E Khata: ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಬಿಬಿಎಂಪಿ ಇ-ಖಾತಾ ಅಭಿಯಾನಕ್ಕೆ ವ್ಯಾಪಕ ಸ್ಪಂದನೆ
ಬೆಂಗಳೂರು, ಜುಲೈ 23: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೆಬ್ಬಾಳ ವಿಧಾನಸಭಾ ಕ್ಷೇತ್ರ, ಬಿಟಿಎಂ ಬಡಾವಣೆ ಸೇರಿದಂತೆ ವಿವಿಧೆಡೆ ಇ-ಖಾತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹೆಬ್ಬಾಳ ಆರ್.ಟಿ.ನಗರ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಇ-ಖಾತಾ ಮೇಳಕ್ಕೆ ನಗರದ ಆಸ್ತಿ ಮಾಲೀಕರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಇದೇ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕೃತ ಖಾತೆ ಪಡೆಯಲು ಮುಂದಾದರೆ, ಸರ್ಕಾರ ನಿರೀಕ್ಷಿತ ಗುರಿ ತಲುಪಲಿದೆ.
ಎರಡು ದಿನಗಳ ಇ-ಖಾತಾ ಮಳಕ್ಕೆ ಇಂದು ಬುಧವಾರ ತೆರೆ ಬೀಳಲಿದೆ. ಹೆಬ್ಬಾಳದಲ್ಲಿ ಬೃಹತ್ ಇ-ಖಾತಾ ಮೇಳ ಕಾರ್ಯಕ್ರಮದಲ್ಲಿ ಸ್ಥಳದಲ್ಲಿಯೇ ಒಂದೇ ದಿನಕ್ಕೆ 300 ಅಂತಿಮ ಇ-ಖಾತಾಗಳನ್ನು ವಿತರಿಸಲಾಯಿತು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಕಂಡು ಬಂತು ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರ ಟಿ ಶ್ರೀನಿವಾಸ ಅವರು ಮಾಹಿತಿ ನೀಡಿದ್ದಾರೆ.

ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 08 ವಾರ್ಡ್ ಗಳಿದ್ದು ಕಾರ್ಯಕ್ರಮದಲ್ಲಿ ಇಪಿಐಡಿ ಪರಿಶೀಲನೆಗಾಗಿ 6 ಕೌಂಟರ್ ಗಳು, ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಲು 10 ಕೌಂಟರ್ ಗಳು, ಪರಿಶೀಲನೆ (Verification) ಹಾಗೂ ಅನುಮೋದನೆಗಾಗಿ 10 ಕೌಂಟರ್ ಗಳನ್ನು ಸ್ಥಾಪಿಸಲಾಗಿತ್ತು. 40ಕ್ಕೂ ಹೆಚ್ಚು ಲ್ಯಾಪ್ ಟಾಪ್‌ಗಳ ಬಳಕೆಯ ಮೂಲಕ ಬರುವ ನಾಗರಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಇ-ಖಾತಾ ಮಾಡಿಕೊಡಲು ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಹೀಗಾಗಿ ತ್ವರಿತವಾಗಿ ಇ-ಖಾತಾ ವಿತರಣೆ ಅವಕಾಶ ದೊರೆಯಿತು.
ಮುಂದುವರಿಯುತ್ತೆ ಇ-ಖಾತಾ ಮೇಳ: ಗುಡ್‌ನ್ಯೂಸ್
ಬೃಹತ್ ಇ-ಖಾತಾ ಮೇಳದಲ್ಲಿ 485 ಮಂದಿಗಳಿಗೆ ಟೋಕನ್ ನೀಡಲಾಗಿದೆ. 300 ಅರ್ಜಿಗಳನ್ನು ಅನುಮೋದಿಸಿ ಸ್ಥಳದಲ್ಲಿಯೇ ಅಂತಿಮ ಇ-ಖಾತಾ ನೀಡಲಾಗಿದೆ. ಉಳಿದವರ ದಾಖಲೆ ಪರಿಶೀಲನೆ ಹಾಗೂ ಅನುಮೋದನೆಯ ಪ್ರಕ್ರಿಯೆ ಮುಂದುವರೆಯುತ್ತಿದೆ. ಹೆಚ್ಚಿನ ಜನರಿಗೆ ಇ-ಖಾತಾ ಮೇಳದ ಪ್ರಯೋಜನವನ್ನು ತಲುಪಿಸುವ ನಿಟ್ಟಿನಲ್ಲಿ ಸದರಿ ಸ್ಥಳದಲ್ಲಿಯೇ ನಾಳೆಯೂ ಕೂಡ ಇ-ಖಾತಾ ಮೇಳವನ್ನು ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಬಿಟಿಎಂ ಲೇಔಟ್‌ನಲ್ಲೂ ಇ-ಖಾತಾ ಅಭಿಯಾನ
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತಿನಿಧಿಸುವ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಜುಲೈ ಎರಡನೇ ವಾರದಿಂದಲೇ ಇ-ಖಾತಾ ಅಭಿಯಾನ ಆರಂಭಿಸಲಾಗಿತ್ತು. ವಿವಿಧ ವಾರ್ಡ್‌ಗಳ ಅರ್ಹ ನಿವಾಸಿಗಳಿಗೆ ಅರ್ಜಿ ಸ್ವೀಕರಿಸಿ ಅಂತಿಮ ಇ-ಖಾತಾ ನೀಡಲಾಯಿತು. ಯಾರೆಲ್ಲ ಆಸ್ತಿ, ನಿವೇಶನ ಹೊಂದಿರುವ ಮಾಲೀಕರು ತಪ್ಪದೇ ಇ-ಖಾತಾ ಪಡೆಯಬೇಕು. ಇದರಿಂದ ಕಟ್ಟಡ ನೆಕ್ಷೆ, ಆಸ್ತಿ ಮಾರಾಟ, ಖರೀದಿ ಹಾಗೂ ಇನ್ನಿತರ ದಾಖಲೆ ಪತ್ರ ವ್ಯವಹಾರದಲ್ಲಿ ವಂಚನೆ ಒಳಗಾಗುವುದು ತಪ್ಪುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.












Click it and Unblock the Notifications