಯು ಹೊಸ ಕ್ರಮವನ್ನು ತೆಗೆದುಕೊಂಡಿದೆ. ಇದರಿಂದ ಮುಂದಿನ ದಿನಗಳಲ್ಲಿ ರೆವಿನ್ಯೂಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ಬಿಬಿಎಂಪಿ (ಬೃಹತ್ ಬೆಂಗಳೂರು ಮಾಹನಗರ ಪಾಲಿಕೆಯಲ್ಲಿ) ಪ್ರತಿ ಬುಧವಾರ ಕಂದಾಯ ಹಾಗೂ ಕುಂದು ಕೊರತೆಗಳ ಅದಾಲತ್ ನಡೆಸುವುದಕ್ಕೆ ಬಿಬಿಎಂಪಿಯು ನಿರ್ಧರಿಸಿದೆ. ಇದರ ಮೂಲಕ ಸಾರ್ವಜನಿಕರು ಆಸ್ತಿ ತೆರಿಗೆ ಪಾವತಿ ಅಥವಾ ಇ -ಖಾತಾ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಬಿಬಿಎಂಪಿ ಕಂದಾಯ ವಿಭಾಗಗಕ್ಕೆ ಸಂಬಂಧಿಸಿದ ಅಧಿಕಾರಿಗಳು ಪ್ರತಿ ಬುಧವಾರ ಕಂದಾಯ ಮತ್ತು ಕುಂದು ಕೊರತೆಗಳ ಅದಾಲತ್ ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ಮತ್ತು ಮನವಿಗಳನ್ನು ವಿಲೇವಾರಿ ಮಾಡಬೇಕು ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಆದೇಶ ಹೊರಡಿಸಿದ್ದಾರೆ.

ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ನಿರ್ದೇಶನದಂತೆ ಕಂದಾಯ ವಿಭಾಗದ ಅಧಿಕಾರಿಗಳು ಅವರವರ ಕಚೇರಿಗಳಲ್ಲಿ ಪ್ರತಿ ಬುಧವಾರ ಬೆಳಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 02.00 ಗಂಟೆಯವರೆಗೆ ಕಡ್ಡಾಯವಾಗಿ ಹಾಜರಿರಬೇಕು. ಕಂದಾಯ ಮತ್ತು ಕುಂದು ಕೊರತೆಗಳ ಅದಾಲತ್ ನಡೆಸಬೇಕು. ಈ ಅಧಿಕಾರಿಗಳನ್ನು ಯಾವುದೇ ಭೌತಿಕ ಸಭೆಗೆ ಅಥವಾ ಸಾಮಾನ್ಯ ಸಭೆಗೆ, ವರ್ಚುಯಲ್ ಸಭೆಗೆ ಕರೆಯಬಾರದು ಎಂದು ಹೇಳಲಾಗಿದೆ. ಯಾಕೆಂದರೆ ಈ ಅಧಿಕಾರಿಗಳು ಈ ಅವಧಿಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಆದ್ಯತೆ ಕೊಡಬೇಕು.
ಈ ಸಮಯದಲ್ಲಿ ಕಚೇರಿ ಸಿಬ್ಬಂದಿ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಸಾರ್ವಜನಿಕರಿಂದ ಸ್ವೀಕರಿಸುವ ಎಲ್ಲಾ ಕುಂದು ಕೊರತೆಗಳನ್ನು ಮತ್ತು ಮನವಿಗಳನ್ನು ಕಂದಾಯ ಮತ್ತು ಕುಂದು ಕೊರತೆಗಳ ಅದಾಲತ್ ನಡೆಸಿ ಶೀಘ್ರವಾಗಿ ಪರಿಹರಿಸಬೇಕು ಎಂದು ಸೂಚನೆ ನೀಡಲಾಗಿದೆ.

ಇನ್ನು ಪಾಲಿಕೆಯ ಎಲ್ಲಾ ವಲಯ ಜಂಟಿ ಆಯುಕ್ತರುಗಳು, ವಲಯ ಉಪ ಆಯುಕ್ತರುಗಳು (ಕಂದಾಯ), ಕಂದಾಯ ಅಧಿಕಾರಿಗಳು ಮತ್ತು ಸಹಾಯಕ ಕಂದಾಯ ಅಧಿಕಾರಿಗಳು ಅವರವರ ಕಚೇರಿಯಲ್ಲಿ ಕ್ಯಾಂಪ್ ಮಾಡಿ, ಸಾರ್ವಜನಿಕರಿಗೆ ಸಿಗಬೇಕು. ಕಂದಾಯ ಮತ್ತು ಕುಂದು ಕೊರತೆಗಳ ಅದಾಲತ್ ನಡೆಸಿ ಎಲ್ಲಾ ಸಾರ್ವಜನಿಕರ ಕುಂದು - ಕೊರತೆಗಳನ್ನು ಮತ್ತು ಮನವಿಗಳನ್ನು ಆಗಾಗಲೇ ಪರಿಹರಿಸಬೇಕು ಎಂದು ಹೇಳಲಾಗಿದೆ. ಅಲ್ಲದೇ
ಎಲ್ಲಾ ವಲಯ ಆಯುಕ್ತರುಗಳು ಮತ್ತು ವಲಯ ಜಂಟಿ ಆಯುಕ್ತರುಗಳು ಇದನ್ನು ಜಾರಿಗೆ ತರಬೇಕು ಅಂತ ಖಡಕ್ ವಾರ್ನಿಂಗ್ ಕೊಡಲಾಗಿದೆ. ಅಲ್ಲದೇ ಇದರ ಸಂಪೂರ್ಣ ಜವಾಬ್ದಾರಿ ವಹಿಸಬೇಕು ಅಂತಲೂ ಸೂಚನೆ ನೀಡಲಾಗಿದೆ.
ಮುಂದುವರಿದು ಪ್ರತಿ ಬುಧವಾರದಂದು ಕಂದಾಯ ಮತ್ತು ಕುಂದು ಕೊರತೆಗಳ ಅದಾಲತ್ ಕಾರ್ಯಕ್ಷಮತೆಯ ಬಗ್ಗೆ ಪ್ರತಿ ಸೋಮವಾರ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಅಧ್ಯಕ್ಷತೆಯಲ್ಲಿ ಸಕಾಲ ಮತ್ತು ಕುಂದುಕೊರತೆ ಪರಿಶೀಲನಾ ಸಭೆಯನ್ನು ನಡೆಸಲಾಗುವುದು. ಆಗ ಎಲ್ಲಾ ವಿಷಯಗಳನ್ನು ಪರಿಶೀಲನೆ ಮಾಡಲಾಗುವುದು ಎಂದು ಹೇಳಲಾಗಿದೆ.
ಇದನ್ನು ಸಾರ್ವಜನಿಕರು ಸದುಪಯೋಗ ಪಡೆಸಿಕೊಳ್ಳುವ ಮೂಲಕ ಅವರ ರೆವಿನ್ಯೂಗೆ ಸಂಬಂಧಿಸಿದ ತೆರಿಗೆ ಪಾವತಿ, ಇ - ಖಾತಾ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.












Click it and Unblock the Notifications